ಸರ್ಕಾರದ ಯೋಜನೆಗಳ ಸದ್ಬಳಕೆಗೆ ಕರೆ ಹಕ್ಕಿಪಿಕ್ಕಿ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಎಂದ ಗಾಣಕಲ್ ನಟರಾಜ್

Rmgm-Ph-001-Adivasi Dinacharane-Hakkipikki Adivasi-Ambedker Bhavan Rmgm- Udgatane-18-7-2023
Published on

ರಾಮನಗರ

ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಏಳಿಗೆಗಾಗಿ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು, ಹಲವು ಯೋಜನೆಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜ್ ತಿಳಿಸಿದರು.

ರಾಮನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ ಮತ್ತು ಪ್ರಥಮ ವರ್ಷದ ಆದಿವಾಸಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸಮುದಾಯಗಳ ಅಭಿವದ್ದಿಗಾಗಿ ಸರ್ಕಾರ ಜಾರಿ ಮಾಡಿರುವ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಕರೆ ನೀಡಿದರು.

ಸಮಿತಿಯ ಕುಮುದಾ ಮಾತನಾಡಿ, ಹಕ್ಕಿಪಿಕ್ಕಿಯ ಸಮುದಾಯದವರು ಜಾಗೃತರಾಗಬೇಕು. ಸರ್ಕಾರದ ಯೋಜನೆಗಳ ಮಾಹಿತಿ ತಿಳಿದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈಗಲೂ ಹಕ್ಕಿಪಿಕ್ಕಿ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಸಮುದಾಯದವರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದರು.

ವಿದೇಶ ವ್ಯಾಪಾರಕ್ಕೆ ಪರವಾನಗಿ

ಸಮಿತಿ ರಾಜ್ಯಾಧ್ಯಕ್ಷ ಜಗ್ಗು ಮಾತನಾಡಿ, ಹಕ್ಕಿಪಿಕ್ಕಿ ಅಲೆಮಾರಿ ಜನರಿಗೆ ಮನೆ, ಹಕ್ಕುಪತ್ರ, ಉಳುಮೆಗೆ ಜಮೀನು ಮತ್ತಿತರ ಮೂಲಸೌಕರ್ಯ ಕಲ್ಪಿಸಬೇಕು. ಸಮಾಜಕ್ಕೆ ರಾಜಕೀಯ, ಸಾಮಾಜಿಕ ಪ್ರಾತಿನಿಧ್ಯ ನೀಡಬೇಕು. ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಹಕ್ಕಿಪಿಕ್ಕಿ ಅಲೆಮಾರಿ ಸಮುದಾಯದವರಿದ್ದಾರೆ. ಸಮುದಾಯದ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಬೇಕು. ಗಿಡಮೂಲಿಕೆ ಔಷಧವನ್ನು ವಿದೇಶಗಳಿಗೆ ಹೋಗಿ ಮಾರಾಟ ಮಾಡಲು ಪರವಾನಗಿ ನೀಡಬೇಕು. ಸಮುದಾಯದವರು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು ಬಿಟ್ಟರೆ ದೊಡ್ಡ ರಾಜಕೀಯ ಸ್ಥಾನಕ್ಕೆ ಏರಿಲ್ಲ. ಹೀಗಾಗಿ ನಮಗೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದರು.

ಡಿಎಸ್‌ಎಸ್ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಪಿ. ಪುನೀತ್ ರಾಜ್, ಸಂಯೋಜಕ ವಿನಯ್, ಹಕ್ಕಿಪಿಕ್ಕಿ ಸಮುದಾಯದ ಮುಖಂಡರಾದ ಶಿವಣ್ಣ, ಐಗನ್, ಗುರುವಯ್ಯ, ಚಂದ್ರಶೇಖರ್, ಹರೀಶ್, ಇಮಾನ್, ವಾಗಿನ್, ಶಾಂತರಾಜು, ಸಿದ್ದರಾಜು, ಗೋಪಿ, ಕಾಮರಾಜ್, ಜೇಕು, ಶ್ರೀಕಾಂತ್, ದಿಲೀಪ್, ಯೋಗೇಶ್ವರಿ, ರಾಜೇಶ್ವರಿ, ಇರುಳಿಗ ಸಮುದಾಯದ ಮಹದೇವಯ್ಯ, ಎಸ್. ರಾಜು ಇರುಳಿಗ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net