ಬಿಡಿಎ ಮೇಲೆ ಬಾಲಕೃಷ್ಣ ಕಣ್ಣು ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಡಿಸಲು ಡಿ.ಕೆ.ಸೋದರರ ರಾಜಕೀಯ ನಡೆ

balakrishna
Published on

ರಾಮನಗರ: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಡಿಎ ಅಧ್ಯಕ್ಷ ಸ್ಥಾನದ ಮೇಲೆ ಶಾಸಕ ಎಚ್.ಸಿ. ಬಾಲಕೃಷ್ಣ  ಕಣ್ಣಿಟ್ಟಿದ್ದು,  ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಡಿಸಲು ನಿಟ್ಡಿನಲ್ಲಿ ಡಿ.ಕೆ.ಸಹೋದರರು ತಮ್ಮ ಯತ್ನವನ್ನು ನಡೆಸಿದ್ದಾರೆ.

ಐದನೇ ಬಾರಿಗೆ ಶಾಸಕನಾಗಿರುವ ನನಗೆ ಈ ಬಾರಿ ಡಿ.ಕೆ.ಸೋದರರು ಪ್ರಭಾವ ಬಳಸಿ ಸಚಿವ ಸ್ಥಾನ ಕೊಡಿಸುತ್ತಾರೆ ಎಂಬ ಕನಸು ಕಂಡಿದ್ದ ಬಾಲಕೃಷ್ಣ ಅವರು ಚುನಾವಣೆ ಫಲಿತಾಂಶ ಪ್ರಕಟಗೊಂಡ ಮರು ದಿನವೇ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಜತೆ ದೆಹಲಿಗೆ ತೆರಳಿದ್ದರು.

ಆದರೆ, ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗದೆ ಹೋದರೂ ನಂತರ ಸಿಗುತ್ತದೆ ಎಂದು ವಿಶ್ವಾಸ ಹೊಂದಿದ್ದರು. ಎರಡನೇ ಪಟ್ಟಿಯಲ್ಲೂ ಹೆಸರಿಲ್ಲದ ಕಾರಣ ಸಚಿವನಾಗುವುದು ನನ್ನ ಹಣೆಯಲ್ಲಿ ಬರೆದಿಲ್ಲ. ಸಚಿವ ಸ್ಥಾನ ಸಿಕ್ಕರೆ ರಾಜ್ಯ ಸೇವೆ, ಇಲ್ಲದಿದ್ದರೆ ಕ್ಷೇತ್ರ ಸೇವೆ ಎಂದು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ತಾಲೂಕು ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಇತ್ತೀಚೆಗೆ ತಾಲೂಕು ಮುಳುಕಟ್ಟಮ್ಮನ ಪಾಳ್ಯದ ಮನೆದೇವರು ಮುಳುಕಟ್ಟಮ್ಮ ದೇವಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪೂಜೆ ಸಲ್ಲಿಸಲು ಬಂದಿದ್ದ ವೇಳೆ ಮುಂದಿನ ದಿನಗಳಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಸಚಿವರಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಇದೇ ಸಂದರ್ಭದಲ್ಲಿ ಬಾಲಕೃಷ್ಣ ಅವರು ಪರಮೇಶ್ವರ್ ಜತೆ ಇರುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಅವರು ಬಾಲಕೃಷ್ಣ ಅವರನ್ನು ಕೆಎಂಫ್ ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬಾಲಕೃಷ್ಣ ಅವರಿಗೆ ಸಚಿವ ಸ್ಥಾನವಂತೂ ಸಿಗಲಿಲ್ಲ, ಯಾವುದಾದರೂ ನಿಗಮ ಮಂಡಳಿ ನೀಡುವಂತೆ ಸಚಿವ ಚೆಲುವರಾಯಸ್ವಾಮಿ, ಜಮೀರ್ ಅಹಮದ್, ರಾಜಣ್ಣ ಸೇರಿ ಹತ್ತು ಶಾಸಕರು ಕಾಂಗ್ರೆಸ್ ವರಿಷ್ಠರು ಮತ್ತು ಸಿಎಂ, ಡಿಸಿಎಂ, ಸಂಸದ ಡಿ.ಕೆ. ಸುರೇಶ್ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಇದರಿಂದ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.

ಶಾಸಕ ಎಚ್.ಸಿ. ಬಾಲಕೃಷ್ಣ ಪ್ರಭಾವಿ ಶಾಸಕರಾಗಿದ್ದು, ಜಿಲ್ಲೆಯ ನಾಡಿಮಿಡಿತ ಹಾಗೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಡಿ.ಕೆ. ಶಿವಕುಮಾರ್ ಅವರೇ ಜಿಲ್ಲೆಯ ಉಸ್ತುವಾರಿ ಆಗುವುದು ಬಹುತೇಕ ಖಚಿತ. ಹಾಗಾದಾಗ ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಪ್ರವಾಸದಲ್ಲಿ ಹೆಚ್ಚು ತೊಡಗಬೇಕಾಗುತ್ತದೆ. ಈ ಸಮಯದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಜಿಲ್ಲೆಯಲ್ಲಿ ಅಧಿಪತ್ಯ ಕಟ್ಟಿಕೊಂಡರೆ ಮುಂದೆ ನಮ್ಮ ರಾಜಕೀಯಕ್ಕೆ ಹೊಡೆತ ಉಂಟಾಗಲಿದೆ ಎಂದು ಅರಿತಿರುವ ಡಿ.ಕೆ. ಸೋದರರು ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬಿಡಿಎ ಮೇಲೆ ಕಣ್ಣು:  ಡಿ.ಕೆ.ಸಹೋದರರು ಬಾಲಕೃಷ್ಣ ಅವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಡಿಸುವ ಯತ್ನದಲ್ಲಿ ಇದ್ದರೂ ಪ್ರಸ್ತುತ ಸನ್ನಿವೇಶದಲ್ಲಿ ಅಷ್ಟು ಸುಲಭಕ್ಕೆ ಅದು ದೊರೆಯುವುದಿಲ್ಲ. ಹಾಲಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಅವಧಿ ಇನ್ನೂ ಒಂದೂವರೆ ವರ್ಷ ಬಾಕಿ ಉಳಿದಿದ್ದು, ಅದಕ್ಕೂ ಮುನ್ನವೇ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ, ಬಾಲಕೃಷ್ಣ ಅವರ ಪ್ರತಿಷ್ಠಾಪನೆ ಅಷ್ಟು ಸುಲಭದ ಮಾತಲ್ಲ. ಇದರ ಬಗ್ಗೆ ಸಂಪೂರ್ಣ ಅರಿವಿರುವ ಬಾಲಕೃಷ್ಣ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಬಳಿಯೂ ಸಹ ಇದೇ ಸ್ಥಾನಕ್ಕೆ ಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ, ಸಚಿವ ಸ್ಥಾನವಂಚಿತ ಬಾಲಕೃಷ್ಣ ಅವರಿಗೆ ಸೂಕ್ತ ಸ್ಥಾನ ಮಾನ ನೀಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿಯೇ ಪ್ರಯತ್ನಗಳು ನಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net