

ರಾಮನಗರ
ಮಾನವೀಯ ಮೌಲ್ಯಗಳೇ ಕುಸಿದಿರುವ ಇಂದಿನ ಸಮಾಜದಲ್ಲಿ ಯಶಸ್ಸನ್ನು ಹಣ ಮತ್ತು ಅಧಿಕಾರದಿಂದ ಅಳೆಯಲಾಗುತ್ತಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ನಗರದ ಶಾಂತಿನಿಕೇತನ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಗತ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ಒಬ್ಬರ ಯಶಸ್ಸನ್ನು ಅವರು ಮಾಡುವ ಕೆಲಸದ ಮೂಲಕ ಅಳೆಯಲಾಗುತ್ತಿತ್ತು. ನಮ್ಮ ಶಾಲೆಗಳು ಮತ್ತು ತಂದೆ ತಾಯಿ ಸಹ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ಹೇಳಿಕೊಡುತ್ತಿದ್ದರು. ತಪ್ಪು ಮಾಡಿದ ತಕ್ಷಣ ತಿದ್ದುವ ಕೆಲಸ ಮಾಡುತ್ತಿದ್ದರು. ಹಿಂದೆ ಶಾಲೆಗಳಲ್ಲಿಯೂ ನೀತಿ ಪಾಠ ಇರುತ್ತಿತ್ತು. ಆದರೆ, ಇಂದು ಶಾಲೆ, ಮನೆಗಳಲ್ಲಿ ನೀತಿ ಪಾಠವೂ ಇಲ್ಲ, ಮಕ್ಕಳನ್ನು ತಿದ್ದಲು ಪಾಲಕರಿಗೆ ಸಮಯವೂ ಇಲ್ಲ. ಸಮಾಜದಲ್ಲಿ ದಾರಿ ತಪ್ಪಿದವರಿಗೆ ಹೆಚ್ಚು ಮನ್ನಣೆ ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ ಇಂದು ನಡೆಯುತ್ತಿರುವ ಎಲ್ಲ ಘಟನೆಗಳಿಗೆ ಮನುಷ್ಯನ ದುರಾಸೆಯೇ ಕಾರಣ. ಈ ರೋಗ ಅಂಟಿಕೊಂಡರೆ ಕಾನೂನು, ಮನುಷ್ಯತ್ವ ಯಾವುದಕ್ಕೂ ಬೆಲೆ ಇಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಮುಂದಿರುವವರನ್ನು ಕಂಡು ಕೊರಗುವುದಕ್ಕಿಂತ ಹಿಂದಿನವರನ್ನು ಕಂಡು ಇರುವುದರಲ್ಲೇ ತೃಪ್ತಿಪಡಿ.
ಸಮಾಜದಲ್ಲಿ ಬದಲಾವಣೆ ಆಗತ್ಯವಿದೆ. ಇದು ನನ್ನೊಬ್ಬನಿಂದ ಸಾಧ್ಯವೇ ಎಂದು ಪ್ರಶ್ನೆ ಮಾಡಿಕೊಂಡು ನಿರಾಶರಾಗುವುದಕ್ಕಿಂತ, ಬದಲಾವಣೆ ಎನ್ನುವುದು ನಮ್ಮಿಂದಲೇ ಆರಂಭವಾಗಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಆದರೆ ಈ ಬದಲಾವಣೆ ಎನ್ನುವುದು ನನ್ನ ಕಾಲದಲ್ಲಿ ಆಗುತ್ತದೆ ಎನ್ನುವ ನಂಬಿಕೆ ಇಲ್ಲ, ಬದಲಾವಣೆ ತರುವ ನಿಟ್ಟಿನಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನನ್ನ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಆರ್.ಕುಮಾರಸ್ವಾಮಿ ಮಾತನಾಡಿದರು. ಸಂಸ್ಥೆ ನಿರ್ದೇಶಕಿ ಸೌಮ್ಯ ಕುಮಾರ್, ಖಜಾಂಚಿ, ಪುಟ್ಟಸ್ವಾಮಯ್ಯ ಡಿ, ಸಿಇಒ ಕೆ.ವಿ. ಸಾಂಬಸದಾಶಿವರಾವ್, ಟಿ.ವಿ. ನಾರಾಯಣ್ , ದಿಲೀಪ್ ಮುಂತಾದವರು ಇದ್ದರು.
ಟಾಪ್ 10ರೊಳಗೆ ತರಲು ಪ್ರಯತ್ನ
ಡಿಡಿಪಿಯು ಸಿ.ಕೆ.ಗೋವಿಂದರಾಜು ಮಾತನಾಡಿ, ಪಠ್ಯದ ಜತೆಗೆ ಸಾಮಾನ್ಯಜ್ಞಾನ ಹೆಚ್ಚಿಸಿಕೊಳ್ಳಿ. ಇದರಿಂದ ಉನ್ನತ ಸ್ಥಾನಗಳನ್ನು ಪಡೆಯಲು ಸಾಧ್ಯ. ಪ್ರತಿಯೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಸರ್ಕಾರ ಪರೀಕ್ಷಾ ಮಾನದಂಡವನ್ನೇ ಬದಲಾವಣೆ ಮಾಡಿದೆ. 100 ಅಂಕಗಳಿಗೆ ಬದಲು 80 ಅಂಕದ ಪ್ರಶ್ನೆಪತ್ರಿಕೆ ಇರಲಿದೆ. ಉಳಿಕೆ 20 ಅಂಕ ಇಂಟರ್ನಲ್ಸ್ ಇರುತ್ತದೆ ಎಂದರು. ಭವಿಷ್ಯದಲ್ಲಿ ಜಿಲ್ಲೆಯನ್ನು ಫಲಿತಾಂಶದಲ್ಲಿ ಟಾಪ್ 10ರ ಒಳಗೆ ತರಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಗಾಂಧೀಜಿ ಹೋಗಿರಲಿಲ್ಲವೇ ಅಂತಾರೆ!
ಹಿಂದೆ ಜೈಲಿಗೆ ಹೋದವರ ಜತೆ ಸೇರಬೇಡ ಎಂದು ಪಾಲಕರು ಹೇಳಿಕೊಡುತ್ತಿದ್ದರು. ಸಮಾಜವೂ ಅಂತಹವರನ್ನು ದೂರವೇ ಇಡುತ್ತಿತ್ತು. ಆದರೆ ಇಂದು ಜೈಲಿಗೆ ಹೋಗಿ ಬಂದವರನ್ನು ಸೇಬಿನ ಹಾರ ಹಾಕಿ ನೂರಾರು ಮಂದಿ ಸ್ವಾಗತ ಕೋರುವ ನಾಚಿಕೆಯ ವ್ಯವಸ್ಥೆ ನಿರ್ಮಾಣವಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ, ಇವರೊಬ್ಬರೇ ಜೈಲಿಗೆ ಹೋಗಿದ್ದಾರಾ? ಗಾಂಧೀಜಿ ಜೈಲಿಗೆ ಹೋಗಿರಲಿಲ್ಲವೇ ಎನ್ನುತ್ತಾರೆ. ಇಂತಹವರನ್ನೇ ನಾವು ಕೂಡ ಆಯ್ಕೆ ಮಾಡುತ್ತಿದ್ದೇವೆ ಎಂದು ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.