

ಗಂಗಾಧರ್ ಬೈರಾಪಟ್ಟಣ ರಾಮನಗರ
ಲಕ್ಷಾಂತರ ರೂ. ವೆಚ್ಚದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ದೂರದ ಕಾಡಿಗೆ ಬಿಡಲಾಗಿದ್ದ ಆನೆಯೊಂದು ಮತ್ತೆ ವಾಪಸಾಗಿರುವುದು ರೈತರು ಮತ್ತು ಅರಣ್ಯ ಇಲಾಖೆ ತಲೆಬಿಸಿ ಹೆಚ್ಚಿಸಿದೆ.
ಚನ್ನಪಟ್ಣಣ - ರಾಮನಗರ ವ್ಯಾಪ್ತಿಗೆ ಒಳಗೊಂಡಿರುವ ತೆಂಗಿನಕಲ್ಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಜಮೀನುಗಳಿಗೆ ಲಗ್ಗೆ ಇಟ್ಟು ನಷ್ಟ ಉಂಟು ಮಾಡುತ್ತಿದ್ದ ಮಖ್ನಾ ಆನೆಯನ್ನು ಸೆರೆ ಹಿಡಿದು ದೂರದ ಕಾಡಿಗೆ ಬಿಡಲಾಗಿತ್ತು. ಇದೀಗ ಕೆಲವು ದಿನಗಳ ಹಿಂದೆ ಈ ಆನೆ ವಾಪಸ್ ಬಂದಿದ್ದು, ಹಿಂದಿನ ಚಾಳಿ ಮುಂದುವರಿಸಿರುವುದು ಈ ಭಾಗದ ರೈತರ ನಿದ್ದೆಗೆಡುವಂತೆ ಮಾಡಿದೆ.
ಎಂಎಂ ಹಿಲ್ಸ್‌ಗೆ ಬಿಡಲಾಗಿತ್ತು
ಆನೆಗಳ ಗುಂಪು ಸೇರದೆ ಒಂಟಿಯಾಗಿ ದಾಳಿ ನಡೆಸುತ್ತಿದ್ದ ಮಖ್ನಾ ಆನೆಯನ್ನು ಸೆರೆ ಹಿಡಿಯುವ ಸಲುವಾಗಿ ಸಾಕಾನೆಗಳನ್ನು ಕರೆಸಿ 2022ರ ಆಗಸ್ಟ್‌ನಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಒಂದು ವಾರಕ್ಕೂ ಹೆಚ್ಚು ಕಾಲ ಹುಡುಕಾಟದ ನಂತರ ಆನೆಯನ್ನು 2022ರ ಆಗಸ್ಟ್ 14ರಂದು ಅರಣ್ಯ ಇಲಾಖೆ ಸೆರೆ ಹಿಡಿದಿತ್ತು. ನಂತರ ಆನೆಯನ್ನು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು. ಆನೆಯ ಮೂಲ ಸ್ಥಾನಕ್ಕೂ ಆನೆಯನ್ನು ಬಿಟ್ಟ ಜಾಗಕ್ಕೂ ಸುಮಾರು 120 ಕಿ.ಮೀ. ದೂರ ಇತ್ತು.
ಪಟ್ಟು ಬಿಡದೆ ವಾಪಸ್
ಸಾಮಾನ್ಯವಾಗಿ ದೂರದ ಪ್ರದೇಶಕ್ಕೆ ಬಿಟ್ಟರೂ ಅವು ಸ್ವಸ್ಥಾನಕ್ಕೆ ಮರಳಲು ಪ್ರಯತ್ನ ಮಾಡುತ್ತವೆ. ಈ ವೇಳೆ ಕೆಲವು ಯಶಸ್ಸು ಸಾಧಿಸಿದರೆ, ಮತ್ತೆ ಕೆಲವು ದಾರಿ ತಪ್ಪುತ್ತವೆ, ಮತ್ತೆ ಕೆಲವು ಪ್ರಾಣ ಕಳೆದುಕೊಳ್ಳುತ್ತವೆ. ಚುರುಕು ಬುದ್ಧಿಯ ಆನೆ ಸಹ ಸ್ವಸ್ಥಾನಕ್ಕೆ ಮರಳುವುದರಲ್ಲಿ ಎತ್ತಿದಕೈ. ತೆಂಗಿನಕಲ್ಲು ಅರಣ್ಯದಿಂದ ಸೆರೆ ಹಿಡಿದು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶಕ್ಕೆ ಬಿಟ್ಟರೂ ಪಟ್ಟು ಬಿಡದ ಮಖ್ನಾ ಆನೆ ಹಲವಾರು ಪ್ರಯತ್ನಗಳ ನಂತರ ಮತ್ತೆ ಮರಳಿದೆ. ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಕಾವೇರಿ ನದಿ ವಿಭಜಿಸುತ್ತಿದೆ. ಇಲ್ಲಿಗೆ ಸುಮಾರು 2 ತಿಂಗಳ ಹಿಂದೆಯೇ ಬಂದ ಆನೆ, ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಆಗುವವರೆಗೂ ಕಾಯ್ದು ರಾಮನಗರದ ಸಂಗಮ, ಸಾತನೂರು ಅರಣ್ಯ ಪ್ರದೇಶವನ್ನು ದಾಟಿ ಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿ ನದಿ ದಾಟುವ ವೇಳೆಯೇ ಆನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡಿದ್ದಾರಾದರೂ ಇದು ಫಲ ನೀಡಲಿಲ್ಲ.
ಹಿಮ್ಮೆಟ್ಟಿಸುವ ಪ್ರಯತ್ನ
ಈಗ ಬಂದಿರುವ ಮಖ್ನಾ ಆನೆಯನ್ನು ಹಿಮ್ಮೆಟ್ಟಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿದೆ. ಆದರೆ ಕಾರ್ಯಾಚರಣೆ ಅರಣ್ಯ ಇಲಾಖೆಗೆ ಹಣ ಮಾಡಿಕೊಳ್ಳುವ ಮೂಲ ಎನ್ನುವ ಆರೋಪ ಕೇಳಿ ಬಂದಿದೆ. ಈಗಾಗಲೇ ಸೆರೆ ಹಿಡಿದಿದ್ದ ಆನೆಯೇ ಮತ್ತೆ ದಾಳಿ ಮಾಡುತ್ತಿರುವುದು ರೈತರ ಆತಂಕ ಹೆಚ್ಚಿಸಿದೆ. ರೈತರ ಆರೋಪದ ಹೊರತಾಗಿಯೂ ಅರಣ್ಯ ಇಲಾಖೆ ಪ್ರತಿದಿನ ಆನೆಯ ಚಲನವಲನದ ಮೇಲೆ ನಿಗಾ ಇಡುವ ಮೂಲಕ ಅದನ್ನು ಹಿಮ್ಮೆಟ್ಟಿಸುವ ಯತ್ನದಲ್ಲಿ ಮಗ್ನವಾಗಿದೆೆ.
ಕಾರ್ಯಾಚರಣೆ ಮೂಲಕ ಸೆರೆ ಹಿಡಿದು ದೂರದ ಅರಣ್ಯಕ್ಕೆ ಬಿಡಲಾಗಿದ್ದ ಆನೆ ಮರಳಿ ಬಂದಿದೆ. ಇದನ್ನು ಹಿಮ್ಮೆಟ್ಟಿಸುವ ಕೆಲಸ ಪ್ರಗತಿಯಲ್ಲಿದೆ.
ದೇವರಾಜ್, ಡಿಎಫ್‌ಒ, ಪ್ರಾದೇಶಿಕ ಅರಣ್ಯ ವಿಭಾಗ ರಾಮನಗರ
--
ಸೆರೆ ಹಿಡಿದಿದ್ದ ಆನೆ ಮತ್ತೆ ಬಂದು ಉಪಟಳ ನೀಡಲು ಪ್ರಾರಂಭಿಸಿದೆ. ಆನೆ ಸೆರೆ ಕಾರ್ಯಾಚರಣೆ ಎನ್ನುವುದು ಕೇವಲ ಕಣ್ಣೊರೆಸುವ ನಾಟಕ. ಅರಣ್ಯ ಇಲಾಖೆ ಇಂತಹ ನಾಟಕ ಆಡುವುದನ್ನು ನಿಲ್ಲಿಸಲಿ.
ಲೋಕೇಶ್, ರೈತ, ಬಿ.ವಿ.ಹಳ್ಳಿ