

ಹಾರೋಹಳ್ಳಿ (ರಾಮನಗರ)
ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಪಾಠ ಕೇಳುತ್ತಿದ್ದರೆ, ತಾಲೂಕಿನ ಪಿತ್ತ ಕಗ್ಗಲಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ಕುಡಿಯುವ ನೀರು ಹೊರುವ ಬಿಟ್ಟಿ ಭಾಗ್ಯ ದೊರಕಿದೆ.
ಈಗಾಗಲೇ ಜಿಲ್ಲಾದ್ಯಂತ ಶಾಲೆಗಳು ಆರಂಭವಾಗಿದ್ದು, ಮಕ್ಕಳನ್ನು ಹೂನೀಡಿ, ಶಾಲೆಯನ್ನು ಸಿಂಗರಿಸಿ ಶಿಕ್ಷಕರು, ಶಾಲಾ ಸಮಿತಿ ಸದಸ್ಯರು ಸ್ವಾಗತ ಮಾಡುತ್ತಿದ್ದಾರೆ. ಆದರೆ ಕಗ್ಗಲಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಾತ್ರ ಕುಡಿಯುವ ನೀರಿಗೂ ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಜೆ ಮುಗಿಸಿ ಶಾಲೆಗೆ ಆಗಮಿಸಿದ ಮಕ್ಕಳು ಕುಡಿಯುವ ನೀರಿಗಾಗಿ ಪ್ರಾಣ ಪಣಕ್ಕಿಟ್ಟು ರಾಷ್ಟ್ರೀಯ ಹೆದ್ದಾರಿ ದಾಟಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಹಾಗೂ ಮಕ್ಕಳಿಗೆ ಕುಡಿಯುವ ನೀರು ಒದಗಿಸಲು ಆಡಳಿತ ಯಂತ್ರ ವಿಫಲವಾಗಿದೆ.
ಏನಿದು ಸಮಸ್ಯೆ?
ಮಕ್ಕಳು ಈಗಷ್ಟೇ ಬೇಸಿಗೆ ರಜೆಯನ್ನು ಮುಗಿಸಿ ಶಾಲೆಗೆ ಬಂದಿದ್ದಾರೆ. ಆದರೆ ಅಧಿಕಾರಿಗಳು ಪೂರ್ವಸಿಧ್ಧತೆ ಮಾಡಿಕೊಳ್ಳದೇ ಮಕ್ಕಳನ್ನು ಸ್ವಾಗತಿಸಿದ್ದಾರೆ. ಶಾಲೆಯಲ್ಲಿ ನೀರಿನ ಮೋಟರ್ ಕೆಟ್ಟು ಹಲವು ದಿನಗಳೇ ಕಳೆದಿದೆ. ಆದರೆ ಅದರ ದುರಸ್ತಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು ರ್ನಿಲಕ್ಷ್ಯ ತೋರಿದ್ದಾರೆ.
ಹಾಗಾಗಿ ಮಕ್ಕಳೇ ಹೆದ್ದಾರಿ ದಾಟಿ ಬಕೆಟ್, ಬಿಂದಿಗೆಯಲ್ಲಿ ಕುಡಿಯುವ ನೀರನ್ನು ಹೊತ್ತು ತರುತ್ತಿದ್ದಾರೆ. ಕಟ್ಟಡ ಕೆಡವಿರುವುದೇ ನೀರಿನ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಇನ್ನಾದರೂ ಅಧಿಕಾರಿಗಳು ಗಮನಹರಿಸಿ ಶಾಲೆಗೆ ಪಿತ್ತ ಕಗ್ಗಲಹಳ್ಳಿ ಶಾಲೆಗೆ ನೀರಿನ ವ್ಯವಸ್ಥೆ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಶಾಲೆ ಪ್ರಾರಂಭವಾಗಿ ಮೂರು ದಿನ ಕಳೆದರೂ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಒದಗಿಸಿಲ್ಲ. ಮಕ್ಕಳೇ ರಸ್ತೆ ದಾಟಿ ಗ್ರಾಮಕ್ಕೆ ಬಂದು ನೀರು ತರುತ್ತಿದ್ದು, ಅಧಿಕಾರಿಗಳು ಶಾಲೆಗೆ ನೀರು ಒದಗಿಸಲು ವಿಫಲರಾಗಿದ್ದಾರೆ.
ಗಬ್ಬಾಡಿ ಕಾಡೇಗೌಡ, ವಿಎಸ್ಸೆಸ್ಸೆನ್ ನಿರ್ದೇಶಕ, ಕಗ್ಗಲಹಳ್ಳಿ