ತಾಲೂಕು ಕೇಂದ್ರದಲ್ಲಿ ಸಮಸ್ಯೆಗಳೇ ಹೆಚ್ಚು

IMG_20230817_180912_249@13347066 (1)
Published on

ಮೂಲ ಸೌಲಭ್ಯ ವಂಚಿತ ಹಾರೋಹಳ್ಳಿ

ಪಟ್ಟಣ  ರಸ್ತೆ, ಒಳಚರಂಡಿ, ನೀರು ಇಲ್ಲದೆ ಜನತೆ ಆಕ್ರೋಶ

ಜಯರಾಂ ನಾಯಕ್ ಹಾರೋಹಳ್ಳಿ

ಹಾರೋಹಳ್ಳಿ ಅಧಿಕೃತವಾಗಿ ತಾಲೂಕು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಸಾರ್ವಜನಿಕರಿಗೆ ಪ್ರತಿನಿತ್ಯ ಕಿರಿಕಿರಿಯಾಗಿದೆ.

ಗ್ರಾಮ ಪಂಚಾಯಿತಿಯಾಗಿದ್ದ ಹಾರೋಹಳ್ಳಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ ಎರಡು ವರ್ಷ ಕಳೆದರೂ ಮೂಲಸೌಕರ್ಯ ಒದಗಿಸಿಲ್ಲ. ಇಡೀ ಪಟ್ಟಣ ಧೂಳಿನಿಂದ ತುಂಬಿದ್ದು ವಾಹನ ಸವಾರರು, ಸಾರ್ವಜನಿಕರು ಓಡಾಡಲು ಸಮಸ್ಯೆಯಾಗಿದೆ. ಪಟ್ಟಣವನ್ನು ಒಂದು ಸುತ್ತು ಹಾಕಿದರೆ ಬಣ್ಣವೇ ಬದಲಾಗುವಷ್ಟು ಧೂಳಿನಿಂದ ತುಂಬಿದೆ.

ನೀರು, ರಸ್ತೆ, ಒಳಚರಂಡಿ ಇಲ್ಲ

ಪಟ್ಟಣದ ಹಲವು ಬಡಾವಣೆಗಳಲ್ಲಿ ಸುಸಜ್ಜಿತ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಇಲ್ಲದೆ ಜನತೆ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿಗರಿಗೆ ಕಾವೇರಿ ನದಿಯಿಂದ ಕುಡಿಯಲು ನೀರು ಪೂರೈಸುವ ಪೈಪ್‌ಲೈನ್ ಹಾರೋಹಳ್ಳಿ ಮೂಲಕವೇ ಹಾದುಹೋಗಿದ್ದರೂ ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರು ಮರೀಚಿಕೆಯಾಗಿದೆ.

ಗಬ್ಬು ನಾರುತ್ತಿರುವ ಕೆರೆ

ಪಟ್ಟಣದ ಹೃದಯ ಭಾಗದಲ್ಲಿರುವ ದೊಡ್ಡಕೆರೆಗೆ ಕೊಳಚೆ ನೀರು ಸೇರುತ್ತಿದ್ದು, ಜತೆಗೆ ಕೆಲವರು ತ್ಯಾಜ್ಯ ಸುರಿಯುತ್ತಿದ್ದು, ಕೆರೆ ಸಂಪೂರ್ಣವಾಗಿ ಮಲಿನವಾಗಿದ್ದು ಗಬ್ಬುನಾರುತ್ತಿದೆ. ಕೆರೆ ಹತ್ತಿರ ಸುಳಿಯಲು ಆಗದಷ್ಟೂ ದುರ್ವಾಸನೆ ಬೀರುತ್ತಿದೆ.

ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ

ಪಟ್ಟಣದಲ್ಲಿ ದ್ವಿಚಕ್ರ ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಪಾರ್ಕಿಂಗ್ ಜತೆಗೆ ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಪ್ರತಿದಿನ ಬೆಂಗಳೂರಿಗೆ ಕೆಲಸಕ್ಕೆ ಹೋಗುವವರು ಪಟ್ಟಣ ಪಂಚಾಯಿತಿ, ಚಾಮುಂಡೇಶ್ವರಿ ದೇವಸ್ಥಾನ ಸೇರಿ ವಿವಿಧೆಡೆ ವಾಹನಗಳನ್ನು ಬೇಕಾಬಿಟ್ಟಿ ನಿಲುಗಡೆ ಮಾಡುತ್ತಿದ್ದು, ಪಾದಚಾರಿಗಳಿಗೆ ಓಡಾಡಲು ಸಮಸ್ಯೆಯಾಗಿದೆ.

ಜನಪ್ರತಿನಿಧಿಗಳಿಂದ ಕೆಲಸವಾಗಿಲ್ಲ

ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ, ಜತೆಗೆ ಅನಿತಾ ಕುಮಾರಸ್ವಾಮಿ ಕ್ಷೇತ್ರದ ಶಾಸಕರಾಗಿದ್ದರೂ, ಬಿಜೆಪಿ ಸರ್ಕಾರದಲ್ಲಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವರಾಗಿದ್ದರೂ, ಕಾಂಗ್ರೆಸ್ ಡಿ.ಕೆ. ಸುರೇಶ್ ಸಂಸದರಾಗಿದ್ದರೂ ಯಾರೂ ಪಟ್ಟಣಕ್ಕೆ ಮೂಲಸೌಕರ್ಯ ಒದಗಿಸಲಿಲ್ಲ. ಹಾರೋಹಳ್ಳಿ ಪಟ್ಟಣ ಬೆಂಗಳೂರಿಗೆ ಸಮೀಪದಲ್ಲಿದ್ದರೂ ಅಭಿವೃದ್ಧಿ ವಂಚಿತವಾಗಿದೆ. ಜನಪ್ರತಿನಿಧಿಗಳು ಕೇವಲ ಭರವಸೆಗಳನ್ನು ನೀಡಿದರೇ ವಿನಃ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಹಾಲಿ ಶಾಸಕ ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ಅವರಾದರೂ ಪಟ್ಟಣದ ಅಭಿವೃದ್ಧಿ ಗಮನಹರಿಸುವವರೇ ಕಾದುನೋಡಬೇಕಿದೆ.

ಹಾರೋಹಳ್ಳಿ ಪಟ್ಟಣದಲ್ಲಿ ಮೂಲಸೌಕರ್ಯ ಸಮಸ್ಯೆಯಿದ್ದು, ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕೂಡಲೇ ತಾಲೂಕು ಆಡಳಿತ  ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮೂಲಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು.

 ಶೇಷಾದ್ರಿ, ರಾಮು

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ತಿಂಗಳಾಗಿದೆ. ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಎಲ್ಲವನ್ನೂ ಹಂತ ಹಂತವಾಗಿ ಬಗೆಹರಿಸಲಾಗುವುದು. ಆದ್ಯತೆ ಮೇಲೆ ಮೂಲಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

 ನಟರಾಜು, ಮುಖ್ಯಾಧಿಕಾರಿ, ಹಾರೋಹಳ್ಳಿ ಪಪಂ

ಈಗಾಗಲೇ ಹಾರೋಹಳ್ಳಿ ಪಟ್ಟಣಕ್ಕೆ ಬೇಕಾಗಿರುವ ಮೂಲಸೌಲಭ್ಯ ಹಾಗೂ ಕಾಮಗಾರಿಗಳ ಬಗ್ಗೆ ಒಳಚರಂಡಿ ಕುಡಿಯುವ ನೀರಿನ ಸಂಬಂಧ ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ  ಕಾರ್ಯರೂಪಕ್ಕೆ ಬರಲಿದೆ.

 ವಿಜಯಣ್ಣ, ತಹಸೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ

ಹಾರೋಹಳ್ಳಿಯಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುವವರು ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುತ್ತಿದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳ ಜತೆ ಚರ್ಚಿಸಿ ವಾಹನ ನಿಲ್ಲಿಸಲು ಪ್ರತ್ಯೇಕ ಜಾಗ ಗುರುತಿಸಲು ಪರಿಶೀಲನೆ ನಡೆಸಲಾಗುತ್ತಿದೆ. ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು.

 ಅರ್ಜುನ್, ಸಿಪಿಐ ಹಾರೋಹಳ್ಳಿ ಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net