

ಹಾರೋಹಳ್ಳಿ (ರಾಮನಗರ)
ಪರವಾನಗಿ ಪಡೆಯದೆ ಹಳ್ಳಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಖಾನೆ ಮೇಲೆ ಜಿಲ್ಲಾ ಪರಿಸರ ಅಧಿಕಾರಿ ಮಂಜುನಾಥ್ ಮಂಗಳವಾರ ದಾಳಿ ಮಾಡಿ, ತೆರವುಗೊಳಿಸಲು ಒಂದು ವಾರದ ಗಡುವು ನೀಡಿದ್ದಾರೆ.
ಬನವಾಸಿ ಗ್ರಾಪಂ ವ್ಯಾಪ್ತಿಯ ಅರೆಗಡಕಲ್ಲು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಹೆಸರಿಲ್ಲದ ಕಾರ್ಖಾನೆ ಮೇಲೆ ದಾಳಿ ನಡೆಸಿದ ಪರಿಸರ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಪರವಾನಗಿ ಇಲ್ಲದಿದ್ದರೂ ವಿದ್ಯುತ್: ಕಾರ್ಖಾನೆ ಪರವಾನಗಿ ಪಡೆಯದಿದ್ದರೂ ಬೆಸ್ಕಾಂ ಅಧಿಕಾರಿಗಳು ನಿರಂತರ ವಿದ್ಯುತ್ ಸಂಪರ್ಕ ಒದಗಿಸಿರುವುದು ದಾಳಿ ವೇಳೆ ಕಂಡು ಬಂದಿದೆ. ಬ್ಯಾಟರಿಯಲ್ಲಿ ಬರುವ ಲೆಡ್ ತೆಗೆದು, ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿ ಸ್ಥಳೀಯರ ಸಹಕಾರ ಪಡೆದು ಅಕ್ರಮದಲ್ಲಿ ತೊಡಗಿದ್ದ ಎನ್ನಲಾಗಿದೆ.
ರಾತ್ರಿ ವೇಳೆ ಕಾರ್ಯಾಚರಣೆ: ಕಾರ್ಖಾನೆಯು ಹಗಲಿನ ವೇಳೆ ಕಾರ್ಯನಿರ್ವಹಿಸಿದರೆ ಜಗಜ್ಜಾಹೀರಾಗಲಿದೆ ಎಂಬುದನ್ನು ಅರಿತಿದ್ದ ದಂಧೆಕೋರರು, ರಾತ್ರಿ ವೇಳೆ ಕಾರ್ಯಾಚರಣೆ ನಡೆಸುತ್ತಿದ್ದು, ಕರ್ಕಶ ಶಬ್ದ ಕೇಳಿ ಬರುತ್ತಿತ್ತು. ಸ್ಥಳೀಯರೊಬ್ಬರು ಜಿಲ್ಲಾ ಪರಿಸರ ಅಧಿಕಾರಿ ಮಂಜುನಾಥ್ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಕಾರ್ಖಾನೆ ಬಂದ್ ಮಾಡಿದ್ದಾರೆ.
ರಾಜಕಾರಣಿಗಳ ಕೃಪಾಕಟಾಕ್ಷ: ಕಾರ್ಖಾನೆಗೆ ರಾಜಕಾರಣಿಗಳ ಕೃಪಾಕಟಾಕ್ಷ ಇದ್ದು, ಏನೇ ತೊಂದರೆ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ರಾಜಕೀಯ ಪುಡಾರಿಗಳು ಅಭಯ ನೀಡಿದ್ದ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಯಾರ ಭಯವೂ ಇಲ್ಲದೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಸ್ಥಳೀಯರೊಬ್ಬರು ನೀಡಿದ ಮಾಹಿತಿ ಆಧರಿಸಿ ಇಲ್ಲಿ ದಾಳಿ ನಡೆಸಲಾಗಿದ್ದು, ಕಾರ್ಖಾನೆಗೆ ಯಾವುದೇ ರೀತಿಯ ಪರವಾನಗಿ ನೀಡಿಲ್ಲ. ಪರವಾನಗಿ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಮಾಲೀಕರಿಗೆ ಮತ್ತು ಅಕ್ರಮ ಕಾರ್ಖಾನೆ ನಡೆಸಲು ಅನುಮತಿ ನೀಡಿದ ಸ್ಥಳೀಯರಿಗೆ ಜಾಗ ಖಾಲಿ ಮಾಡಲು ಗಡುವು ನೀಡಲಾಗಿದೆ.
ಮಂಜುನಾಥ್, ಜಿಲ್ಲಾ ಪರಿಸರ ಅಧಿಕಾರಿ ರಾಮನಗರ