ಗಾದಿ ಗಟ್ಟಿಪಡಿಸಿಕೊಳ್ಳಲು ಕಸರತ್ತು ಶುರುಗ್ರಾಪಂ 2ನೇ ಅವಧಿಗೆ ಅಧ್ಯಕ್ಷ - ಉಪಾಧ್ಯಕ್ಷ ಮೀಸಲಾತಿ ಘೋಷಣೆ ಹಿನ್ನೆಲೆ

ZP ramanagara
Published on

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಕೆಲ ಪಂಚಾಯಿತಿಗಳಲ್ಲಿ ಆಕಾಂಕ್ಷಿತರು ಕುರ್ಚಿ ಅಲಂಕರಿಸಲು ಕಸರತ್ತು ಆರಂಭಿಸಿದ್ದಾರೆ.

ತಾಲೂಕಿನ 32 ಗ್ರಾಪಂಗಳಿಗೆ ಜೂ.13ರಂದು ಮೀಸಲಾತಿ ನಿಗದಿಯಾಗಿದೆ. ಮೀಸಲಾತಿ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿದ್ದು, ಇನ್ನೇನು ಕೆಲದಿನದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಗ್ರಾಪಂ ಚುಕ್ಕಾಣಿ ಹಿಡಿಯಲೇಬೇಕು ಎಂದು ಹಠತೊಟ್ಟಿರುವ ಆಕಾಂಕ್ಷಿಗಳು ಬಿರುಸಿನ ರಾಜಕೀಯ ಚಟುವಟಿಕೆ ನಡೆಸುತ್ತಿದ್ದಾರೆ.

ಮೀಸಲಾತಿ ವಿವರ
32 ಗ್ರಾಪಂಗಳ ಪೈಕಿ ಅಧ್ಯಕ್ಷ ಗಾದಿಯ 16 ಸ್ಥಾನ ಸಾಮಾನ್ಯ ವರ್ಗಕ್ಕೆ, ಪರಿಶಿಷ್ಟ ಜಾತಿಗೆ 6, ಹಿಂದುಳಿದ ಎ ವರ್ಗಕ್ಕೆ 8 ಸ್ಥಾನ ಮತ್ತು ಹಿಂದುಳಿದ ಬಿ ವರ್ಗಕ್ಕೆ 2 ಸ್ಥಾನ ಮೀಸಲಾತಿ ನಿಗದಿಯಾಗಿದೆ. ಎಲ್ಲ ವಿಭಾಗದಲ್ಲೂ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಲಾಗಿದೆ. ಇದೇ ರೀತಿ ಉಪಾಧ್ಯಕ್ಷ ಸ್ಥಾನಗಳಿಗೂ ಮೀಸಲಾತಿ ನಿಗದಿಯಾಗಿದೆ. ಬಹುತೇಕ ಗ್ರಾಪಂಗಳಲ್ಲೂ ಈ ಎರಡು ಸ್ಥಾನ ಅಲಂಕರಿಸಲು ಪೈಪೋಟಿ ಸಹಜವಾಗಿದ್ದು, ಒಂದು ಪಕ್ಷದಲ್ಲೇ ಹಲವು ಆಕಾಂಕ್ಷಿತರು ಇರುವ ಕಾರಣ ಚುನಾವಣೆ ತೀವ್ರ ರಂಗು ಪಡೆಯಲಿದೆ.

ಸದಸ್ಯರಿಗೆ ಗಾಳ!
ಗ್ರಾಮ ರಾಜ್ಯದ ಕುರ್ಚಿಯ ಮೀಸಲು ತಮಗೆ ಎಂಬುದು ಖಚಿತಪಡಿಸಿಕೊಂಡಿರುವ ಆಕಾಂಕ್ಷಿಗಳು ಕುರ್ಚಿ ಗಿಟ್ಟಿಸಿಕೊಳ್ಳಲು ಸದಸ್ಯರಿಗೆ ಗಾಳ ಹಾಕುವ ಕೆಲಸ ಆರಂಭಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಯಾಗಿರುವ ಪಂಚಾಯಿತಿಗಳಲ್ಲಿ ತುಸು ಹೆಚ್ಚಿನ ಚಟುವಟಿಕೆಗಳು ಕಂಡುಬರುತ್ತಿವೆ.

ಏನಾದರೂ ಮಾಡಿ ಅಧಿಕಾರ ಹಿಡಿಯಬೇಕೆಂಬ ನಿಟ್ಟಿನಲ್ಲಿ ಸದಸ್ಯರ ವಿಶ್ವಾಸಗಿಟ್ಟಿಸುವ ಸಲುವಾಗಿ ನಾನಾ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಕೆಲವೆಡೆ ಸದಸ್ಯರ ಬುಕ್ಕಿಂಗ್​ ಸಹ ಆರಂಭಗೊಂಡಿದೆ. ಆಣೆ ಪ್ರಮಾಣದ ವಿಚಾರಗಳು ತೇಲಿಬರುತ್ತಿವೆ. ಕೆಲವರಂತೂ ಬಹುಮತ ಗಿಟ್ಟಿಸಲು ಈಗಾಗಲೇ ಸಾಕಷ್ಟು ಹಣ ಚಲಾವಣೆ ಸಹ ಮಾಡುತ್ತಿದ್ದಾರೆ.

ನಾಯಕರ ಬೆನ್ನು ಹತ್ತಿರುವ ಆಕಾಂಗಳು
ಇದು ನನ್ನ ಕೊನೇ ಚುನಾವಣೆ, ಹೇಗೋ ಒಂದ್​ ಅವಕಾಶ ಸಿಕ್ಕಿದೆ, ಏನಾದರೂ ತೀರ್ಮಾನ ಮಾಡಿ ನನಗೇ ಅಧಿಕಾರ ಕೊಡಿಸಿ..., ಅಣ್ಣ, ನನಗಂತೂ ಅವಕಾಶ ಸಿಕ್ಕಿಲ್ಲ, ಈಗ ನನ್ನ ಪತ್ನಿಗೆ ಅವಕಾಶ ಸಿಕ್ಕಿದೆ ಏನು ಮಾಡುತ್ತೀರೋ ನಿಮಗೇ ಬಿಟ್ಟಿದ್ದು..., ನಾನು ಪಕ್ಕಾಗಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ನನಗೆ ಅಧಿಕಾರ ಕೊಡಿಸಿ... ಹೀಗೆ ನಾನಾ ಡೈಲಾಗ್​ ಹೊತ್ತ ಆಕಾಂಕ್ಷಿಗಳು ಹಾಗೂ ಅವರ ಕುಟುಂಬದವರು ಪದ ನಾಯಕರ ಬೆನ್ನು ಹತ್ತಿದ್ದಾರೆ.

ಕೆಲ ಗ್ರಾಪಂನಲ್ಲಿ ಅಕಾಂತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಯಕರಿಗೂ ತಲೆಬಿಸಿಯಾಗುತ್ತಿದೆ. ಕೆಲವೆಡೆ ಯಾವುದೇ ಗೊಂದಲ ಬೇಡ ಎಂಬ ಕಾರಣದಿಂದ ಆಕಾಂಕ್ಷಿಗಳೇ ಒಡಂಬಡಿಕೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ, ಚುನಾವಣೆ ದಿನಾಂಕ ಘೋೂಷಣೆಯಾಗುವ ಮೊದಲೇ ನಾನಾ ಕಸರತ್ತು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ರೆಸಾರ್ಟ್​ ರಾಜಕೀಯ, ಪ್ರವಾಸ ಮತ್ತಿತರ ಬೆಳವಣಿಗೆಗಳು ನಡೆದರೂ ಅಚ್ಚರಿಪಡಬೇಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net