ಉಚಿತ ಕೊಡುಗೆ ತಂದ ಸಂಕಷ್ಟ ಗಣೇಶಮೂರ್ತಿ ತಯಾರಕರ ಅಳಲು

Published on

ಕೊಡುಗೆ ನೀಡುವವರು ನಮ್ಮ ಬಳಿಯೇ ಖರೀದಿಸಲಿ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ


ಸಮಾಜ ಸೇವಕರು, ರಾಜಕಾರಣಿಗಳು, ಜನಪ್ರತಿನಿಧಿಗಳು ಗೌರಿ ಗಣೇಶ ಹಬ್ಬ ಆಚರಣೆಗೆ ಗಣೇಶಮೂರ್ತಿಗಳನ್ನು ಉಚಿತವಾಗಿ ನೀಡುವುದರಿಂದ ಸ್ಥಳೀಯ ಗಣೇಶಮೂರ್ತಿ ತಯಾರಕರು ಆರ್ಥಿಕ ಹೊಡೆತಕ್ಕೆ ಸಿಲುಕುವಂತಾಗಿದೆ ಎಂಬುದು ಗಣೇಶಮೂರ್ತಿ ತಯಾರಕರ ಅಳಲು.

ನಮ್ಮಲ್ಲಿ ತಯಾರಾಗುವ ಮೂರ್ತಿಗಳನ್ನು ಖರೀದಿಸಿ ನೀಡಿದರೆ ನಮಗೂ ಉದ್ಯೋಗ ಸಿಕ್ಕಂತಾಗಿ ಒಂದಷ್ಟು ಆರ್ಥಿಕ ನೆಮ್ಮದಿ ಕಾಣಬಹುದು ಎನ್ನುತ್ತಾರೆ.
ಜಿಲ್ಲೆಯಲ್ಲಿ ಮೂರ‌್ನಾಲ್ಕು ಕಡೆಗಳಲ್ಲಿ ಮಾತ್ರ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ಕುಂಬಾರಿಕೆ ಮಾಡುವ ಒಂದೆರಡು ಕುಟುಂಬಗಳು ಗಣೇಶ ಹಬ್ಬದ ಸಮಯದಲ್ಲಿ ಕೆರೆಯಲ್ಲಿ ಸಿಗುವ ಜೇಡಿಮಣ್ಣಿನಿಂದ ಆಕರ್ಷಕ ಗಣೇಶಮೂರ್ತಿಗಳನ್ನು ತಯಾರಿಸಿ ಹಬ್ಬದ ಒಂದೆರಡು ದಿನಗಳ ಮುಂಚೆ ರಾಮನಗರದಲ್ಲಿ ಮಾರಾಟ ಮಾಡುತ್ತಾರೆ. ಪರಿಸರಸ್ನೇಹಿ ಬಣ್ಣ ಬಳಸುವುದು ಇವರ ವಿಶೇಷ.

ಕಳೆದ ಎರಡು ವರ್ಷಗಳಿಂದೀಚೆಗೆ ಜನಪ್ರತಿನಿಧಿಗಳು, ರಾಜಕಾರಣಿಗಳು, ಸಮಾಜಸೇವಕರು ಇಡೀ ತಾಲೂಕಿನ ಗ್ರಾಮಗಳಲ್ಲಿ ಮಣ್ಣಿನ ಗಣೇಶ ನೀಡದೆ ಬೇರೆ ಕಡೆಯಿಂದ ಪ್ಲಾಸ್ಟರ್ ಆ್ ಪ್ಯಾರಿಸ್ (ಪಿಒಪಿ) ಗಣೇಶಮೂರ್ತಿ ನೀಡುತ್ತಿರುವುದರಿಂದ ನಮ್ಮ ಮೂರ್ತಿಗಳು ಬಿಕರಿಯಾಗದೆ ನಷ್ಟ ಅನುಭವಿಸುತ್ತಿದ್ದೇವೆ ಎನ್ನುವುದು ಸ್ಥಳೀಯ ತಯಾರಕರ ನೋವಾಗಿದೆ.

ನಾವು ಜೇಡಿಮಣ್ಣಿನಿಂದ ತಯಾರಿಸುವ ಮೂರ್ತಿಗಳು ಪರಿಸರಸ್ನೇಹಿಯಾಗಿದ್ದು, ಜತೆಗೆ ಪರಿಸರಸ್ನೇಹಿ ಬಣ್ಣವನ್ನೂ ಬಳಸುವುದರಿಂದ ಹಾನಿಕಾರಕವಾಗಲ್ಲ. ನೀರಿನಲ್ಲಿ ವಿಸರ್ಜನೆ ಮಾಡಿದರೂ ಸಮಸ್ಯೆಯಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಉಚಿತ ಗಣೇಶ ನೀಡುತ್ತಿರುವುದರಿಂದ ನಮ್ಮ ಜೀವನ ಸಂಕಷ್ಟಕ್ಕೆ ತಂದೊಡ್ಡಿದೆ.

ಕುಂಬಾರಿಕೆಯೇ ನಮ್ಮ ಕಾಯಕವಾಗಿದೆ. ಜಗತ್ತು ಆಧುನಿಕತೆಯತ್ತ ಸರಿದ ಪರಿಣಾಮ ಕುಂಬಾರಿಕೆ ತೆರೆಗೆ ಸರಿಯುತ್ತಿದ್ದು, ಗಣೇಶ ಹಬ್ಬ ಸಮಯದಲ್ಲಿ ಮಾತ್ರ ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಿದ್ದೇವೆ. ಆದರೆ, ಕಳೆದ ಎರಡು ವರ್ಷಗಳಿಂದ ಹಾಕಿದ ಬಂಡವಾಳವೂ ಸಿಗುತ್ತಿಲ್ಲ. ಈ ವರ್ಷವಾದರೂ ಬಂಡವಾಳ ಕೈಸೇರುತ್ತದೋ ಇಲ್ಲವೋ ನೋಡಬೇಕಿದೆ.
ಲಕ್ಷ್ಮಿ, ಗಣೇಶಮೂರ್ತಿ ತಯಾರಕರು.

ಬಗೆಬಗೆಯ ಗಣೇಶಮೂರ್ತಿಗಳು

ಹಬ್ಬಕ್ಕೆ 3-4 ತಿಂಗಳುಗಳ ಮುನ್ನವೇ ಬನ್ನಿಕುಪ್ಪೆ ಗ್ರಾಮದ ಕೆರೆಯಲ್ಲಿ ಸಿಗುವ ಕೆಂಪು ಜೇಡಿಮಣ್ಣನ್ನು ತಂದು 2 ತಿಂಗಳು ನೀರಿನಲ್ಲಿ ಹದ ಮಾಡಿ ನಂತರ ಹಬ್ಬಕ್ಕೆ ತಿಂಗಳಿರುವಾಗ ಮೂರ್ತಿಗಳನ್ನು ತಯಾರು ಮಾಡಲು ಶುರು ಮಾಡುತ್ತಾರೆ. ತಯಾರಿಸಿದ ಮೂರ್ತಿಗಳನ್ನು ರಾಮನಗರದಲ್ಲಿ ಮಾರಾಟ ಮಾಡುತ್ತಾರೆ. ವಿವಿಧ ನಮೂನೆಯ ಗಣೇಶ ಮೂರ್ತಿಗಳನ್ನು ತಯಾರಕರು ಸಿದ್ಧಪಡಿಸುತ್ತಾರೆ. ನಂದಿ, ನಾಗರಹಾವು, ಲಿಂಗು, ಈಶ್ವರ, ನವಿಲು, ಮೂಷಿಕ, ಸಿಂಹ, ಕಮಲ, ಏಳುತಲೆ ಸರ್ಪ, ಗಿಣಿ ಹೀಗೆ ವಿವಿಧ ಭಂಗಿಯ ಗಣೇಶಮೂರ್ತಿಗಳು ಇವರ ಕೈಚಳಕದಲ್ಲಿ ರೂಪುಗೊಳ್ಳುತ್ತವೆ. ಸದ್ಯ ಒಂದು ಅಡಿಯಿಂದ 5 ಅಡಿ ಎತ್ತರದ ಗಣೇಶಮೂರ್ತಿಗಳನ್ನು ಮಾರಾಟಕ್ಕೆ ಅಣಿಗೊಳಿಸುತ್ತಿದ್ದಾರೆ.


ಪೂರ್ವಿಕರ ಕಾಲದಿಂದಲೂ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸಿದರೆ ಫಲ ಸಿದ್ಧಿಸುತ್ತದೆ ಎಂಬುದು ನಂಬಿಕೆ. ಬನ್ನಿಕುಪ್ಪೆಯಲ್ಲಿ ತಯಾರಾಗುವ ಮಣ್ಣಿನ ಗಣೇಶ ಬಹಳ ಶ್ರೇಷ್ಠ ಎಂದು ಕೇಳಿದ್ದೇನೆ. ಜನರು ಆಕರ್ಷಕ ಬಣ್ಣಗಳಿಗೆ ಆಕರ್ಷಣೀಯ ಬಣ್ಣಕ್ಕೆ ಮಾರುಹೋಗದೆ ಸ್ಥಳೀಯವಾಗಿಯೇ ತಯಾರು ಮಾಡಿದ ಮಣ್ಣಿನ ಗಣಪನ ಮೂರ್ತಿಗಳನ್ನು ಖರೀದಿಸಿ ಪಿಒಪಿ ಮೂರ್ತಿಗಳನ್ನು ದೂರವಿಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು. ಮಾರಾಟಗಾರರೂ ಕೂಡ ಪಿಒಪಿ ಗಣಪ ಮೂರ್ತಿಗಳನ್ನು ಮಾರಾಟ ಮಾಡಬಾರದು.
ತೇಜಸ್ವಿನಿ, ತಹಸೀಲ್ದಾರ್, ರಾಮನಗರ ತಾಲೂಕು
ಪರಿಸರಕ್ಕೆ ಹಾನಿಯಾಗದ ನೈಸರ್ಗಿಕ ಬಣ್ಣ ಬಳಸಿ ಜೇಡಿ ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ಅಚ್ಚುಗಳನ್ನು ಬಳಸದೆ ಕೈಯಿಂದಲೇ ತಯಾರಿಸುತ್ತೇವೆ. ಆದರೆ, ಇಂದು ಗಣೇಶ ಹಬ್ಬ ಸಂದರ್ಭದಲ್ಲಿ ರಾಜಕಾರಣಿಗಳು, ಸಮಾಜಸೇವಕರು, ಜನರಿಗೆ ಉಚಿತವಾಗಿ ಗಣೇಶ ವಿಗ್ರಹಗಳನ್ನು ನೀಡುವುದು ನಮ್ಮ ವ್ಯಾಪಾರದ ಮೇಲೆ ಹೊಡೆತ ಬಿದ್ದು ನಷ್ಟವಾಗುತ್ತಿದೆ.
ರಾಮಮೂರ್ತಿ, ಗಣೇಶಮೂರ್ತಿ ತಯಾರಕರು, ಬನ್ನಿಕುಪ್ಪೆ 

ಕಳೆದ ವರ್ಷ ನಷ್ಟ

ಕಳೆದ ವರ್ಷ 350ಕ್ಕೂ ಹೆಚ್ಚು ಚಿಕ್ಕ ಮತ್ತು ದೊಡ್ಡ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಅಣಿಗೊಳಿಸಿದ್ದೆವು. ಆದರೆ 75 ಚಿಕ್ಕ (1, 2 ಅಡಿ ಎತ್ತರದ) ವಿಗ್ರಹಗಳಷ್ಟೇ ಮಾರಾಟವಾದವು. 3, 4, 5 ಅಡಿ ಗಣಪನ ಮೂರ್ತಿಗಳು ಒಂದು ಕೂಡ ವ್ಯಾಪಾರವಾಗಲಿಲ್ಲ. ಇದರಿಂದ ಸಾವಿರಾರು ರೂ. ನಷ್ಟ ಅನುಭವಿಸಬೇಕಾಯಿತು. ಈ ಬಾರಿ 150ಕ್ಕೂ ಹೆಚ್ಚಿನ ಮೂರ್ತಿಗಳನ್ನು ತಯಾರಿಸಿದ್ದೇವೆ. ಕಳೆದ ವರ್ಷದಂತೆ ವ್ಯಾಪಾರವಾದರೆ ಮುಂದಿನ ವರ್ಷದಿಂದ ಗಣಪನ ತಯಾರಿಗೆ ಗುಡ್‌ಬೈ ಹೇಳಬೇಕಾಗುತ್ತದೆ ಎನ್ನುತ್ತಾರೆ ತಯಾರಕಿ ಲಕ್ಷ್ಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net