

ನೈಸ್ ಸಂಸ್ಥೆ ವಿರುದ್ಧ ದೌರ್ಜನ್ಯ, ಭ್ರಷ್ಟಾಚಾರ ಆರೋಪ
ರೈತ ಸಂಘ, ಸಂತ್ರಸ್ತರಿಂದ ಎಡಿಸಿಗೆ ಮನವಿ
ರಾಮನಗರ
ನೈಸ್ ಸಂಸ್ಥೆ ಭ್ರಷ್ಟಾಚಾರ ನಡೆಸಿದೆ ಮತ್ತು ರೈತರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ವಿರೋಧಿಸಿ ಮತ್ತು ಮಾಜಿ ಸಚಿವ ಜಯಚಂದ್ರ ಅವರಿಗೆ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ನೈಸ್ ಭೂ ಸಂತ್ರಸ್ತ ರೈತರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಹಗರಣಗಳ ಸರಮಾಲೆಯನ್ನೇ ಹೊತ್ತಿರುವ ನೈಸ್ ಕಂಪನಿಗೆ ನೀಡಿರುವ ಭೂಮಿಯನ್ನು ಹಿಂಪಡೆದು ರೈತರಿಗೆ ವಾಪಸ್ ನೀಡಬೇಕು. ಸಚಿವ ಜಯಚಂದ್ರ ಅವರಿಗೆ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಪ್ರತಿಭಟನಾಕಾರರು ಆಗ್ರಹಿಸಿದರು.
1997ರಲ್ಲಿ ನಂದಿ ಇನ್‌ರ್ಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ಸಂಸ್ಥೆಗೆ ಬೆಂಗಳೂರಿನಿಂದ ಮೈಸೂರಿನವರೆಗೆ ಸುಮಾರು 152 ಗ್ರಾಮಗಳ ರೈತರ ಸಾವಿರಾರು ಎಕರೆ ಭೂಮಿಯನ್ನು ಕೆಐಡಿಬಿ ಮೂಲಕ ವಶಪಡಿಸಿಕೊಂಡು ನೈಸ್ ಕಂಪನಿಗೆ ಹಸ್ತಾಂತರ ಮಾಡಲಾಗಿದೆ. ಆದರೆ, 27 ವರ್ಷ ಕಳೆದರೂ ನೆಲಮಂಗಲ ರಸ್ತೆಯಿಂದ ಹೊಸೂರು ರಸ್ತೆಯವರೆಗೆ ರಸ್ತೆ ನಿರ್ಮಾಣ ಮಾಡಿರುವುದನ್ನು ಬಿಟ್ಟರೆ ಉಳಿದ ಕಡೆ ಅಭಿವೃದ್ಧಿಯಾಗಿಲ್ಲ. ಸಂಸ್ಥೆ ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ಕಾಮಗಾರಿಗಳನ್ನು ನಡೆಸಿ ಅವ್ಯವಹಾರದಲ್ಲಿ ತೊಡಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರಾಂತ ರೈತಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್, ರಾಜ್ಯ ಉಪಾಧ್ಯಕ್ಷ ಎನ್. ವೆಂಕಟಾಚಲಯ್ಯ, ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ನಾರಾಯಣಪ್ಪ, ಕಾರ್ಯದರ್ಶಿ ಡಿ. ಚಂದ್ರಶೇಖರ, ಖಜಾಂಚಿ ದಿನೇಶ್ ಆರಾಧ್ಯ, ಉಪಾಧ್ಯಕ್ಷರಾದ ಸೋಮೇಶ್ವರ, ಸಂಪತ್‌ಕುಮಾರ್, ಕುಂಟೀರಪ್ಪ, ಸಂಘಟನಾ ಕಾರ್ಯದರ್ಶಿ ರಾಮಣ್ಣ, ಸಹಕಾರ್ಯದರ್ಶಿ ಶಶಿಕುಮಾರ್ ಮುಂತಾದವರಿದ್ದರು.
ಸದನ ಸಮಿತಿ ವರದಿಗೂ ಕಿಮ್ಮತ್ತಿಲ್ಲ
2020ರಲ್ಲಿ ಸುಪ್ರೀಂ ಕೋರ್ಟ್ ಸಹ ಕ್ರಮ ತೆಗೆದುಕೊಳ್ಳುವಂತೆ ತೀರ್ಪು ನೀಡಿತ್ತು. ಆದರೂ ಯಾವುದೇ ಕ್ರಮ ಜರುಗಿಸಲಿಲ್ಲ. ಸಾವಿರಾರು ಎಕರೆ ಭೂಕಬಳಿಕೆ ಮಾಡಲಾಗಿದ್ದು, ಕ್ರಮ ತೆಗೆದುಕೊಳ್ಳುವಂತೆ ನೈಸ್ ಕಂಪನಿಯ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ನೇಮಿಸಿದ್ದ ಸದನ ಸಮಿತಿಯೂ ವರದಿ ಸಲ್ಲಿಸಿತ್ತು. ಆದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ ಕಾಣದ ಪರಿಣಾಮ ಭೂಮಿ ವಾಪಸ್
2023ರ ಮಾರ್ಚ್ ತಿಂಗಳಲ್ಲಿ ಸರ್ಕಾರದ ಸಬ್ ಕಮಿಟಿ ಸಭೆ ಸೇರಿ ಇದನ್ನೆಲ್ಲ ಪರಿಶೀಲನೆ ಮಾಡಿ 27 ವರ್ಷ ಕಳೆದರೂ ಯಾವುದೇ ಅಭಿವೃದ್ಧಿಯಾಗದ ಕಾರಣ 1 ಕೋಟಿ ರೂ. ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಭೂಮಿಯನ್ನು ರೈತರಿಗೆ ವಾಪಸ್ ನೀಡಲು ಕ್ರಮವಹಿಸಬೇಕೆಂದು ಹೇಳಿದೆ. ಇದರ ಬಗ್ಗೆಯೂ ಯಾವುದೇ ಗಮನ ಹರಿಸಿಲ್ಲ . 2013ರ ಭೂ ಸ್ವಾಧೀನ ಕಾಯ್ದೆ ಪ್ರಕಾರ ಭೂ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಅದರ ಪ್ರಕಾರ ಪರಿಹಾರ ನೀಡಬೇಕಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನೈಸ್‌ನಿಂದ ರಿಯಲ್ ಎಸ್ಟೇಟ್ ದಂಧೆ
ನೈಸ್ ಕಂಪನಿಯ ವ್ಯಾಪ್ತಿಯಲ್ಲಿ ಬರುವ ಎಲ್ಲ ರೈತರ ಭೂಮಿಯ ಪಹಣಿಯಲ್ಲಿ ನೈಸ್ ಕಂಪನಿ ಹೆಸರಿನಲ್ಲಿ ದಾಖಲಾಗಿದ್ದು ಇದನ್ನು ಕೈಬಿಡಬೇಕು. ನೈಸ್ ಸಂಸ್ಥೆ ಕಾನೂನು ಮೀರಿ ರೈತರ ಭೂಮಿಯನ್ನು ವಶಪಡಿಸಿಕೊಂಡು ಗೂಂಡಾಗಿರಿ ಮತ್ತು ಪೊಲೀಸರನ್ನು ಬಳಸಿ ರೈತರಿಗೆ ತೊಂದರೆ ಕೊಡುತ್ತಿದ್ದು, ರಿಯಲ್ ಎಸ್ಟೇಟ್ ದಂಧೆಗಿಳಿದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.