

ರಾಮನಗರ
ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ನಿಯೋಜಿಸಿರುವ ವಿವಿಧ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ನೋಂದಣಿ ಮಾಡಲು ಹಣಕ್ಕೆ ಬೇಡಿಕೆ ಇಡುತ್ತಿರುವುದು ವರದಿಯಾಗಿವೆ.
ಜು.19ರಿಂದ ರಾಜ್ಯಾದ್ಯಂತ ಏಕ ಕಾಲಕ್ಕೆ ಗೃಹಲಕ್ಷ್ಮೀ ಯೋಜನೆಯನ್ನು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಆನ್‌ಲೈನ್ ನೋಂದಣಿ ಮಾಡಿಕೊಡಲಾಗುತ್ತದೆ. ಯಾವುದೇ ಕಾರಣಕ್ಕೂ ನೋಂದಣಿಗೆ ಹೋಗುವ ಮಹಿಳೆಯರು ಹಣ ಕಟ್ಟುವಂತಿಲ್ಲ. ಹಣ ಕೊಡುವಂತೆಯೂ ಕೇಳುವಂತೆಯೂ ಇಲ್ಲ ಎಂದು ಸರ್ಕಾರ ಹೇಳಿದೆ.
ಆದರೆ, ಸರ್ಕಾರ ಆದೇಶವನ್ನು ಗಾಳಿಗೆ ತೂರಿರುವ ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರದ ಸಿಬ್ಬಂದಿ ನೋಂದಣಿಗೆ ತೆರಳುವ ಮಹಿಳೆಯರ ಬಳಿ 30-50 ರೂ.ಗಳವರೆಗೂ ಹಣಕ್ಕೆ ಬೇಡಿಕೆ ಇಡುತ್ತಾರೆ. ಸರ್ಕಾರ ಉಚಿತವಾಗಿ ಮಾಡಿಕೊಡುವಂತೆ ಹೇಳಿದೆಯಲ್ಲ ಎಂದರೂ, ಇದಕ್ಕೆ ತಮಗೆ ಬೇಕಾದರೆ ಮಾಡಿಸಿಕೊಳ್ಳಿ, ಬೇಡವಾದರೆ ಬೇಡ ಎನ್ನುವ ಉಡಾೆ ಉತ್ತರವನ್ನು ನೀಡುತ್ತಿದ್ದಾರೆ.
ಆ.15ರಿಂದ ಮನೆಯ ಯಜಮಾನಿಯ ಖಾತೆಗೆ 2 ಸಾವಿರ ರೂ.ಬರಲಿದೆ ಎಂದು ಸರ್ಕಾರ ಹೇಳಿರುವ ಹಿನ್ನೆಲೆಯಲ್ಲಿ, ಅದು ತಪ್ಪಿ ಹೋಗುವ ದಾವಂತದಲ್ಲಿ ಮಹಿಳೆಯರೂ ಕೇಳಿದಷ್ಟು ಹಣ ಕೊಟ್ಟು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.
ಗಮನ ಹರಿಸಲ್ಲಿ: ಯೋಜನೆ ಜಾರಿಗೆ ಬಂದು ಎರಡು ದಿನಗಳು ಕಳೆದಿದ್ದರೂ ಸೇವಾ ಕೇಂದ್ರಗಳಲ್ಲಿ ಏನೆಲ್ಲ ಚಟುವಟಿಕೆಗಳು ನಡೆಯುತ್ತಿವೆ ಎನ್ನುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಗಮಿನಿಸುತ್ತಿಲ್ಲ ಎನ್ನುವ ಆರೋಪವೂ ಇದೆ. ಈಗಾಗಲೇ ಸರ್ವರ್ ಸಮಸ್ಯೆಯೂ ಎದುರಾಗಿದ್ದು, ಇದನ್ನೆ ಬಂಡವಾಳ ಮಾಡಿಕೊಂಡು ಕೆಲವರು ನಿಮಗೆ ನೋಂದಣಿ ಮಾಡಿಕೊಡುತ್ತೇವೆ ಎಂದು ಹಣ ಕೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೋಂದಣಿಗೆ ಹಣ ಕೇಳುತ್ತಿರುವುದಕ್ಕೆ ಕಡಿವಾಣ ಹಾಕಬೇಕಿದೆ.
ಗೃಹಲಕ್ಷ್ಮೀ ಯೋಜನೆ ನೋಂದಣಿ ಉಚಿತವಾಗಿದ್ದು, ಯಾವುದೇ ಕಾರಣಕ್ಕೂ ಯಾರೂ ಹಣ ಕೊಡಬೇಕಾಗಿಲ್ಲ. ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದರೆ ಕಂಡಿತವಾಗಿ ಅಂತವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಿದೆ.
ಬಿ.ಸಿ.ಶಿವಾನಂದ ಮೂರ್ತಿ, ಅಪರ ಜಿಲ್ಲಾಧಿಕಾರಿ
ಗೃಹಲಕ್ಷ್ಮೀ ಯೋಜನೆ ನೋಂದಣಿ ಉಚಿತ ಎಂದಿದ್ದರೂ ಸೇವಾ ಕೇಂದ್ರಗಳಲ್ಲಿ ಮಹಿಳೆಯರಿಂದ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ಮಾಡಿ, ಸರ್ಕಾರದ ಯೋಜನೆ ಸಮರ್ಪಕ ಜಾರಿಗೆ ಮುಂದಾಗಬೇಕು.
ಗಾಣಕಲ್ ನಟರಾಜ್, ತಾಪಂ ಮಾಜಿ ಅಧ್ಯಕ್ಷ