

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ಮಳೆ ಇಲ್ಲದೆ ಪೈರು ಒಣಗುತ್ತಿದ್ದು, ಕೆರೆ ಕಟ್ಟೆಗಳು ನೀರಿಲ್ಲದೆ ಭಣಗುಡುಗುತ್ತಿರುವ ಸಂದರ್ಭದಲ್ಲಿ ಮಳೆ ಬಂದು ಇಳೆ ತಂಪಾಗಿಸಲಿ ಎಂದು ಗ್ರಾಮೀಣ ಜನರು ಮಳೆರಾಯನ ಮೊರೆ ಹೋಗಿದ್ದಾರೆ.
ಅದೇಕೋ ಈ ಬಾರಿ ಮಳೆರಾಯ ಕೃಪೆ ತೋರಿಲ್ಲ. ಬಿತ್ತಿದ ಬೀಜ ಮೊಳಕೆ ಒಡೆದಿಲ್ಲ. ರಾಗಿ ಪೈರು ಒಣಗುತ್ತಿದೆ. ಕೆರೆ ಕಟ್ಟೆಗಳು ನೀರಿಲ್ಲದೆ ಒಣಗುತ್ತಿವೆ. ಜನ ಜಾನುವಾರು ನೀರಿನ ಕೊರತೆ ಅನುಭವಿಸುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಕಳೆದ ವರ್ಷ ಮುಂಗಾರಿನಿಂದ ಹಿಂಗಾರಿನವರೆಗೂ ಮಳೆ ಕೊರತೆ ಉಂಟಾಗಿರಲಿಲ್ಲ. ರಾಗಿ, ಭತ್ತ, ತೊಗರಿ ಸೇರಿ ಇತರ ಬೆಳೆಗಳು ರೈತರ ಕೈಹಿಡಿದಿದ್ದವು. ಕೆಲವು ಕೆರೆಗಳನ್ನು ಹೊರತುಪಡಿಸಿ ಬಹುತೇಕ ಸಣ್ಣ, ದೊಡ್ಡ ಕೆರೆಗಳು ತುಂಬಿ ಕೋಡಿ ಹರಿದಿದ್ದವು.
ಈ ಬಾರಿ ಕೆರೆಗಳು ಭರ್ತಿಯಾಗುವಷ್ಟು ಮಳೆ ಬರಲಿಲ್ಲ. ಕಳೆದ ಇಪ್ಪತ್ತು ದಿನಗಳ ಹಿಂದೆ ಬಿದ್ದ ಜಡಿ ಮಳೆಗೆ ಒಂದಷ್ಟು ರೈತರು ಭೂಮಿ ಹಸನು ಮಾಡಿ ರಾಗಿ ಬಿತ್ತನೆ ಮಾಡಿದ್ದರು. ಅದೂ ಬೆರೆಳೆಣಿಕೆಯಷ್ಟು ಮಾತ್ರ. ಇನ್ನೂ ಮುಕ್ಕಾಲು ಭಾಗ ಬಿತ್ತನೆಯೇ ಆಗಿಲ್ಲ. ಜಿಲ್ಲೆಯಲ್ಲಿ ಹೈನುಗಾರಿಕೆಯೂ ಪ್ರಮುಖ ಕಸುಬಾಗಿದ್ದು, ಜನರು ಜಾನುವಾರುಗಳಿಗೆ ಮೇವಿನ ಕೊರತೆ ಎದುರಿಸುತ್ತಿದ್ದಾರೆ. ಜೋಳ, ಸೀಮೆಹುಲ್ಲು, ಅಲಸಂದೆ ಮೇಲೇಳುತ್ತಿಲ್ಲ. ಇತ್ತ ಬೋರ್‌ವೆಲ್‌ಗಳಲ್ಲೂ ಅಂತರ್ಜಲಮಟ್ಟ ಕುಸಿದಿದೆ. ಕೆಲವು ಬೋರ್‌ವೆಲ್‌ಗಳಲ್ಲಿ ಈಗಾಗಲೇ ನೀರು ಬರಿದಾಗಿದೆ.
ಇಂದು, ನಾಳೆ ಮಳೆ ಬರುತ್ತದೆ ಎಂದು ಆಕಾಶ ನೋಡುತ್ತಿರುವ ರೈತರು ಮಳೆಗಾಗಿ ಪ್ರಾರ್ಥಿಸಿ ಪೂಜೆ ನಡೆಸಲು ಮುಂದಾಗಿದ್ದಾರೆ. ಶನಿವಾರದಿಂದ ವಡ್ಡರಹಳ್ಳಿ, ಅಂಜನಾಪುರ, ಮೊಟ್ಟೆದೊಡ್ಡಿ ಸೇರಿ ಹಲವು ಗ್ರಾಮಗಳಲ್ಲಿ ಮಳೆರಾಯನನ್ನು ಪೂಜಿಸಿ ಪ್ರಾರ್ಥಿಸುತ್ತಿದ್ದಾರೆ. ಜನರ ಭಕ್ತಿಗೆ ಮೆಚ್ಚಿ ಮಳೆರಾಯ ಕೃಪೆ ತೋರುವನೇ ಕಾದು ನೋಡಬೇಕಿದೆ.
ಮಳೆರಾಯನ ಪೂಜೆ
ಮಣ್ಣಿನಿಂದ ಮಳೆರಾಯನ ಮೂರ್ತಿ ಮಾಡಿ ಮರದ ಹಲಗೆಯ ಮೇಲಿಟ್ಟು ತಲೆ ಮೇಲೆ ಹೊತ್ತು ಗ್ರಾಮದ ಮನೆ ಮನೆಗೆ ತೆರಳಿ ಮೂರ್ತಿಯ ಮೇಲೆ ನೀರು ಹಾಕಿಸಿಕೊಂಡು ಹುಯ್ಯೋ ಹುಯ್ಯೋ ಮಳೆರಾಯ, ಕೆರೆ, ಕುಂಟೇಲಿ ನೀರಿಲ್ಲ. ಬಾರೋ ಬಾರೋ ಮಳೆರಾಯ... ಎಂದು ಕೂಗುತ್ತಾ ಗ್ರಾಮದ ಎಲ್ಲರೂ ಸೇರಿ ಮೆರವಣಿಗೆ ಮಾಡಿ ಮೂರ್ತಿಯನ್ನು ಊರ ಓಣಿಯೊಂದರಲ್ಲಿ ಇಟ್ಟು ಬರುತ್ತಾರೆ. ಒಂದು ವೇಳೆ ಮಳೆ ಬಂದರೆ, ಮಳೆರಾಯನ ಮೂರ್ತಿಯ ಮೆರವಣಿಗೆ ವೇಳೆ ಗ್ರಾಮದ ಮನೆಗಳಲ್ಲಿ ಸಂಗ್ರಹಿಸಿದ ಅಕ್ಕಿ, ರಾಗಿ, ಬೆಲ್ಲ, ದವಸ ಧಾನ್ಯಗಳಿಂದ ಅಡುಗೆ ತಯಾರಿಸಿ ಪ್ರಸಾದ ರೂಪದಲ್ಲಿ ಎಲ್ಲರೂ ಸ್ವೀಕರಿಸಿ ಸಂತೋಷ ಪಡುತ್ತಾರೆ. ಇದು ನಂಬಿಕೆ ಎನ್ನುತ್ತಾರೆ ಹಿರಿಯರು.
ಹಿಂದೆ 4-5 ವರ್ಷಕ್ಕೊಮ್ಮೆ ಬರ ಕಾಡುತ್ತಿತ್ತು. ಆಗ ಮಳೆಗಾಗಿ ಪ್ರಾರ್ಥಿಸಿ ಮಳೆರಾಯನ ಪೂಜೆ ಮಾಡಲಾಗುತ್ತಿತ್ತು. ಅಂತಹ ಸಂಧರ್ಭದಲ್ಲಿ ಮಳೆ ಬಂದ ನಿದರ್ಶನಗಳು ಸಾಕಷ್ಟಿವೆ. ಆದರೆ ಕಾಲಾಂತರದಲ್ಲಿ ಮಳೆರಾಯನ ಪೂಜೆ ಪ್ರಚಲಿತವಾಗಲಿಲ್ಲ. ಈಗ ಮಳೆ ಕೊರತೆ ಆಗಿರುವ ಕಾರಣ ಅಲ್ಲಲ್ಲಿ ಮಳೆರಾಯನ ಪೂಜೆ ಕಂಡುಬರುತ್ತಿದೆ.
ಕೃಷ್ಣಪ್ಪ, ಕೃಷ್ಣಾಪುರದೊಡ್ಡಿ