ಧಾರ್ಮಿಕ ಆಚರಣೆಗಳೇ ಭಾರತೀಯರ ಜೀವಾಳ ಸುಬ್ರಹ್ಮಣ್ಯ ಭಟ್ ಹೇಳಿಕೆ ಹಾರೋಹಳ್ಳಿ ಬ್ರಾಹ್ಮಣ ಸೇವಾ ಸಂಘದ ವಾರ್ಷಿಕೋತ್ಸವ

IMG-20230724-WA0173
Published on

ಹಾರೋಹಳ್ಳಿ

ಭಾರತೀಯ ಪರಂಪರೆಯು ಅತ್ಯಂತ ಶ್ರೇಷ್ಠವಾಗಿದ್ದು, ಧರ್ಮದ ಆಧಾರದ ಮೇಲೆ ಭಾರತ ನಿಂತಿದೆ. ಧಾರ್ಮಿಕ ಆಚರಣೆಗಳೇ ಭಾರತೀಯರ ಜೀವಾಳ ಎಂದು ಬೆಂಗಳೂರಿನ ಶಂಕರಮಠದ ಮುಖ್ಯಸ್ಥರಾದ ಸುಬ್ರಹ್ಮಣ್ಯ ಭಟ್ ತಿಳಿಸಿದರು.

ಪಟ್ಟಣದ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಮಠದಲ್ಲಿ ಹಾರೋಹಳ್ಳಿ ಬ್ರಾಹ್ಮಣ ಸೇವಾ ಸಂಘದ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಪ್ರಯುಕ್ತ  ನಡೆದ ಸಹಸ್ರಮೋದಕಗಣ ಹೋಮದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿ, ಭಾರತದ ಸಂಸ್ಕೃತಿ, ಧರ್ಮ ವಿಶ್ವದಲ್ಲೇ ಶ್ರೇಷ್ಠವಾಗಿದ್ದು ಅದರ ಉಳಿವಿಗಾಗಿ ಎಲ್ಲರೂ ಟೊಂಕ ಕಟ್ಟಿ ನಿಲ್ಲಬೇಕಾಗಿದೆ ಎಂದು ಹೇಳಿದರು.

ಬೆಂಗಳೂರಿನ ಶಂಕರಮಠದ ಅರುಣ್ ಕುಮಾರ್ ಮಾತನಾಡಿ, ಪಟ್ಟಣದ ಜನತೆಗೆ ಶ್ರೀಮಠದಿಂದ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹಾರೋಹಳ್ಳಿ ಹಿರಿಯ ವಿಪ್ರ ದಂಪತಿ ಪದ್ಮ ಹಾಗೂ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರದಲ್ಲಿ ಡಾ.ಅನನ್ಯ ಕಾದಂಬಿನಿ, ಡಾ. ಕೃತಿಭಟ್, ಸುಪ್ರಿಯ, ಅಮೂಲ್ಯ ಅವರನ್ನು ಸನ್ಮಾನಿಸಲಾಯಿತು. ಸಹಸ್ರ ಮೋದಕ ಗಣ ಹೋಮದ ನೇತೃತ್ವವನ್ನು ಬೆಂಗಳೂರಿನ ವಿಶ್ವೇಶ್ವರ ಸೋಮಯಾಜಿ ವಹಿಸಿದ್ದರು. ಸಂಘದ ಅಧ್ಯಕ್ಷ ಧನಂಜಯ, ನಿರ್ದೇಶಕ ಗಣಪತಿ ಭಟ್, ಕಾರ್ಯದರ್ಶಿ ಮಾರುತೀಶ್, ನಿರ್ದೇಶಕ ಶಂಕರ್ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net