

ರಾಮನಗರ
ಗೃಹಲಕ್ಷ್ಮಿ ಯೋಜನೆಯಲ್ಲಿ ಹೆಸರು ನೋಂದಣಿ ಮಾಡಲು ಸೋಮವಾರ ಬೆಳಗ್ಗೆಯೇ ನಗರದ ನೋಂದಣಿ ಕೇಂದ್ರಗಳ ಎದುರು ಮಹಿಳೆಯರು ಸಾಲುಗಟ್ಟಿ ನಿಂತಿದ್ದು ಕಂಡುಬಂತು.
ಗೃಹಲಕ್ಷ್ಮಿ ಯೋಜನೆಯಲ್ಲಿ ಹೆಸರು ನೋಂದಣಿ ಮಾಡಲು ಅನುಕೂಲವಾಗುವಂತೆ ನಗರದ ಐದು ಸ್ಥಳಗಳಲ್ಲಿ ನಗರಸಭೆ ವ್ಯವಸ್ಥೆ ಮಾಡಿದೆ. ನಗರಸಭೆ ಹಳೇ ಬಸ್ ನಿಲ್ದಾಣದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನ, ವಿಜಯನಗರ ಬಡಾವಣೆಯ ಸಿಶಕ್ತಿ ಭವನ, ನಗರಸಭೆ ಕಚೇರಿ, ಅರ್ಕೇಶ್ವರ ಕಾಲನಿಯ ಸಮುದಾಯ ಭವನ, ಹಾಗೂ ಮಲ್ಲೇಶ್ವರ ಬಡಾವಣೆ ಐಜೂರು ಅಂಗನವಾಡಿ ಕೇಂದ್ರದಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ.
ಪ್ರತಿ ಕೇಂದ್ರದಲ್ಲಿ ನಾಲ್ಕರಿಂದ ಐದು ಜನರನ್ನು ಕೂರಿಸಿ ಮೊಬೈಲ್ ಮೂಲಕ ನೋಂದಣಿ ಮಾಡಲಾಗುತ್ತಿದೆ. ಕಂಪ್ಯೂಟರ್ ಮೂಲಕ ನೋಂದಣಿಗೆ ಸರ್ವರ್ ತೊಡಕಾಗಿದ್ದರಿಂದ ಮೊಬೈಲ್ನಲ್ಲೇ ನೋಂದಣಿ ಪ್ರಕ್ರಿಯೆಗೆ ನಗರಸಭೆ ಮುಂದಾಗಿದೆ. ಐಜೂರು ಅಂಗನವಾಡಿ ಕೇಂದ್ರ, ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆಯೇ ಸರ್ವರ್ ಸಮಸ್ಯೆ ಎದುರಾಯಿತು. ಅಂಬೇಡ್ಕರ್ ಭವನದ ಮುಂಭಾಗ ರಸ್ತೆಯಲ್ಲೂ ಮಹಿಳೆಯರ ಸರತಿ ಸಾಲು ಕಂಡುಬಂತು. ಐಜೂರು ಅಂಗನವಾಡಿ ಕೆಂದ್ರದ ಮುಂಭಾಗ, ಅರ್ಕೇಶ್ವರ ಕಾಲನಿ ಸಮುದಾಯ ಭವನದಲ್ಲಿ ಹೆಚ್ಚು ಮಹಿಳೆಯರು ನೋಂದಣಿಗೆ ಸೇರಿದ್ದರು.
ಗೃಹಲಕ್ಷ್ಮಿ ಯೋಜನೆಗೆ ಹೆಸರು ನೋಂದಾಯಿಸಲು ಅನುಕೂಲವಾಗುವಂತೆ ನಗರದ ಐದು ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸರ್ವರ್ ಸಮಸ್ಯೆ ಇರುವ ಕಾರಣ ಮೊಬೈಲ್ ಮೂಲಕವೇ ನಮ್ಮ ಸಿಬ್ಬಂದಿ ಮಹಿಳೆಯರಿಗೆ ತೊಂದರೆಯಾಗದಂತೆ ನೋಂದಣಿ ಮಾಡುತ್ತಿದ್ದಾರೆ.
ನಾಗೇಶ್, ಪೌರಾಯುಕ್ತ, ನಗರಸಭೆ, ರಾಮನಗರ.