

ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿದ್ದಾಜಿದ್ದಿನ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಗೊಂಡಿದೆ. ಇದರ ನಡುವೆಯೇ ಸೋತ ಪಕ್ಷಗಳು ಆತ್ಮಾವಲೋಕನ ಸಭೆಗಳನ್ನೂ ನಡೆಸುವ ಮೂಲಕ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿವೆ. ಈ ಮೂಲಕ ಮುಂದೆ ಎದುರಾಗಲಿರುವ ಸಾಲು ಸಾಲು ಚುನಾವಣೆಗಳಿಗೆ ಸಿದ್ಧತೆ ನಡೆಸಿವೆ.
ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳ ಅಧಿಕಾರ ಅವಧಿ ಪೂರ್ಣಗೊಂಡು ವರ್ಷಗಳೇ ಕಳೆದಿದ್ದು, ಮೀಸಲಾತಿ ಗೊಂದಲದ ಕಾರಣ ಚುನಾವಣೆ ಮುಂದೂಡುತ್ತಲೇ ಇದೆ. ಇದೀಗ ಹೊಸ ಸರ್ಕಾರದ ಮೇಲೆ ಚುನಾವಣೆ ನಡೆಸುವ ಜವಾಬ್ದಾರಿ ಜತೆಗೆ, ಇದನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮತ್ತೊಂದೆಡೆ ಈ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ ಲೋಕಸಭೆ ಚುನಾವಣೆ ಸಹ ಎದುರಾಗಲಿದ್ದು, ಸೋತ ಪಕ್ಷಗಳು ಶಸ್ತ್ರತ್ಯಾಗ ಮಾಡದೆ ಸದ್ದಿಲ್ಲದೆ ಚುನಾವಣೆಗೆ ತಯಾರಿ ನಡೆಸಿವೆ.
ಎರಡು ವರ್ಷ ಆಯ್ತು
ಜಿಪಂ, ತಾಪಂ ಚುನಾಯಿತ ಜನಪ್ರತಿನಿಧಿಗಳ ದರ್ಬಾರ್ ಮುಗಿದು ಅಧಿಕಾರಿಗಳ ಆಡಳಿತ ಬಂದು 2 ವರ್ಷ ಪೂರ್ಣಗೊಂಡಿದೆ. 2021ರ ಏ.28ಕ್ಕೆ ಜಿಪಂ ಅಧಿಕಾರ ಅವಧಿ ಮುಗಿದಿದ್ದು, ಅಂದಿನಿಂದಲೂ ಆಡಳಿತ ಅಧಿಕಾರಿಗಳ ಕೈಯಲ್ಲಿಯೇ ಇದೆ. ಅಂದಿನಿಂದಲೂ ಮೀಸಲಾತಿ, ಕ್ಷೇತ್ರ ಮರು ವಿಂಗಡಣೆ ಸೇರಿ ಹಲವಾರು ವಿಷಯಗಳ ಸಂಬಂಧ ಚರ್ಚೆಗಳು ನಡೆಯುತ್ತಿವೆಯಾದರೂ ಚುನಾವಣೆ ಮಾತ್ರ ನಡೆಯಲಿಲ್ಲ.
ಮಿಶ್ರ ಅಧಿಕಾರಿ
2016ರಲ್ಲಿ ನಡೆದ 22 ಸದಸ್ಯ ಬಲದ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ 16, ಜೆಡಿಎಸ್ 6 ಸ್ಥಾನಗಳನ್ನು ಪಡೆದುಕೊಂಡಿತು. ಈ ವೇಳೆ ಕಾಂಗ್ರೆಸ್ ನೇರವಾಗಿ ಅಧಿಕಾರ ಹಿಡಿದಿತ್ತಾದರೂ ನಂತರದ ದಿನಗಳಲ್ಲಿ ಆದ ಬದಲಾವಣೆಯಿಂದಾಗಿ ಯಾವ ಸದಸ್ಯರು ಯಾವ ಪಕ್ಷದಲ್ಲಿ ಇದ್ದಾರೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ಸಾಧ್ಯವಾಗದಂತೆ ಆಯಿತು. ಸಿ.ಪಿ. ಯೋಗೇಶ್ವರ್ ಬಿಜೆಪಿ ಸೇರುತ್ತಿದ್ದಂತೆ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿ ಅಧ್ಯಕ್ಷರೂ ಆಗಿದ್ದ ಸಿ.ಪಿ.ರಾಜೇಶ್ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡರು. ನಂತರ ಮಾಗಡಿಯಲ್ಲಿ ಬಾಲಕೃಷ್ಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಂತೆ ಅವರ ಸಹೋದರ ಎಚ್.ಎನ್. ಅಶೋಕ್ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರೂ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡು ಅಧ್ಯಕ್ಷರೂ ಆದರು. ಹೀಗೆ ಇಡೀ 5 ವರ್ಷದ ಅವಧಿಯ ಮೂರು ಪಕ್ಷಗಳ ಮಿಶ್ರ ಆಡಳಿತ ಕನ್ನಡಿಯಾಗಿ ಇತ್ತು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸಂಪೂರ್ಣವಾಗಿ 5 ವರ್ಷ ಒಬ್ಬರ ಕೈಯಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಜಾರಿಗೆ ತಂದ ನಿಯಮಗಳು ಕೇವಲ ಕಾಗದಕ್ಕೆ ಸೀಮಿತವಾಗಿ ಉಳಿದುಕೊಂಡಿತು. 5 ವರ್ಷಗಳ ಅವಧಿಯಲ್ಲಿ 4 ಮಂದಿ ಅಧ್ಯಕ್ಷರಾದರೆ, ಅಷ್ಟೇ ಮಂದಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ವಿಶೇಷ.
ಬಲ ತುಂಬುವ ಯತ್ನ
ಇತ್ತೀಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಅದರಲ್ಲೂ ಪ್ರಮುಖವಾಗಿ ನಿಖಿಲ್ ಸೋತಿರುವುದು ಜೆಡಿಎಸ್ ಪಾಲಿಗೆ ಭಾರಿ ಹೊಡೆತ ನೀಡಿದೆ. ಇದರ ಹೊರತಾಗಿಯೂ ಮತಗಳಿಕೆ ಪ್ರಮಾಣದಲ್ಲಿ ಅಲ್ಪ ಹಿನ್ನಡೆಯನ್ನು ಅನುಭವಿಸಿರುವುದು ಬಿಟ್ಟರೆ ಉಳಿದಂತೆ ಪಕ್ಷ ಈಗಲೂ ಬಲಿಷ್ಠ. ಇದೇ ರೀತಿ ಚನ್ನಪಟ್ಟಣದ ಜತೆಗೆ ಉಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಪೈಪೋಟಿ ನೀಡುವ ಹಂತಕ್ಕೆ ಬಂದಿದೆ. ಇದರಿಂದಾಗಿ ಜಿಪಂ ಮತು ತಾಪಂ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಎದೆಗುಂದದಂತೆ ನೋಡಿಕೊಳ್ಳಲು ಎಲ್ಲ ಪಕ್ಷಗಳು ತಯಾರಿ ನಡೆಸಿವೆ. ಇನ್ನು ಕಾಂಗ್ರೆಸ್‌ನ ಭಾಗ್ಯಗಳು ಎಲ್ಲ ವರ್ಗದ ಜನರಿಗೆ ಸೇರಿದರಷ್ಟೇ ಪಕ್ಷಕ್ಕೆ ಮತ್ತಷ್ಟು ಬಲ ದೊರೆಯಲಿದೆ. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಇದರ ಫಲಿತಾಂಶ ಗೋಚರವಾಗಲಿದೆ.