

ಅಸೆಂಬ್ಲಿ ಚುನಾವಣೆ ವೇಳೆ ಕರ್ತವ್ಯನಿರ್ವಹಿಸಿದ ಖಾಸಗಿ ವಾಹನ ಮಾಲೀಕರ ಅಳಲು
3 ತಿಂಗಳಾದರೂ ಕೈಸೇರಿಲ್ಲ ಹಣ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದಿದೆ. ಆದರೆ, ಚುನಾವಣೆ ಕರ್ತವ್ಯಕ್ಕೆ ಜಿಲ್ಲಾಡಳಿತ ಬಳಸಿಕೊಂಡ ಖಾಸಗಿ ವಾಹನಗಳಿಗೆ ಇನ್ನೂ ಬಾಡಿಗೆ ಹಣ ಸಂದಾಯವಾಗಿಲ್ಲ. ಈ ಹಣಕ್ಕಾಗಿ ವಾಹನಗಳ ಮಾಲೀಕರು ಚಾತಕ ಪಗಳಂತೆ ಕಾಯುತ್ತಿದ್ದಾರೆ.
ಜನತೆಗೆ ಹಲವು ಗ್ಯಾರಂಟಿಗಳ ಭರವಸೆ ನೀಡಿದ ಕಾಂಗ್ರೆಸ್ ಭರ್ಜರಿ ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದದ್ದು ಇತಿಹಾಸ. ಆದರೆ, ಹಗಲು ರಾತ್ರಿ ಎನ್ನದೇ ಚುನಾವಣೆಯಲ್ಲಿ ದುಡಿದ ತಮ್ಮ ವಾಹನಗಳ ಬಾಡಿಗೆ ಹಣಕ್ಕಾಗಿ ಮಾಲೀಕರು ಕಾದು ಕುಳಿತಿದ್ದಾರೆ.
3 ತಿಂಗಳಾದರೂ ಕೈಸೇರದ ಹಣ!
ಚುನಾವಣೆಯಲ್ಲಿ ಬಂದೋಬಸ್ತ್ ಕಾರ್ಯಕ್ಕೆ ಪೊಲೀಸ್ ಇಲಾಖೆಯಿಂದ ಹಲವು ಖಾಸಗಿ ವಾಹನಗಳನ್ನು ಬಾಡಿಗೆ ಪಡೆಯಲಾಗಿತ್ತು. ಸಿಬ್ಬಂದಿ ಹಾಗೂ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದವರ ಓಡಾಟಕ್ಕಾಗಿ ಇಡೀ ಜಿಲ್ಲೆಯಿಂದ 120ಕ್ಕೂ ಹೆಚ್ಚು ಕಾರು, ಕ್ಯಾಂಟರ್ ಮತ್ತಿತರ ಖಾಸಗಿ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು. ಚುನಾವಣೆ ನೀತಿಸಂಹಿತೆ ಆರಂಭವಾದ ದಿನದಿಂದ ಫಲಿತಾಂಶ ೂಷಣೆಯಾಗುವವರೆಗೆ ಈ ವಾಹನಗಳನ್ನು ದಿನದ ಬಾಡಿಗೆ ಆಧಾರದಲ್ಲಿ ಬಳಕೆ ಮಾಡಲಾಗಿತ್ತು.
ಜಿಲ್ಲೆಯ ನಾಲ್ಕು ಕ್ಷೇತ್ರಗಳ ಚುನಾವಣಾ ಬಂದೋಬಸ್ತ್ಗಾಗಿ ಪೊಲೀಸ್ ಇಲಾಖೆ ಆರ್ಟಿಒ ಮೂಲಕ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದಿತ್ತು. ಇನ್ನೋವಾ, ಟಾಟಾ ಸುಮೋ, ಕ್ವಾಲಿಸ್ ಸೇರಿ 10 ಸೀಟಿನ ಕಾರುಗಳು ಹಾಗೂ ಕ್ಯಾಂಟರ್ ವಾಹನಗಳನ್ನು ಡೀಸೆಲ್ ಮಾತ್ರ ತುಂಬಿಸಿ ಹಲವು ದಿನಗಳ ಕಾಲ ಬಳಸಲಾಗಿದೆ.
ಮೂಲಗಳ ಪ್ರಕಾರ ಈ ಎಲ್ಲ ಖಾಸಗಿ ವಾಹನಗಳಿಗೆ ಸುಮಾರು 60 ಲಕ್ಷ ರೂ. ಬಾಡಿಗೆ ಹಣ ನೀಡಬೇಕಿದೆ. ಆದರೆ, ಈ ಹಣ ಬಿಡುಗಡೆಯಾಗದ ಕಾರಣ, ವಾಹನ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನದ ಬಾಡಿಗೆಯನ್ನೇ ನಂಬಿ ಜೀವನ ಸಾಗಿಸುವ ಖಾಸಗಿ ವಾಹನಗಳ ಮಾಲೀಕರು ದುಡಿದ ಹಣವೂ ಕೈ ಸೇರದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಕಿ ಹಣಕ್ಕಾಗಿ ಸಂಬಂಧಿಸಿದ ಕಚೇರಿಯ ಬಾಗಿಲು ಬಡಿಯುತ್ತಿದ್ದಾರೆ.
ಚುನಾವಣೆ ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಓಡಾಟಕ್ಕೆ ನಮ್ಮ ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ತಿಂಗಳುಗಳ ಕಾಲ ಕೇವಲ ಡೀಸೆಲ್ ತುಂಬಿಕೊಂಡು ಕರ್ತವ್ಯ ಮಾಡಿದ್ದೇವೆ. ಇದುವರೆಗೂ ಬರಬೇಕಾದ ಬಾಡಿಗೆ ಹಣ ಬಂದಿಲ್ಲ. ಇದರಿಂದ ಸಾಕಷ್ಟು ಸಮಸ್ಯೆಯಾಗಿದೆ. ತಿಂಗಳ ಕಂತು (ಇಎಂಐ) ಕಟ್ಟುವುದು ಸೇರಿ ಜೀವನ ನಿರ್ವಹಣೆಗೆ ಬಾಡಿಗೆ ಹಣವೇ ಆಧಾರವಾಗಿದೆ. ದಯವಿಟ್ಟು ಸಂಬಂಧಿಸಿದವರು ಬಾಕಿ ಹಣ ಚುಕ್ತಾ ಮಾಡಿದರೆ ಬದುಕಿಕೊಳ್ಳುತ್ತೇವೆ.
ಹೆಸರು ಹೇಳಲಿಚ್ಛಿಸದ, ಕಾರು ಮಾಲೀಕ