ಬುಡಕಟ್ಟು ಸಮುದಾಯದವರಿಗೆ ತೊಂದರೆ ನೀಡಬೇಡಿ ಅಧಿಕಾರಿಗಳಿಗೆ ಸತ್ಯಶೋಧನಾ ಸಮಿತಿ ಎಚ್ಚರಿಕೆ

IMG-20230724-WA0128
Published on

ಹಾರೋಹಳ್ಳಿ

ಅರಣ್ಯ ಹಕ್ಕು ಕಾಯ್ದೆಯಡಿ ಇರುಳಿಗರಿಗೆ ಹಕ್ಕುಪತ್ರ ನೀಡಲು ವಿಳಂಬವಾಗುತ್ತಿರುವುದರಿಂದ ದೆಹಲಿಯ ಸತ್ಯಶೋಧನಾ ಸಮಿತಿ ಮುಖ್ಯಸ್ಥ ಮತ್ತು ಸುಪ್ರೀಂ ಕೋರ್ಟ್​ ನಿವೃತ್ತ ನ್ಯಾಯಾಧೀಶ ಪ್ರತಾಪ್​ಸಿಂಗ್​ ಪವಾರ್​ ಹಾಗೂ ಸದಸ್ಯರು ತಾಲೂಕಿನ ಬುಡಗಯ್ಯನದೊಡ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇರುಳಿಗರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.

ಬುಡಗಯ್ಯನದೊಡ್ಡಿ ಮತ್ತು ತಟ್ಟೆಕೆರೆ ಬಳಿಯ ಇರುಳಿಗರ ಕಾಲನಿಗೆ ಭೇಟಿ ನೀಡಿದ್ದ ಸಮಿತಿ ಸದಸ್ಯರು, ಅರಣ್ಯದಲ್ಲಿ ಇರುಳಿಗರು ಇರುವ ಕುರುಹುಗಳನ್ನು ಪರಿಶೀಲನೆ ನಡೆಸಿ ಅವರ ಜೀವನ ಕ್ರಮದ ಬಗ್ಗೆ ಅಧ್ಯಯನ ನಡೆಸಿ ಅಲ್ಲಿದ್ದಂತಹ ಇರುಳಿಗರಿಂದಲೇ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ಥಳಿಯ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಬುಡಕಟ್ಟು ಸಮುದಾಯದವರಿಗೆ ಅರಣ್ಯ ಹಕ್ಕು ಕಾಯ್ದೆ ಬಗ್ಗೆ ಅರಿವು ಮೂಡಿಸಿದರು.

ಬುಡಕಟ್ಟು ಸಮುದಾಯದವರು ಹತ್ತಾರು ವರ್ಷಗಳಿಂದ ಇಲ್ಲಿಯೇ ಜೀವನ ನಡೆಸುತ್ತಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಯಾವುದೇ ತೊಂದರೆ ನೀಡಬಾರದು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಮಿತಿ ಸದಸ್ಯರು ಸೂಚನೆ ನೀಡಿದರು. ಬುಡಕಟ್ಟು ಜನಾಂಗದವರು ಎಲ್ಲಿದ್ದಾರೆ, ಹೇಗೆ ಜೀವನ ನಡೆಸುತ್ತಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಸತ್ಯ ಶೋಧನಾ ಸಮಿತಿಯ ಮೂಲಕ ಕಲೆ ಹಾಕುತ್ತಿದ್ದು, ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ ಇರುಳಿಗರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಲಾಗುವುದುಎಂದು ತಿಳಿಸಿದರು.

ಸತ್ಯ ಶೋಧನಾ ಸಮಿತಿ ನಿರ್ದೇಶಕ ಕೆ.ಪಿ ಸಿನ್ಹಾ, ಆಲ್​ ಇಂಡಿಯ ಕೋ ಆರ್ಡಿನೇಟರ್​ ಸಂಜಯ್​ ಕುಲಕರ್ಣಿ, ಬುಡಕಟ್ಟು ಸಮುದಾಯದ ಜಿಲ್ಲಾಧ್ಯ ಮಹದೇವಯ್ಯ, ಪದಾಧಿಕಾರಿಗಳಾದ ರಾಜೇಶ್​, ಶ್ರೀನಿವಾಸ್​, ರಾಜು ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net