

ಗಂಗಾಧರ್ ಬೈರಾಪಟ್ಟಣ ರಾಮನಗರ
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಈಗಾಗಲೇ ಮತದಾರರ ಮನ ಮುಟ್ಟುವ ಕಸರತ್ತು ರಾಜಕೀಯ ಪಕ್ಷಗಳಲ್ಲಿ ಭರ್ಜರಿಯಾಗಿಯೇ ನಡೆದಿದೆ.
ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳ ಹೊರತಾಗಿಯೂ ರಾಜಕೀಯ ಪಕ್ಷಗಳು ಮತದಾರರಿಗೆ ಗಿಫ್ಟ್ ಪಾಲಿಟಿಕ್ಸ್ ನಡೆಸುತ್ತಿರುವ ಜತೆಗೆ ಬಾಡೂಟ ಮತ್ತು ಎಣ್ಣೆ ಸಮಾರಾಧನೆಯನ್ನೂ ಭರ್ಜರಿಯಾಗಿಯೇ ಮಾಡಿಸುತ್ತಿದ್ದು, ಇದರಿಂದ ಒಂದಿಷ್ಟು ವಲಯಗಳಿಗೆ ಆರ್ಥಿಕ ಲಾಭವೂ ಆಗುತ್ತಿದೆ.
ಬಾಡೂಟದ ಖುಷಿ
ಚುನಾವಣೆ ಸಂದರ್ಭದಲ್ಲಿ ಬಾಡೂಟ ಸಾಮಾನ್ಯ ಎನ್ನುವಂತೆ ಆಗಿದೆ. ಮೇಲ್ನೋಟಕ್ಕೆ ಯಾವುದೇ ವ್ಯಕ್ತಿ ಹೆಸರಲ್ಲಿ ಬಾಡೂಟ ನಡೆಯುತ್ತಿದ್ದರೂ ಇದರ ಹಿಂದೆ ರಾಜಕೀಯ ಪಕ್ಷದ ನೆರಳು ಇದ್ದೇ ಇದೆ. ಸಮಾವೇಶಗಳ ಜತೆಗೆ ಗ್ರಾಮೀಣ ಭಾಗದಲ್ಲಿಯೂ ಅಲ್ಲಲ್ಲಿ ಪಕ್ಷದ ಕಾರ್ಯಕರ್ತರಿಗೆ ಬಾಡೂಟ ಹಾಕಿಸುವ, ಎಣ್ಣೆ ಕೊಡಿಸುವ ಕೆಲಸವೂ ಜೋರಾಗಿಯೇ ನಡೆಯುತ್ತಿದೆ. ಇದರಿಂದಾಗಿ ಸ್ಥಳೀಯವಾಗಿ ಆರ್ಥಿಕತೆಯೂ ಹೆಚ್ಚುತ್ತಿದೆ. ಮೇಕೆ ಕುರಿ ಹಾಗೂ ಕೋಳಿಗೆ ಬೇಡಿಕೆ ಹೆಚ್ಚಿದ್ದರೆ ಮತ್ತೊಂದೆಡೆ ಬಾಡೂಟ ಸಿದ್ಧಪಡಿಸುವ ಅಡುಗೆ ತಯಾರಕರಿಗೂ ಬೇಡಿಕೆ ಹೆಚ್ಚಿದೆ. ಬಹುತೇಕ ಯಾವುದೇ ಭಟ್ಟರನ್ನು ಕೇಳಿದರೂ ತಮಗೆ ಸಮಯವೇ ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಎಣ್ಣೆ ಸಿಗುತ್ತೆ ಆದರೂ..?
ಬಾಡೂಟದ ಜತೆಗೆ ಎಣ್ಣೆ ಹಂಚುವ ಕೆಲಸವೂ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ ಮೊದಲಿನ ರೀತಿ ಮದ್ಯ ಸರಬರಾಜು ಅಷ್ಟೊಂದು ಸಲೀಸಾಗಿಲ್ಲ. ಮದ್ಯದಂಗಡಿಗಳಲ್ಲಿ ನಿಯಮಿತವಾಗಿ ಮದ್ಯ ಮಾರಾಟ ನಡೆಸಲಾಗುತ್ತಿದ್ದು, ಪ್ರತಿದಿನ ಸರಬರಾಜು ಮತ್ತು ಮಾರಾಟದ ಲೆಕ್ಕ ಕೊಡಲೇಬೇಕಿದೆ. ಇದರ ಜತೆಗೆ ಕಳೆದ ವರ್ಷ ಮಾರಾಟದ ಲೆಕ್ಕವನ್ನೂ ಕೊಡಬೇಕಿದ್ದು, ಇದು ಮಾರಾಟಗಾರರು ಮತ್ತು ಪೂರೈಕೆದಾರರಿಗೆ ತಲೆ ನೋವು ತಂದೊಡ್ಡಿದೆ. ಆದರೂ ಅಷ್ಟೋ ಇಷ್ಟೋ ಎಣ್ಣೆಯನ್ನು ಮತದಾರರಿಗೆ ಹಂಚುವ ಕೆಲಸವೂ ನಡೆಯುತ್ತಿದೆ.
ಚುನಾವಣಾ ದಿನಾಂಕ ಘೋಷಣೆ ಆಗಿ, ನೀತಿಸಂಹಿತೆ ಜಾರಿಯಾದ ನಂತರ ಎಣ್ಣೆ ಮಾರಾಟದ ಮೇಲೆ ಸಾವಿರ ಕಣ್ಣು ಬೀಳುವುದು ಖಂಡಿತ.
ಯುಗಾದಿಗೂ ಸಿದ್ಧತೆ
ಕಳೆದ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಯುಗಾದಿ ಆಚರಣೆಗೆ ಅಡ್ಡಿಯುಂಟು ಮಾಡಿತ್ತು. ಆದರೆ ಈ ಬಾರಿ ಯುಗಾದಿಗೆ ಯಾವುದೇ ಅಡೆತಡೆ ಇಲ್ಲ. ಇದರ ಲಾಭ ಪಡೆದುಕೊಳ್ಳಲು ಮುಂದಾಗಿರುವ ರಾಜಕೀಯ ಪಕ್ಷಗಳು ತಮ್ಮ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ದಿನಸಿ, ಹೊಸತೊಡಕಿಗೆ ಕೋಳಿ, ಮಾಂಸ ಪೂರೈಕೆಗೆ ಸಿದ್ಧತೆ ಮಾಡಿಕೊಂಡಿವೆ. ಈಗಾಗಲೇ ಕೆಲವು ಕಡೆಗಳಲ್ಲಿ ಸೀರೆ, ಶರ್ಟ್, ಪ್ಯಾಂಟ್‌ಪೀಸ್, ಪಂಚೆಗಳು ಮನೆಗಳಿಗೆ ರವಾನೆ ಆಗಿದ್ದು, ಯುಗಾದಿ ಹಿಂದಿನ ದಿನ ದಿನಸಿ ಸೇರಿ ಉಳಿದ ವಸ್ತುಗಳು ಮತದಾರರ ಮನೆ ಸೇರಲಿವೆ.
ಇನ್ನು ಯುಗಾದಿ ವೇಳೆ ಎರಡು ದಿನ ಜೂಜಾಟವೂ ಸಾಮಾನ್ಯ ಎನ್ನುವಂತೆ ಆಗಿದೆ. ಕಳೆದ ಹಲವಾರು ವರ್ಷಗಳಿಂದಲೂ ಪೊಲೀಸರು ಜೂಜಾಟಕ್ಕೆ ಅವಕಾಶ ನೀಡಿಲ್ಲವಾದರೂ, ಈ ಎರಡು ದಿನಗಳು ಕದ್ದು ಮುಚ್ಚಿ ಜೂಜಾಡುವುದು ಭರ್ಜರಿಯಾಗಿಯೇ ನಡೆದಿದೆ.
ಜೂಜಾಟ ನಿಷೇಧ
ಯುಗಾದಿ ಹಬ್ಬದ ಆಚರಣೆ ಸಮಯದಲ್ಲಿ ಹೋಟೆಲ್, ಕಲ್ಯಾಣ ಮಂಟಪ, ವಸತಿ ಗೃಹಗಳು, ಕ್ಲಬ್ಗಳು, ಮನೆ, ತೋಟದ ಮನೆ, ರಸ್ತೆ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳದಲ್ಲಿ ಟೆಂಟ್ ಹಾಕಿಕೊಂಡು ಜೂಜಾಡುವುದನ್ನು ಪೊಲೀಸ್ ಇಲಾಖೆ ನಿರ್ಬಂಧಿಸಿದೆ. ಈ ನಿಯಮ ಭಾನುವಾರದಿಂದಲೇ ಜಾರಿಗೆ ಬಂದಿದ್ದು, ಜೂಜಾಡುವುದು ಹಾಗೂ ಜೂಜಿಗೆ ಪ್ರೋತ್ಸಾಹ ನೀಡುವುದು ಕಂಡುಬಂದರೆ ಅಂತಹವರ ವಿರುದ್ದ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸಾಲು ರಜೆ
ಹಿಂದುಗಳಿಗೆ ಬುಧವಾರ ಹೊಸ ವರ್ಷಾಚರಣೆ ಯುಗಾದಿ ನಡೆಯಲಿದ್ದು, ಗುರುವಾರ ಮತ್ತು ಶುಕ್ರವಾರ ರಜೆ ಪಡೆದುಕೊಂಡರೆ ಸರ್ಕಾರಿ ಕಚೇರಿಗಳು ಬಹುತೇಕ ಖಾಲಿಯಾಗಲಿವೆ. ಶನಿವಾರ ನಾಲ್ಕನೇ ಶನಿವಾರ, ವಾರಾಂತ್ಯದ ರಜೆ ಭಾನುವಾರ ಸೇರಿ ಒಟ್ಟು 5 ದಿನ ರಜೆ ಆಗಲಿದ್ದು, ಬಹುತೇಕ ಎಲ್ಲ ಸಿಬ್ಬಂದಿ ಇದರ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ, ರಜೆ ಪಡೆಯುವ ಕಸರತ್ತಿಗೆ ಹಿನ್ನಡೆಯಾಗಿದೆ. ಆದರೂ ಕೆಲವು ಸಿಬ್ಬಂದಿ ರಜೆ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಇದರೊಂರಿಗೆ ಯುಗಾದಿ ನಂತರ ಸುಮಾರು ನಾಲ್ಕು ದಿನ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ವಿಳಂಬವಾಗುವ ಸಾಧ್ಯತೆ ಇದೆ.