ಅರಣ್ಯಾಧಿಕಾರಿಗಳ ಮೇಲೆ ಮುಗಿಬಿದ್ದ ರೈತರು

02-08-rama-forest
Published on

ವನ್ಯಜೀವಿ ಬಾಧಿತ ರೈತರೊಂದಿಗೆ ಅರಣ್ಯಾಧಿಕಾರಿಗಳ ಸಭೆ

ನಿರ್ಧಾರ ಸಾಧ್ಯವಾಗದೆ ಮೊಟಕು

ರಾಮನಗರ
ವನ್ಯಜೀವಿಗಳಿಂದ ಬಾಧಿತ ರೈತರೊಂದಿಗೆ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಸಭೆ ಗೊಂದಲದ ಗೂಡಾಗಿ ಅಂತಿಮವಾಗಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮತ್ತೊಂದು ಸಭೆ ನಡೆಸುವ ತೀರ್ಮಾನದೊಂದಿಗೆ ಮುಕ್ತಾಯ ಗೊಂಡಿತು.

ನಗರದ ಹೊರವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರು, ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ರಾಮನಗರ ಪ್ರಾದೇಶಿಕ ಅರಣ್ಯ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕಾವೇರಿ ವನ್ಯ ಜೀವಿಧಾಮ ಅಧಿಕಾರಿಗಳೊಂದಿಗೆ ಬುಧವಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವನ್ಯಜೀವಿಗಳ ಹಾವಳಿಯಿಂದ ನಷ್ಟಕ್ಕೆ ಒಳಗಾಗಿದ್ದ ರೈತರು ಅಧಿಕಾರಿಗಳ ಮೇಲೆ ಮುಗಿಬಿದ್ದ ಪರಿಣಾಮ ಹಾಗೂ ಎಲ್ಲರೂ ಒಟ್ಟಿಗೆ ಆಕ್ರೋಶಭರಿತರಾಗಿ ಮಾತನಾಡಿದ್ದರಿಂದ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗದೆ ಸಭೆಯನ್ನು ಮೊಟಕುಗೊಳಿಸಲಾಯಿತು.

ಸಭೆಯಲ್ಲಿ ಅರಣ್ಯಾಧಿಕಾರಿಗಳಾದ ಗಣೇಶ್, ಕಿರಣ್‌ಕುಮಾರ್, ಆಶಾ, ಜಗದೀಶ್ ಗೌಡ, ರೈತ ಮುಖಂಡರಾದ ಧರಣೇಶ್ ರಾಂಪುರ, ರುದ್ರಪ್ಪ, ಸಂಘಟನೆ ಪದಾಧಿಕಾರಿಗಳಾದ ಯೋಗೇಶ್‌ಗೌಡ, ರಂಜನ್‌ಗೌಡ ಮುಂತಾದವರು ಇದ್ದರು.

ದಾಳಿ ಮಾಡುವಾಗ ವ್ಯಾಪ್ತಿ ನೋಡಲ್ಲ
ರೈತ ಉಮೇಶ್ ಮಾತನಾಡಿ, ಕಾಡು ಪ್ರಾಣಿ ದಾಳಿ ನಡೆದರೆ ಇದು ನಮ್ಮ ವ್ಯಾಪ್ತಿಗೆ ಬರಲ್ಲ, ವೈಲ್ಡ್ ಲೈಫ್‌ಗೆ ಬರುತ್ತೆ ಎನ್ನುತ್ತಾರೆ. ಪ್ರಾಣಿಗಳು ವಿಭಾಗ ನೋಡಿಕೊಂಡು ದಾಳಿ ಮಾಡುತ್ತವೆಯೇ, ನಮ್ಮ ಸಮಸ್ಯೆ ಹೇಳಿಕೊಳ್ಳಲು ಕೊಳ್ಳೇಗಾಲದಲ್ಲಿರುವ ಡಿಎಫ್‌ಒ ಕಚೇರಿಗೆ ಕರೆ ಮಾಡಿದರೆ ಅವರು ನಮ್ಮ ಕರೆ ಸ್ವೀಕರಿಸಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಾದೇಶಿಕ, ವನ್ಯಜೀವಿ ಮತ್ತು ಸಾಮಾಜಿಕ ಅರಣ್ಯ ಒಗ್ಗೂಡಿ ಕೆಲಸ ಮಾಡಿದರೆ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಗತ್ಯವಿರುವ ಕಡೆ ತಡೆಬೇಲಿ ಹಾಕಿದರೆ ಹೋದ ಆನೆಗಳು ವಾಪಾಸ್ ಬರುವುದಿಲ್ಲ. ಆದರೆ, ಯಾರಲ್ಲೂ ಸಮನ್ವಯ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವರಿಗೆ ದನಿಗೂಡಿಸಿದ ಮತ್ತೊಬ್ಬ ರೈತ ನಾಗರಾಜು, ವಾಚರ್ ಸತ್ತರೆ ಡಿಎಫ್‌ಒ ಒಂದು ದಿನ ಬಿಟ್ಟು ಬರುತ್ತಾರೆ. ಎಲ್ಲ ವಿಭಾಗಗಳನ್ನು ಒಂದುಗೂಡಿಸಿ ನಮಗೆ ರಾಮನಗರದಲ್ಲಿಯೇ ವೈಲ್ಡ್‌ಲೈಫ್ ಕಚೇರಿ ತೆರೆಯಿರಿ ಎಂದು ಆಗ್ರಹಿಸಿದರು. ಅಲ್ಲದೆ ಆನೆ ದಾಳಿ ಮಾಡುವ ಮುನ್ನಾ ನಾನು ಇಂತಹ ವಿಭಾಗಕ್ಕೆ ಸೇರಿದ್ದೇನೆ ಎಂದು ಬೋರ್ಡ್ ಹಾಕಿಕೊಂಡು ಬರುತ್ತದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಪಹಣಿ ನೀಡಿದ ರೈತರು
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ನೀವು ನಮ್ಮ ಜಮೀನಿಗೆ ಪಹಣಿಯನ್ನು ತೆಗೆದುಕೊಂಡು ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ಹಣವನ್ನು ಕೊಡಿ ಎಂದು ಆಗ್ರಹಿಸಿದರು. ಇದಕ್ಕೆ ಹಲವಾರು ರೈತರು ಬೆಂಗಲಿಸಿದರು. ರೈತ ಸಂಘದ ಪುಟ್ಟಸ್ವಾಮಿ ಮಾತನಾಡಿ, ಕಳೆದ ಬಾರಿ ಪ್ರತಿಭಟನೆ ನಡೆದ ವೇಳೆ 35 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಿರಿ. ಆದರೆ ಇದುವರೆಗೂ ಏನೂ ಆಗಿಲ್ಲ, ರೈತರ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ಆಗುತ್ತಿದೆ. ನಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳನ್ನು ಮೌಲ್ಯವನ್ನು ಕಟ್ಟಿ ನೀವೇ ಗುತ್ತಿಗೆಗೆ ಜಮೀನು ಮಾಡಿಕೊಳ್ಳಿ, ನಮಗೆ ಹಣ ಕೊಡಿ ಎಂದು ಆಗ್ರಹಿಸಿದರು.

ಬೇಲಿ ನಿರ್ಮಾಣಕ್ಕೆ ಕ್ರಮ
ರೈತರಿಗೆ ಸಮಜಾಯಿಷಿ ನೀಡಿದ ಡಿಎಫ್‌ಒಗಳಾದ ರಾಮಕೃಷ್ಣಪ್ಪ, ಸಂತೋಷ್, ವಿಶಾಲ್ ಪಾಟೀಲ್ ಹಾಗೂ ಎಸಿಎಫ್ ನಾಗೇಂದ್ರ ಪ್ರಸಾದ್, ಚಿಕ್ಕಮುದಡೆ ಗ್ರಾಮ ಬಳಿ ಇರುವ ಜಾಗದ ಸಮಸ್ಯೆಯಿಂದಾಗಿ ಒಂದು ಕಿ.ಮೀ. ಉದ್ದದ ಬೇಲಿ ಹಾಕಲು ಸಾಧ್ಯವಾಗಿಲ್ಲ. ಇದನ್ನು ಸರಿಪಡಿಸಿಕೊಂಡು ಬೇಲಿ ಹಾಕಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ವಿಭಾಗ ಯಾವುದೇ ಇರಲಿ, ಅರಣ್ಯಾಧಿಕಾರಿಗಳು ಮೊದಲು ರೈತರ ಸಮಸ್ಯೆ ಕೇಳಬೇಕು ನಂತರ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾವಣೆ ಮಾಡುವ ಮೂಲಕ ರೈತರ ನೆರವಿಗೆ ಧಾವಿಸುವಂತೆ ಮಾಡಲಾಗುವುದು ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು.

ಪರಿಹಾರ ಸಮಸ್ಯೆಗೆ ಶೀಘ್ರ ಮುಕ್ತಿ
ಚನ್ನಪಟ್ಟಣದ ಪರಿಹಾರ ಬಿಡುಗಡೆ ಸಮಸ್ಯೆಗೆ ಶೀಘ್ರದಲ್ಲಿಯೇ ಮುಕ್ತಿ ನೀಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು. ಅಂತಿಮವಾಗಿ ಮುಂದಿನ 15 ದಿನಗಳೊಳಗಾಗಿ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ, ವಿವಿಧ ವಿಭಾಗಗಳ ವಿಲೀನ, ಅಗತ್ಯ ಇರುವ ಕಡೆಗಳಲ್ಲಿ ತಡೆ ಬೇಲಿ ನಿರ್ಮಾಣ ಸೇರಿ ವಿವಿಧ ಬೇಡಿಕೆಗಳ ಚರ್ಚೆಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಭರವಸೆಯೊಂದಿಗೆ ಸಭೆಗೆ ಮುಕ್ತಾಯ ಹಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net