ಜಿಲ್ಲೆಯಾದ್ಯಂತ ಹೆಚ್ಚುತ್ತಿವೆ ಅಗ್ನಿ ಅವಘಡ ಬೇಸಿಗೆ ಆರ್ಭಟ, ಅಗ್ನಿಶಾಮಕ ದಳಕ್ಕೆ ಹೆಚ್ಚಿದ ಕಾರ್ಯದೊತ್ತಡ

Fire
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಮಳೆಯಲ್ಲಿ ಮುಳುಗಿ ಎದ್ದ ಜಿಲ್ಲೆಯಲ್ಲಿ ಈಗ ಬೇಸಿಗೆ ಆರ್ಭಟಿಸುತ್ತಿದ್ದು, ಜಿಲ್ಲೆಯಾದ್ಯಂತ ಅಗ್ನಿ ಅವಘಡಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಈ ಬಾರಿ ಮುಂಗಾರಿನಲ್ಲಿ ಕಂಡು ಕೇಳರಿಯದ ರೀತಿ ಮಳೆ ಸುರಿದ ಕಾರಣ, ಮನೆ, ಜಮೀನುಗಳು ಕೊಚ್ಚಿ ಹೋಗಿ ಅಗ್ನಿಶಾಮಕ ಸಿಬ್ಬಂದಿ ಹಗಲಿರುಳೆನ್ನದೆ ಜೀವ ಪಣಕ್ಕಿಟ್ಟು ಕಾರ್ಯನಿರ್ವಹಿಸಿದ್ದರು, ಈಗ ಬೇಸಿಗೆ ಆರಂಭದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಂಕಿ ಅವಘಡಗಳು ಸಂಭವಿಸುತ್ತಿದ್ದು, ಇದು ಅಗ್ನಿಶಾಮಕ ಸಿಬ್ಬಂದಿಯ ಕಾರ್ಯದೊತ್ತಡ ಹೆಚ್ಚಿಸಿದೆ.

ಕ್ರಮ ವಹಿಸಬೇಕಿದೆ ಅರಣ್ಯ ಇಲಾಖೆ

ಪ್ರತಿವರ್ಷ ಬೇಸಿಗೆ ಬಂತೆಂದರೆ ಕಾಡುಗಳು ಬೆಂಕಿಗೆ ಆಹುತಿ ಆಗುವುದು ಸಾಮಾನ್ಯ ಎನ್ನುವಂತೆ ಆಗಿದೆ. ಈ ಬಾರಿಯೂ ಈಗಾಗಲೇ ಜಿಲ್ಲೆಯ ಹಲವಾರು ಕಡೆ ಕಾಡು ಹಾಗೂ ಬೆಟ್ಟ-ಗುಡ್ಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಿಡಿಗೇಡಿಗಳ ಕೃತ್ಯವೋ ಅಥವಾ ಸ್ವಾಭಾವಿಕವೋ ಬೆಂಕಿ ಬೀಳುವುದು ಹೆಚ್ಚುತ್ತಲೇ ಇದೆ. ಇದರ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ವಹಿಸಬೇಕಿದೆ. ಇನ್ನೂ ಹಲವಾರು ತಿಂಗಳು ಬೇಸಿಗೆ ಇರುವುದರಿಂದ ಅರಣ್ಯ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಗಸ್ತು ಹೆಚ್ಚಿಸಿ, ಅನುಮಾನಾಸ್ಪದ ವ್ಯಕ್ತಿಗಳು ಅರಣ್ಯದಲ್ಲಿ ಓಡಾಡುವುದನ್ನು ತಡೆಯಬೇಕಿದೆ. ಜತೆಗೆ ಬೆಂಕಿ ನಿಯಂತ್ರಣಕ್ಕೆ ಹೆಚ್ಚು ಗಮನಹರಿಸಬೇಕಿದೆ.

ಮನೆಗಳ ಬಳಿಯೂ ಎಚ್ಚರ

ಮನೆಗಳ ಬಳಿಯೂ ಉಂಟಾಗಬಹುದಾಗದ ಬೆಂಕಿ ಅವಘಡಗಳನ್ನು ತಪ್ಪಿಸಲು ಮುಂಜಾಗ್ರತೆ ಕೈಗೊಳ್ಳಬೇಕಿದೆ. ಸಾಧ್ಯವಾದಷ್ಟು ಮನೆಗಳಲ್ಲಿ ಅಡುಗೆ ನಂತರ ಬೆಂಕಿ ನಂದಿಸುವ ಹಾಗೂ ಬೆಂಕಿಗೆ ತಕ್ಷಣವೇ ಹೊತ್ತಿ ಉರಿಯುವ ಇಂಧನಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇಡಬೇಕು. ಮನೆ ಪಕ್ಕದಲ್ಲಿಯೇ ಹುಲ್ಲು, ಸೌದೆ ಬಣವೆಗಳನ್ನು ಹಾಕಿದ್ದರೆ ಇದರ ಬಗ್ಗೆಯೂ ನಿಗಾ ಇಡಬೇಕು. ಅಲ್ಲದೆ, ಶಾಖಕ್ಕೆ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಸಾಧ್ಯವಾದಷ್ಟೂ ಮನೆಯಿಂದ ದೂರವೇ ಇಡಬೇಕು. ಅಥವಾ ಸುರಕ್ಷಿತವಾಗಿ ಇಡಬೇಕಿದೆ.

ಇಲಾಖೆಯಿಂದಲೂ ಸಿದ್ಧತೆ

ಜಿಲ್ಲೆಯಲ್ಲಿ ಅಗ್ನಿಶಾಮಕ ಇಲಾಖೆಯ ನಾಲ್ಕು ಘಟಕಗಳಿದ್ದು, ಇಲ್ಲಿ ಸಿಬ್ಬಂದಿ ಕೊರತೆ ಇದೆ. ಇದರ ಹೊರತಾಗಿಯೂ ಇರುವ ಸಿಬ್ಬಂದಿಯನ್ನು ಅಲರ್ಟ್‌ನಲ್ಲಿ ಇಡಲಾಗಿದೆ. ಕಳೆದ ವರ್ಷ 32 ಅಗ್ನಿ ಅವಘಡಗಳು ಸಂಭವಿಸಿದ್ದವು. ಆದರೆ ಈ ಬಾರಿ ಈಗಾಗಲೇ 27 ಪ್ರಕರಣಗಳು ದಾಖಲಾಗಿವೆ. ಸಿಬ್ಬಂದಿಗೆ ತುರ್ತು ಸಂದರ್ಭದಲ್ಲಿ ಹೊರತುಪಡಿಸಿ ದೀರ್ಘಾವಧಿ ರಜೆಗಳನ್ನು ತಡೆಹಿಡಿಯಲಾಗಿದ್ದು, ಎಲ್ಲ ವಾಹನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಅಲ್ಲದೆ ಸಾರ್ವಜನಿಕರು, ಕಾರ್ಖಾನೆಗಳಲ್ಲೂ ಬೆಂಕಿ ಅವಘಡಗಳನ್ನು ತಪ್ಪಿಸುವ ಮತ್ತು ನಿಯಂತ್ರಿಸುವ ಸಂಬಂಧ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ಇರಲಿ ಎಚ್ಚರ

*. ಮನೆ, ಹುಲ್ಲಿನ ಮೆದೆಗೆ, ಮರದ ರಾಶಿಗೆ ಬೆಂಕಿ ತಗುಲಿದಾಗ ಸಾಕಷ್ಟು ಮರಳು ಮತ್ತು ನೀರು ಸುರಿಯುವುದು.

*. ಸೀಮೆಎಣ್ಣೆ, ಪೆಟ್ರೋಲ್ ಅಥವಾ ಇತರ ಎಣ್ಣೆ ಪದಾರ್ಥಗಳಿಗೆ ಬೆಂಕಿ ತಗುಲಿದಾಗ ನೀರು ಸುರಿಯದೆ, ಬೆಂಕಿ ನಂದಿಸಲು ಮರಳು ಬಳಸುವುದು.

*. ವಿದ್ಯುತ್‌ನಿಂದಾಗಿ ಸಂಭವಿಸುವ ಬೆಂಕಿ ಅವಘಡಕ್ಕೆ ಎರಚದೆ, ಮೈನ್ ಸ್ವಿಚ್ ಆಫ್ ಮಾಡಬೇಕು ಹಾಗೂ ಮರಳು ಎರಚಬೇಕು. ಗೋಧಿ, ಸೇರಿ ಇತರ ಕಾಳುಗಳ ಹಿಟ್ಟುಗಳನ್ನೂ ಬೆಂಕಿ ನಂದಿಸಲು ಬಳಕೆ ಮಾಡಬಹುದು.

*.ಎಲ್‌ಪಿಜಿ ಸೋರಿಕೆಯ ವಾಸನೆ ಬಂದ ಕೂಡಲೇ ಎಲ್ಲ ಕಿಟಕಿ ಬಾಗಿಲುಗಳನ್ನು ತೆರೆದು ಗಾಳಿಯಾಡುವಂತೆ ವ್ಯವಸ್ಥೆ ಮಾಡಬೇಕು.

ಜಮೀನುಗಳಲ್ಲಿ ಏನು ಮಾಡಬೇಕು?

*. ಮಾವು/ತೆಂಗು ಸೇರಿ ಯಾವುದೇ ತೋಟಗಳಲ್ಲಿ ಕಳೆ ಹೆಚ್ಚಾಗಿ ಬೆಳೆಯದಂತೆ ಮತ್ತು ಒಣಗಿದ ಕಳೆ /ಹುಲ್ಲು ಇರದಂತೆ ಗಮನಹರಿಸಬೇಕು

*. ಒಣಗಿದ ಎಲೆಗಳನ್ನು ಸಾಧ್ಯವಾದಷ್ಟು ಮಣ್ಣಿನಿಂದ ಮುಚ್ಚಬೇಕು.

*. ಬದುಗಳಲ್ಲಿ ಬೆಳೆದಿರುವ ಕಳೆಯನ್ನು ನಿಯಂತ್ರಣ ಮಾಡುವ ಸಲುವಾಗಿ ಬೆಂಕಿ ಹಾಕಬಾರದು. ಗಾಳಿಯಿಂದಾಗಿ ಬೆಂಕಿ ವ್ಯಾಪಿಸುವ ಸಾಧ್ಯತೆ ಹೆಚ್ಚಿರುತ್ತದೆ.

*. ಬೆಂಕಿ ಬಳಕೆ ಮಾಡಿದರೂ ಅದು ಬಂದಿ ಹೋಗುವವರೆಗೂ ನಿಗಾ ಇಟ್ಟು ನೋಡಿಕೊಳ್ಳಬೇಕು. ಅದರ ಮೇಲೆ ಮರಳು, ಇಲ್ಲವೇ ನೀರು ಸುರಿಯಬೇಕು.

===

ಇವರನ್ನು ಸಂಪರ್ಕಿಸಿ

ರಾಮನಗರ ಅಗ್ನಿಶಾಮಕ ಕಚೇರಿ 080-29785101, 9901572819

 ಕನಕಪುರ - 080-29761101, 8453702717

ಮಾಗಡಿ - 080-29704446, 9886363537,

ಚನ್ನಪಟ್ಟಣ - 080-29721354, 9612566193

ಈ ಬಾರಿ ಜಿಲ್ಲೆಯಲ್ಲಿ ಅಗ್ನಿ ದುರಂತಗಳು ಹೆಚ್ಚಿವೆ. ಜಿಲ್ಲೆಯ ಜನತೆ ಎಚ್ಚರಿಕೆಯಿಂದ ಇರಬೇಕು. ಸಾರ್ವಜನಿಕರು ಮುಂಜಾಗ್ರತೆ ಕೈಗೊಳ್ಳಬೇಕು. ಜತೆಗೆ ಸಾಧ್ಯವಾದಷ್ಟು ಬೆಂಕಿ ಕಡಿಮೆ ಇರುವಾಗಲೇ ನಂದಿಸುವ ಕೆಲಸ ಮಾಡಬೇಕು, ತಕ್ಷಣವೇ ಅಗ್ನಿಶಾಮಕ ಇಲಾಖೆಗೆ ತಿಳಿಸಬೇಕು.

ಮಂಜುನಾಥ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net