

ಹಾರೋಹಳ್ಳಿ (ರಾಮನಗರ)
ಭಾರತದ ಸಂಸ್ಕೃತಿ ಶ್ರೀಮಂತವಾಗಿದ್ದು ವಿಶ್ವಕ್ಕೆ ಮಾದರಿಯಾಗಿದೆ ಎಂದು ಅಮೇರಿಕಾ ದೇಶದ ಮಿಟ್ಟಿ ಶಾಲೆಯ ವಿದ್ಯಾರ್ಥಿಗಳ ಕೋಚ್ ಜಾನ್ ಪ್ರಶಂಸೆ ವ್ಯಕ್ತಪಡಿಸಿದರು.
ಹಾರೋಹಳ್ಳಿ ತಾಲೂಕಿನ ಪಡುವಣಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಅಧ್ಯಯನ ಪ್ರವಾಸಕ್ಕಾಗಿ ವಿದ್ಯಾರ್ಥಿಗಳ ಜತೆ ಆಗಮಿಸಿರುವ ಅವರು ಶಾಲೆ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿ ಗಿಡಗಳನ್ನು ನೆಟ್ಟು ಮಾತನಾಡಿದರು.
ಭಾರತೀಯರಿಗೆ ಶಿಕ್ಷಣ ಮತ್ತು ಸಂಸ್ಕೃತಿ ಬಗ್ಗೆ ಇರುವ ಕಾಳಜಿ ವಿಭಿನ್ನವಾಗಿದೆ. ಇಲ್ಲಿನ ಸಂಸ್ಕೃತಿಯ ಬಗ್ಗೆ ನಮಗೆ ಅಪಾರ ಗೌರವವಿದೆ ಹಾಗೂ ಇಲ್ಲಿನ ವಾತಾವರಣ ಇಷ್ಟವಾಗಿದೆ ಎಂದರು.
ವಿದ್ಯಾನಿಕೇತನ ಟ್ರಸ್ಟ್‌ನ ನಾಗರಾಜು ಮಾತನಾಡಿ, ಅಮೆರಿಕಾದ ಮಿಟ್ಟಿ ಶಾಲೆಯ ವಿದ್ಯಾರ್ಥಿಗಳು ಭಾರತದ ಅದರಲ್ಲೂ ಕರ್ನಾಟಕದ ಶಾಲೆ, ವಿದ್ಯಾರ್ಥಿಗಳ ಬಗ್ಗೆ ಹಾಗೂ ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಅಧ್ಯಯನ ನಡೆಸಲು ಬಂದಿರುವುದು ಖುಷಿಯ ವಿಚಾರ ಎಂದರು. ವಿದ್ಯಾರ್ಥಿಗಳು ಪರಿಸರದ ಬಗ್ಗೆ ಅರಿವು ಹೊಂದಿ ಜ್ಞಾನ ಸಂಪಾದಿಸಿ ಆರ್ಥಿಕವಾಗಿ ಸದೃಢರಾಗುವ ಹಾಗೂ ಸಮಾಜದ ಮುಖ್ಯವಾಹಿನಿಗೆ ಬರುವ ಜತೆಗೆ ಗುರಿ ಸಾಧಿಸುವತ್ತ ಮುನ್ನಡೆಯಬೇಕು ಎಂದರು.
ಅಮೇರಿಕ ವಿದ್ಯಾರ್ಥಿಗಳಿಗೆ ಬೀಜದ ಉಂಡೆಗಳನ್ನು ತಯಾರಿಸಿ ಪ್ರಕೃತಿಯಲ್ಲಿ ಹೇಗೆ ಬಿತ್ತಬೇಕು ಎನ್ನುವ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು. ವಿದ್ಯಾರ್ಥಿಗಳು ಸಹ ಆಸಕ್ತಿಯಿಂದ ಬೀಜದ ಉಂಡೆಗಳನ್ನು ತಯಾರಿಸಿ ಸಸಿಗಳನ್ನು ನೆಟ್ಟು ಗೊಬ್ಬರ ನೀರು ಎರೆದರು. ಶಾಲಾ ಮಕ್ಕಳು ನುಡಿಸಿದ ಸಂಗೀತಕ್ಕೆ ವಿದೇಶಿ ವಿದ್ಯಾರ್ಥಿಗಳು ತಲೆಬಾಗಿದರು.
ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಹಾರೋಹಳ್ಳಿ ಚಂದ್ರು, ದಲಿತ ಸೇನೆ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ಟ್ರಸ್ಟ್ನ ರಂಜಿತ್, ಸೌಮ್ಯ, ನಾಗೇಂದ್ರ, ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.