ವೈಫಲ್ಯದ ನಡುವೆ ಪಬ್ಲಿಕ್ ಶಾಲೆ ಆರಂಭ ಕನಕಪುರದಲ್ಲಿ 5 ಗ್ರಾಪಂಗಳಲ್ಲಿ ತೆರೆಯಲು ಸಿದ್ಧತೆ ಬೇಕಿದೆ ಮೂಲಸೌಕರ್ಯ

SCHOOL
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ವೈಫಲ್ಯದ ನಡುವೆಯೇ ಕನಕಪುರ ತಾಲೂಕಿನ 5 ಗ್ರಾಮ ಪಂಚಾಯಿತಿಗಳಲ್ಲಿ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ಕುಸಿಯುತ್ತಿರುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆ ಆರಂಭಿಸುವ ನಿಟ್ಟಿನಲ್ಲಿ ಕಳೆದ ಸಾಲಿನಲ್ಲಿ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಶಾಲಾ ಶಿಕ್ಷಣ ಇಲಾಖೆ ಪಬ್ಲಿಕ್ ಶಾಲೆಗಳನ್ನು ಆರಂಭಿಸಿತ್ತು. ಆದರೆ ಮೂಲಸೌಕರ್ಯ ಕೊರತೆ ನಡುವೆಯೇ ಆರಂಭಗೊಂಡ ಶಾಲೆಗಳು ಯಶಸ್ಸು ಸಾಧಿಸಲಿಲ್ಲ. ಇದರ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ಕನಕಪುರದ 5 ಕಡೆಗಳಲ್ಲಿ ಶಾಲೆ ಆರಂಭಕ್ಕೆ ರೂಪುರೇಷೆ ಸಿದ್ಧಗೊಳ್ಳುತ್ತಿದೆ.

ಗ್ರಾಪಂಗೆ ಒಂದೇ ಶಾಲೆ

ಒಂದು ಗ್ರಾಪಂನಲ್ಲಿ ಒಂದು ಶಾಲೆಯನ್ನು ಆಯ್ಕೆ ಮಾಡಿಕೊಂಡು ಇದರ ವ್ಯಾಪ್ತಿಗೆ ಒಳಪಡುವ ಎಲ್ಲ ಶಾಲೆಗಳನ್ನು ಒಂದೇ ಶಾಲೆಗೆ ವಿಲೀನ ಮಾಡಲಾಗುತ್ತದೆ. ಇದರಿಂದಾಗಿ ಮಕ್ಕಳು ಒಂದೇ ಸೂರಿಗೆ ಬರುವ ಜತೆಗೆ, ಎಲ್ಲ ಶಾಲೆಗಳ ಅಡುಗೆ, ಬೋಧಕ, ಬೋಧಕೇತರ ಸಿಬ್ಬಂದಿ ಹೀಗೆ ಎಲ್ಲರೂ ಒಂದೇ ಶಾಲೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಿಂದ ಕೆಲವು ಶಾಲೆಗಳಲ್ಲಿ ಇರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ನೀಗುವುದಲ್ಲದೆ ವಿಷಯಾಧಾರಿತ ಶಿಕ್ಷಕರ ಕೊರತೆಯೂ ನೀಗಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎನ್ನುವುದು ಈ ಯೋಜನೆಯ ಹಿಂದಿನ ಉದ್ದೇಶ.

ಸಾರಿಗೆ ವ್ಯವಸ್ಥೆ ಕೈಗೂಡಲಿಲ್ಲ

ಗ್ರಾಮ ಪಂಚಾಯಿತಿಗೆ ಒಂದು ಮಾದರಿ ಶಾಲೆ ಆರಂಭಕ್ಕೆ ಬಹುತೇಕ ಕೊಠಡಿಗಳು ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಿರುವ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸ್ಥಾನದ ಶಾಲೆಗೆ ವಿಲೀನಗೊಳ್ಳುವ ಶಾಲೆಗಳ ಮಕ್ಕಳನ್ನು ಕರೆತರಲು ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆಯಾ ಗ್ರಾಮದ ಮಕ್ಕಳನ್ನು ಬಸ್‌ಗಳು ಇಲ್ಲವೇ ಮಿನಿ ವ್ಯಾನ್‌ಗಳ ಮೂಲಕ ಕರೆತರುವ ಕೆಲಸವೂ ಆರಂಭದಲ್ಲಿ ನಡೆದಿತ್ತು. ಆದರೆ ಕಾಲ ಕ್ರಮೇಣ ಇದು ಸಾಧ್ಯವಾಗದೆ ಪಾಲಕರು ಮಕ್ಕಳನ್ನು ಪಬ್ಲಿಕ್ ಶಾಲೆಗೆ ಕಳಿಸಲು ಹಿಂದೆ ಬಿದ್ದರು.

ಎಲ್ಲಡೆ ವಿಫಲ

ಗ್ರಾಪಂ ಪಬ್ಲಿಕ್ ಶಾಲೆಯನ್ನು ಕಳೆದ ಸಾಲಿನಲ್ಲಿ ಚನ್ನಪಟ್ಟಣದ ಚಕ್ಕೆರೆ, ರಾಮನಗರದ ಗಾಣಕಲ್, ಮಾಗಡಿಯ ಸಂಕೀಘಟ್ಟದಲ್ಲಿ ಮತ್ತು ಕನಕಪುರದ ಉಯ್ಯಂಬಳ್ಳಿಯಲ್ಲಿ ಆರಂಭಿಸಲಾಗಿತ್ತು. ಆದರೆ ಸಂಕೀಘಟ್ಟ ಹೊರತುಪಡಿಸಿ ಉಳಿದ ಕಡೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬೇಕಾದ ಸೌಲಭ್ಯ ಒದಗಿಸಲು ಇಲಾಖೆ ಮತ್ತು ಜನಪ್ರತಿನಿಧಿಗಳು ವಿಫಲವಾದ ಹಿನ್ನೆಲೆಯಲ್ಲಿ ಎಲ್ಲೆಡೆ ಶಾಲೆಗಳು ವೈಫಲ್ಯ ಕಂಡವು.

ಕನಕಪುರದಲ್ಲಿ ಎಲ್ಲೆಲ್ಲಿ?

ಕನಕಪುರದಲ್ಲಿ ಈಗ ಒಟ್ಟು 5 ಕಡೆಗಳಲ್ಲಿ ಗ್ರಾಪಂ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಆರಂಭದ ಆಶಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬನ್ನಿಮುಕ್ಕೋಡ್ಲು, ಹುಣಸನಹಳ್ಳಿ, ಗೊಲ್ಲಹಳ್ಳಿ, ಬಿಜ್ಜಹಳ್ಳಿ, ಕೊಳಗೊಂಡನಹಳ್ಳಿಗಳಲ್ಲಿ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಈ ಎಲ್ಲ 5 ಶಾಲೆಗಳ ವ್ಯಾಪ್ತಿಗೆ ಒಟ್ಟು 59 ಶಾಲೆಗಳು ಒಳಪಡಲಿವೆ. ಈ ಶಾಲೆಗಳಿಂದ ಒಟ್ಟು 1990 ವಿದ್ಯಾರ್ಥಿಗಳಿದ್ದಾರೆ. ಎಲ್ಲ 59 ಶಾಲೆಗಳಿಗೆ ಒಟ್ಟು 159 ಶಿಕ್ಷಕ ಹುದ್ದೆಗಳನ್ನು ಮಂಜೂರು ಮಾಡಲಾಗಿದೆಯಾದರೂ, ಕರ್ತವ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ 66 ಮಾತ್ರ.

ಶಿಕ್ಷಕರದ್ದೂ ಪಾತ್ರ?

ಪಬ್ಲಿಕ್ ಶಾಲೆಗಳು ಯಶಸ್ವಿ ಆಗಬೇಕಾದರೆ ಶಿಕ್ಷಕರ ಪಾತ್ರವೂ ಬಹಳ ಮುಖ್ಯ. ಕೆಲವು ಶಿಕ್ಷಕರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವು ಶಿಕ್ಷಕರು ಸ್ವಾತಂತ್ರೃಕ್ಕೆ ಧಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಪಾಲಕರನ್ನು ಎತ್ತಿಕಟ್ಟುವ ಮೂಲಕ ತಮ್ಮೂರುಗಳಲ್ಲಿಯೇ ಶಾಲೆಗಳು ಉಳಿಯುವಂತೆ ಮಾಡುವ ನಿಟ್ಟಿನಲ್ಲಿಯೂ ಯಶಸ್ವಿ ಆಗಿದ್ದಾರೆ. ಇದರ ಪರಿಣಾಮ ಪಬ್ಲಿಕ್ ಶಾಲೆಗಳು ವೈಫಲ್ಯ ಕಂಡಿವೆ ಎನ್ನುವುದು ಶಿಕ್ಷಣ ಇಲಾಖೆ ಮೂಲಗಳ ಮಾಹಿತಿ. ಈ ಹಿನ್ನೆಲೆಯಲ್ಲಿ ಶಾಲೆ ಆರಂಭಕ್ಕೂ ಮುನ್ನ ಈ ಎಲ್ಲ ಅಂಶಗಳನ್ನು ಇಲಾಖೆ ಗಮನದಲ್ಲಿಟ್ಟುಕೊಳ್ಳಬೇಕಿದೆ.

---

ಹಿಂದೆ ಆರಂಭ ಮಾಡಲಾಗಿದ್ದ ಪಂಚಾಯಿತಿ ಪಬ್ಲಿಕ್ ಶಾಲೆಗಳಲ್ಲಿ ಸಂಕೀಘಟ್ಟ ಹೊರತುಪಡಿಸಿ ಉಳಿದೆಡೆ ವಿಫಲವಾಗಿವೆ. ಡಿಸಿಎಂ ಸೂಚನೆ ಹಿನ್ನೆಲೆಯಲ್ಲಿ ಕನಕಪುರದಲ್ಲಿ ಈಗ 5 ಶಾಲೆಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಂತರ ಜಿಲ್ಲೆಯ ಇತರ ಭಾಗಕ್ಕೂ ಇದನ್ನು ವಿಸ್ತರಣೆ ಮಾಡಲಾಗುವುದು.

ಗಂಗಣ್ಣ ಸ್ವಾಮಿ, ಡಿಡಿಪಿಐ ರಾಮನಗರ

ಪಬ್ಲಿಕ್ ಶಾಲೆ ಆರಂಭಕ್ಕೂ ಮುನ್ನ ಅದಕ್ಕೆ ಬೇಕಾದ ಕೊಠಡಿ ಸೇರಿ ಇತರ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಆ ನಂತರವಷ್ಟೇ ಶಾಲೆ ಆರಂಭಿಸಬೇಕು, ಇಲ್ಲವಾದರೆ ಯೋಜನೆ ವಿಫಲವಾಗುತ್ತದೆ.

ಗಾಣಕಲ್ ನಟರಾಜ್, ತಾಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net