ರಾಮನಗರದಲ್ಲಿ ಹನಿ ನೀರಿಗೂ ತತ್ವಾರ

Rmgm-Ph-001-Neeru Pravaite Tanker Story Photo- Rmgm -1-5-2024
Published on

ಖಾಸಗಿ ಟ್ಯಾಂಕರ್ ಮೊರೆ ಹೆಚ್ಚಿನ ಹಣ ವಸೂಲಿ ಕೊಳಾಯಿ ಇದ್ದರೂ ತಪ್ಪದ ಬವಣೆ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ನಗರದಲ್ಲಿ ಅರ್ಕಾವತಿ, ಕಾವೇರಿ ನೀರು ಸಮರ್ಪಕ ಸರಬರಾಜು ಆಗದಿರುವುದರಿಂದ ಹನಿ ನೀರಿಗೂ ನಗರದಲ್ಲಿ ಪಡಿಪಾಟಲು ಪಡುವಂತಾಗಿದ್ದು, ನೀರಿನ ಬವಣೆ ನೀಗಿಸಲು ಜನರು ಖಾಸಗಿ ಟ್ಯಾಂಕರ್ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ.

ಪ್ರತಿ ವಾರ್ಡಿನಲ್ಲಿಯೂ ಜನರಿಗೆ ನೀರು ಕೊರತೆಯಾಗದಂತೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದು ರಾಮನಗರ ನಗರಸಭೆ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ನಗರದ ತುಂಬೆಲ್ಲ ಖಾಸಗಿ ಟ್ಯಾಂಕರ್‌ಗಳ ಓಡಾಟ ಹೆಚ್ಚಾಗಿದೆ. ಅಲ್ಲಲ್ಲಿ ಮನೆಗಳ ಮುಂದೆ ಖಾಸಗಿ ಟ್ಯಾಂಕರ್‌ಗಳು ಕಂಡುಬರುತ್ತಿದ್ದು, ಜನರು ವಿಧಿ ಇಲ್ಲದೆ ಹೆಚ್ಚಿನ ದರ ನೀಡಿ ನೀರು ಪಡೆಯುವ ಸನ್ನಿವೇಶ ನಿರ್ಮಾಣವಾಗಿದೆ.

ಆಸರೆಯಾಗಿದ್ದ ಕೊಳವೆಬಾವಿ :

ರಾಮನಗರದ ನಾಗರಿಕರಿಗೆ 12 ರಿಂದ 31ನೇ ವಾರ್ಡಿಗೆ ಕಾವೇರಿ, 1 ರಿಂದ 12ನೇ ವಾರ್ಡಿನ ಜನರಿಗೆ ಅರ್ಕಾವತಿ ನದಿ ನೀರು ಪೂರೈಸಲಾಗುತ್ತಿದೆ. ಜಲಮಂಡಳಿ ಮನೆಮನೆಗೆ ಕೊಳಾಯಿ ಸಂಪರ್ಕ ನೀಡಿ ನೀರು ಸರಬರಾಜು ಮಾಡುತ್ತಿದೆ. ಇದರ ಜತೆಗೆ ನಗರಸಭೆಯಿಂದ ಕೊರೆಸಿರುವ ಕೊಳವೆಬಾವಿಗಳು, ಸಾರ್ವಜನಿಕರು ಸ್ವಂತವಾಗಿ ಕೊರೆಯಿಸಿರುವ ನೂರಾರು ಕೊಳವೆಬಾವಿಗಳು ನಗರದ ಜನರ ನೀರಿನ ಕೊರತೆ ನೀಗಿಸುತ್ತಿವೆ. ಪ್ರಸ್ತುತ ಬರಗಾಲ ಮತ್ತು ನದಿಯಲ್ಲಿ ನೀರಿಲ್ಲದೆ ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳಲ್ಲಿ ನೀರಿಲ್ಲದೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದಲ್ಲದೆ, ರಾಮನಗರದ 31 ವಾರ್ಡಿನ ಜನರೂ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಜಲಮಂಡಳಿ ಸಮರ್ಪಕ ನೀರು ಸರಬರಾಜು ಮಾಡಲು ವಿಫಲವಾಗಿದೆ ಎಂಬುದು ಸಾರ್ವಜನಿಕರ ದೂರಾಗಿದೆ.

ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೀರು ಬರುವ ಸ್ಥಳ ಗುರುತಿಸಿ 2 ರಿಂದ 3 ಕೊಳವೆಬಾವಿ ಕೊರೆಯಿಸಿ ಮೋಟಾರ್ ಅಳವಡಿಸಿ ಅಲ್ಲಿಂದಲೇ ನೇರವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ನಗರಸಭೆ ಮುಂದಾಗಿದೆ.

ಬೇಡಿಕೆಗೆ ತಕ್ಕಂತಿಲ್ಲ ಪೂರೈಕೆ

ಜನರಿಗೆ ನೀರಿನ ಕೊರತೆಯಾಗದಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ನಗರಸಭೆ ಮುಂದಾಗಿದೆ. ಆದರೆ, ನಗರಸಭೆಯ ಟ್ಯಾಂಕರ್ ನೀರಿನಿಂದ ಜನರ ಬವಣೆ ನೀಗಿಸಲು ಸಾಧ್ಯವಾಗುತ್ತಿಲ್ಲ. ದಿನೇದಿನೆ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಜನರ ಬೇಡಿಕೆಗನುಗುಣವಾಗಿ ನೀರೊದಗಿಸಲು ಸಾಧ್ಯವಾಗದ ಸನ್ನಿವೇಶ ನಿರ್ಮಾಣವಾಗಿದೆ.

33 ಟ್ಯಾಂಕರ್‌ಗಳಲ್ಲಿ ನಗರದ ವಾರ್ಡಿನ ಜನರಿಗೆ ನೀರು ಒದಗಿಸಲಾಗುತ್ತಿದೆ. ಆದರೂ, ಈ ನೀರು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಇತ್ತ, ಕೊಳಾಯಿಗಳಲ್ಲಿ 20-25 ದಿನ ಕಳೆದರೂ ನೀರು ಬರುತ್ತಿಲ್ಲ. ಪ್ರತಿದಿನ ಹನಿ ನೀರಿಗೂ ಅಲೆಯಬೇಕಾಗಿದೆ. ಆದ್ದರಿಂದ ಇನ್ನೂ ಹೆಚ್ಚಿನ ಟ್ಯಾಂಕರ್ ಮೂಲಕ ನೀರೊದಗಿಸಿ ನೀರಿನ ಕೊರತೆ ನೀಗಿಸಬೇಕು ಎನ್ನುತ್ತಾರೆ ಸಾರ್ವಜನಿಕರು.


ಬಡ ಜನರಿಗೆ ತಟ್ಟಿದ ಬಿಸಿ

ಟ್ಯಾಂಕರ್ ಮೂಲಕ ಸರಬರಾಜಾಗುತ್ತಿರುವ ನಗರಸಭೆ ನೀರು ಕೂಡ ಸಾಕಾಗುತ್ತಿಲ್ಲ. ಮನಗಳಲ್ಲಿ ಟ್ಯಾಂಕ್ ಮತ್ತು ನೀರು ಶೇಖರಣೆಗೆ ಜಾಗ ಇಲ್ಲದವರು ಒಂದೆರಡು ಕೊಡದಲ್ಲಿ ನೀರು ಹಿಡಿದುಕೊಂಡು ಮತ್ತೆ ಟ್ಯಾಂಕರ್ ನೀರು ಬರುವ ದಿನದ ತನಕ ಕಾಯಬೇಕು. ಇದು ಬಡ ಜನರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.


ದುಪ್ಪಟ್ಟು ದರ

ಈ ಮೊದಲು ಖಾಸಗಿ ಟ್ಯಾಂಕರ್ ನೀರಿನ ಬೆಲೆ 500 ರಿಂದ 600 ದರವಿತ್ತು. ಪ್ರಸ್ತುತ ನೀರಿಗೆ ಬೇಡಿಕೆ ಹೆಚ್ಚಾದಂತೆ ಖಾಸಗಿ ಟ್ಯಾಂಕರ್‌ಗಳು ಕೂಡ ಟ್ಯಾಂಕರ್ ನೀರಿಗೆ 800 ರಿಂದ 1200 ರೂ.ಗೆ ದರ ಪಡೆಯುತ್ತಿವೆ. ನಗರಸಭೆ ಜಲಮಂಡಳಿ ಸಮರ್ಪಕವಾಗಿ ನೀರು ಸರಬರಾಜು ಮಾಡಿದ್ದರೆ ದುಪ್ಪಟ್ಟು ದರ ನೀಡಿ ನೀರು ಪಡೆಯುವ ಅಗತ್ಯ ಬರುತ್ತಿರಲಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ನೀರು ತುಂಬಲು ದಿನಗಟ್ಟಲೇ ನಿಲ್ಲಬೇಕು


ಎಲ್ಲಿಯೂ ನೀರು ಸಿಗುತ್ತಿಲ್ಲ. ನೀರು ತುಂಬಿಸಲು ಹೆಚ್ಚಿನ ದರ ನೀಡಬೇಕು. ಜತೆಗೆ ಒಂದು ಟ್ಯಾಂಕರ್ ತುಂಬಲು ದಿನಗಟ್ಟಲೆ ನಿಲ್ಲಬೇಕು. ಒಂದು ದಿನಕ್ಕೆ ಎರಡೂ ಟ್ಯಾಂಕ್ ನೀರು ಸರಬರಾಜು ಮಾಡಲೂ ಆಗುತ್ತಿಲ್ಲ. ಆದಷ್ಟು ಕಡಿಮೆ ದರದಲ್ಲಿಯೇ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಖಾಸಗಿ ಟ್ಯಾಂಕರ್ ಮಾಲೀಕರು ತಿಳಿಸಿದ್ದಾರೆ.


ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವ ಕಾರಣ ಮನೆಮನೆ ಸಂಪರ್ಕಕ್ಕೆ ಸರಬರಾಜಾಗುವ ನೀರಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಕಾರಣಕ್ಕೆ 33 ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಜತೆಗೆ 29 ಕೊಳವೆಬಾವಿ ಕೊರೆಸಲಾಗಿದೆ. ಅದರಲ್ಲಿ 7 ಬೋರ್‌ವೆಲ್‌ಗಳಲ್ಲಿ ನೀರು ಸಿಕ್ಕಿಲ್ಲ. ಉಳಿದ 22 ಕೊಳವೆಬಾವಿಗಳಿಗೆ ಮೋಟಾರ್ ಅಳವಡಿಸಿ ನೀರು ನೀಡಲಾಗುತ್ತಿದೆ.

ನಾಗೇಶ್, ಪೌರಾಯುಕ್ತ, ನಗರಸಭೆ, ರಾಮನಗರ



ವಿದ್ಯಾನಗರ ಬಡಾವಣೆಯಲ್ಲಿ ನೀರು ಸರಬರಾಜು ಮಾಡಿ 22 ದಿನಗಳಾಗಿವೆ. ಟ್ಯಾಂಕರ್ ನೀರು ಸರಬರಾಜು ಮಾಡುತ್ತೇವೆ ಎನ್ನುತ್ತಾರೆ. ಆದರೆ, ಯಾವಾಗ ನೀರು ಬಂದು ಹೋಗುತ್ತದೋ ತಿಳಿಯುತ್ತಿಲ್ಲ. ಹನಿ ನೀರಿಗೂ ಜನರು ಪರದಾಡುವಂತಾಗಿದೆ. ಮುಂದೆ ಪರಿಸ್ಥಿತಿ ಹೇಗಪ್ಪ ಎನ್ನುವ ಸನ್ನಿವೇಶ ನಿರ್ಮಾಣವಾಗಿದೆ. ನೀರಿನ ಸಮಸ್ಯೆ ನೀಗಿಸುವಲ್ಲಿ ಜಲಮಂಡಳಿ ನಗರಸಭೆ ವಿಫಲವಾಗಿವೆ.
ಸುರೇಶ್, ವಿದ್ಯಾನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net