

ಕೈಲಾಂಚ (ರಾಮನಗರ): ಹೋಬಳಿಯ ಅವ್ವೇರಹಳ್ಳಿ ಗ್ರಾಮದಲ್ಲಿ ನಾಲ್ಕು ಆನೆಗಳ ಗುಂಪು ಮಂಗಳವಾರ ರಾತ್ರಿ ಧಾಳಿ ನಡೆಸಿ ರೈತರ ತೆಂಗಿನಮರ, ನೀರಾವರಿ ಪರಿಕರ, ಮಾವಿನಮರ ನಾಶ ಪಡಿಸಿವೆ.
ರೇವಣಸಿದ್ದೇಶ್ವರ ಬೆಟ್ಟ ಕೈಲಾಂಚ ಕವಣಾಪುರ ಮಧ್ಯೆದ ಗೋಮಾಳ ಜಮೀನಿನಲ್ಲಿ ನಾಲ್ಕು ಆನೆಗಳ ಗುಂಪು ಕಾಣಿಸಿಕೊಂಡಿದ್ದವು. ಸ್ಥಳೀಯ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಆನೆ ಕಾರ್ಯಾಚರಣೆ ಪಡೆಯೊಂದಿಗೆ ರಾತ್ರಿ 9 ಗಂಟೆವರೆಗೂ ಕಾರ್ಯಾಚರಣೆ ನಡೆಸಿ ತೆಂಗಿನಕಲ್ಲು ಅರಣ್ಯದತ್ತ ಆನೆಗಳನ್ನು ಓಡಿಸಿದ್ದರು.
ಆದರೆ ಆನೆಗಳು ಹೋದ ದಾರಿಯಲ್ಲೇ ಹಿಂತಿರುಗಿದ್ದು, ಅವ್ವೇರಹಳ್ಳಿ ಗ್ರಾಮದ ಮನೆಯ ಬಳಿಯೇ ತೆಂಗಿನಮರ ಉರುಳಿಸಿ ಹಾನಿ ಮಾಡಿವೆ. ಕಾಳಯ್ಯ, ಚಂದ್ರಶೇಖರಯ್ಯ, ಜ್ಯೋತಿಲಿಂಗಯ್ಯ ಎಂಬುವರ ತೆಂಗಿನಮರ, ಮಾವು, ನೀರಾವರಿ ಪರಿಕರ ನಾಶಪಡಿಸಿವೆ.
ಹಂದಿಗೊಂದಿ ಸೇರಿದ ಆನೆಗಳು : ಅವ್ವೇರಹಳ್ಳಿ ಮುಖಾಂತರ ಬಂದ ಆನೆಗಳು ವಡ್ಡರಹಳ್ಳಿ ಬಳಿ ಅರ್ಕಾವತಿ ನದಿ ದಾಟಿ ಹಂದಿಗೊಂದಿ ಅರಣ್ಯದತ್ತ ಸಾಗಿವೆ. ಮತ್ತೆ ಆನೆಗಳು ವಾಪಸ್ ಬರುವ ಲಕ್ಷಣ ಇದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ನೇರವಾಗಿ ತೆಂಗಿನಕಲ್ಲು ಅರಣ್ಯ ಸೇರಿಸಿ ಅವುಗಳ ಸ್ವಸ್ಥಾನ ಸೇರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಂಗಳವಾರ ಸಂಜೆಯಿಂದಲೇ ಆನೆಗಳನ್ನು ಅವುಗಳ ಸ್ವಸ್ಥಾನಕ್ಕೆ ಅಟ್ಟಲು ಪ್ರಯತ್ನಿಸಲಾಗಿದೆ. ಆದರೆ ಮತ್ತೆ ಹಂದಿಗೊಂದಿಯತ್ತ ಬಂದಿವೆ. ಅವುಗಳ ವಾಸಸ್ಥಾನ ಪತ್ತೆ ಹಚ್ಚುವ ಕಾರ್ಯ ಸಾಗಿದೆ ಅವುಗಳನ್ನು ಪತ್ತೇಹಚ್ಚಿ ಮತ್ತೆ ಸ್ವಸ್ಥಾನದ ಕಡೆ ಅಟ್ಟುವ ಕೆಲಸ ಇಲಾಖೆ ಮಾಡಲಿದೆ.
ದಿನೇಶ್, ವಲಯ ಅರಣಭ್ಯಾಧಿಕಾರಿ, ರಾಮನಗರ.