

ಚೌಕಸಂದ್ರ ಜಯರಾಮನಾಯಕ್ ಹಾರೋಹಳ್ಳಿ
ತಾಲೂಕಿನಲ್ಲಿ ಆಗಾಗ ಬೆಂಕಿ ಅವಘಡಗಳು ಸಂಭವಿಸುತ್ತಿದ್ದು, ಅಗ್ನಿಶಾಮಕ ಠಾಣೆ ಅವಶ್ಯಕತೆ ಕಾಡುತ್ತಿದೆ. ಕಳೆದ ಶನಿವಾರ ಪಟ್ಟಣದಲ್ಲಿ ಶಾರ್ಟ್‌ಸರ್ಕ್ಯೂಟ್ ಉಂಟಾಗಿ ಸಂಭವಿಸಿದ ಅವಘಡದಲ್ಲಿ 3 ಅಂಗಡಿಗಳು ಸುಟ್ಟು ಕರಕಲಾಗಿರುವುದು ಬಹುದಿನಗಳ ಬೇಡಿಕೆಗೆ ಪುಷ್ಟಿ ನೀಡಿದೆ.
ಆದರೆ ಅದನ್ನು ಕಾರ್ಯಗತಗೊಳಿಸಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಜನರ ಜೀವದ ಜತೆ ಚೆಲ್ಲಾಟವಾಡದೆ ಠಾಣೆ ಆರಂಭಿಸಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.
ನಷ್ಟ, ಪ್ರಾಣಹಾನಿ ತಳ್ಳಿಹಾಕುವಂತಿಲ್ಲ: ಏಷ್ಯಾದಲ್ಲೇ ಅತಿ ದೊಡ್ಡದಾದ ಕೈಗಾರಿಕಾ ಪ್ರದೇಶ ಹಾರೋಹಳ್ಳಿಯಲ್ಲಿದೆ. ಕೆಲವು ಕಾರ್ಖಾನೆಗಳಲ್ಲಿ ಆಗಾಗ ಬೆಂಕಿ ಅವಘಡಗಳು ಸಂಭವಿಸುತ್ತಿರುತ್ತದೆ. ಆ ವೇಳೆ ಅಗ್ನಿಶಾಮಕ ವಾಹನಗಳು 20 ಕಿ.ಮೀ. ದೂರದ ಕನಕಪುರ ಅಥವಾ 33 ಕಿ.ಮೀ. ದೂರದ ರಾಮನಗರದಿಂದ ಬರಬೇಕಾಗುತ್ತದೆ. ಅಷ್ಟರೊಳಗೆ ಆರ್ಥಿಕ ನಷ್ಟದ ಜತೆಗೆ ಪ್ರಾಣ ಹಾನಿ ಸಂಭವವನ್ನೂ ತಳ್ಳಿಹಾಕುವಂತಿಲ್ಲ.
ಕೈಗಾರಿಕಾ ಪ್ರದೇಶದಲ್ಲಿ ಹಿಂದೆಯೂ ಹಲವಾರು ಕಾರ್ಖಾನೆಗಳಲ್ಲಿ ಅಗ್ನಿ ಆಕಸ್ಮಿಕವಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಂದಿನಿಂದಲೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಅಥವಾ ಪಟ್ಟಣಕ್ಕೆ ಅಗ್ನಿಶಾಮಕ ಠಾಣೆ ಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಆದರೆ, ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎನ್ನುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳ ಒಕ್ಕೂಟ ಸಹ ಅಗ್ನಿಶಾಮಕ ಠಾಣೆ ಆರಂಭಿಸಲು ಸರ್ಕಾರಕ್ಕೆ ಹಲವು ಮನವಿ ಸಲ್ಲಿಸಿದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ಜಾಣ ಮೌನವಹಿಸಿದ್ದಾರೆ.
ಹಾರೋಹಳ್ಳಿ ತಾಲೂಕಾಗಿ ಅಸ್ತಿತ್ವಕ್ಕೆ ಬಂದಿದ್ದರೂ ಅಗ್ನಿಶಾಮಕ ಠಾಣೆ ಇಲ್ಲದಿರುವುದು ದುರದೃಷ್ಟಕರ. ಈಗಲಾದರೂ ಸರ್ಕಾರ ಎಚ್ಚೆತ್ತು ಅಗ್ನಿಶಾಮಕ ಠಾಣೆ ನಿರ್ಮಿಸಲು ಕ್ರಮ ಕೈಗೊಳ್ಳಲಿ.
ಶೇಷಾದ್ರಿರಾಮು, ಸಾಮಾಜಿಕ ಕಾರ್ಯಕರ್ತ ಹಾರೋಹಳ್ಳಿ