ಸವರ್ಣೀಯರ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಕೆಲಸ

1690454927677_1690454927457_Rmgm-ph-01-damma divige state president mallikarjun press meet
Published on

ಕಾಂಗ್ರೆಸ್​ ಸರ್ಕಾರದ ವಿರುದ್ಧ ಧಮ್ಮ ದೀವಿಗೆ ಸಂಘಟನೆ ಮಲ್ಲಿಕಾರ್ಜುನ್​ ಆರೋಪ

ಪಿಟಿಸಿಎಲ್​ ಕಾಯ್ದೆ ಉಪಬಂಧ 7 ರದ್ದು ಮಾಡುವಂತೆ ಒತ್ತಾಯ

ರಾಮನಗರ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಪಿಟಿಸಿಎಲ್​ ಕಾಯ್ದೆ ತಿದ್ದುಪಡಿ ಹೆಸರಿನಲ್ಲಿ ಪರಿಶಿಷ್ಟ ಜಾತಿ ವರ್ಗದ ಜನರಿಗೆ ಸಹಾಯ ಮಾಡುತ್ತಿದ್ದೇವೆ ಎಂಬ ಸೋಗಿನಲ್ಲಿ ದಲಿತರನ್ನು ಸವರ್ಣೀಯರ ವಿರುದ್ಧ ಎತ್ತಿಕಟ್ಟುತ್ತಿದೆ ಎಂದು ಧಮ್ಮದಿವಿಗೆ ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ್​ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1970ರ ದಶಕದಿಂದಲೂ ಕಾಂಗ್ರೆಸ್​ ಪಕ್ಷ ಉಳುವವನೇ ಭೂಮಿಯ ಒಡೆಯ, ಪಿಟಿಸಿಎಲ್​ ಕಾಯ್ದೆ ಇನ್ನಿತರ ಆಮಿಷಗಳನ್ನು ಒಡ್ಡಿ ದಲಿತರನ್ನು ವಂಚಿಸುತ್ತಿದೆ. 70ರ ದಶಕದಲ್ಲಿ ಉಳುವವನೇ ಭೂಮಿಯ ಒಡೆಯ ಹೆಸರಿನಲ್ಲಿ ಕರ್ನಾಟಕದಲ್ಲಿ ಜಮೀನ್ದಾರ್​ ಭೂ ಮಾಲೀಕರ ವಿರುದ್ಧ ಕೋಟ್ಯಂತರ ಅರ್ಜಿಗಳನ್ನು ಹಾಕಿಸಿ ಕೇವಲ 22 ಸಾವಿರ ಅರ್ಜಿಗಳನ್ನಷ್ಟೇ ವಿಲೇವಾರಿ ಮಾಡಿ ದಲಿತರಿಗೆ ತುಂಡು ಭೂಮಿಗಳನ್ನು ನೀಡಿ ಜಮೀನ್ದಾರರು ಮತ್ತು ಭೂ ಮಾಲೀಕರ ಕೆಂಗಣ್ಣಿಗೆ ದಲಿತರನ್ನು ಗುರಿ ಮಾಡಿಸಿ ರಾಜ್ಯಾದ್ಯಂತ ಕೋಲಾಹಲ ಸೃಷ್ಟಿ ಮಾಡಿತು. ಅಂದು ಆರಂಭವಾದ ದಲಿತರ ಮೇಲಿನ ಭೂ ಮಾಫಿಯಾದ ದೌರ್ಜನ್ಯ ಇಂದಿಗೂ ಮುಂದುವರಿಯುತ್ತಿದೆ ಎಂದು ಹೇಳಿದರು.

ಈ ಅವೈಜ್ಞಾನಿಕ ಆದೇಶ ರದ್ದುಪಡಿಸದೆ ಬೇರೆ ಕಡೆ ಭೂಮಿ ಖರೀದಿಸುವ ಹಣದ ಸಾಮರ್ಥ್ಯ ದಲಿತರಿಗಿದ್ದರೆ ತಮ್ಮ ಬಳಿ ಇರುವ ಜಮೀನು ಮಾರಿಕೊಳ್ಳುವ ಅವಶ್ಯಕತೆ ಇರುತ್ತಿರಲಿಲ್ಲ ಎಂಬುದನ್ನು ಮನಗಾಣುವ ವಿವೇಚನೆಯಿಲ್ಲದ ಕಂದಾಯ ಸಚಿವ  ಕೃಷ್ಣಭೈರೇಗೌಡ ಅವರು, ದಲಿತರ ಜಮೀನನ್ನು ಅವರ ಮಕ್ಕಳ, ಕುಟುಂಬದವರ ಶಿಕ್ಷಣ, ಮದುವೆ, ಕಾಯಿಲೆ ಇತರ ಸಂಕಷ್ಟ ಸಂದರ್ಭದಲ್ಲಿ ಮಾರಾಟ ಮಾಡದಂತೆ ತಡೆದಿರುವುದು ಕಾಂಗ್ರೆಸ್​ ಪಕ್ಷ ದಲಿತರಿಗೆ ಎಸಗಿರುವ ದ್ರೋಹ ಎಂದು ಅಭಿಪ್ರಾಯಪಟ್ಟರು.

ಯೋಜನೆ ನೆಪದಲ್ಲಿ ದಲಿತರ ಭೂಮಿ ವಶ

ರಾಜಕಾರಣಿಗಳ ಜತೆ ವ್ಯವಹರಿಸುವ ಬಂಡವಾಳಶಾಹಿಗಳ ಊರ ಮುಂದೆ ಇರುವ ಬೆಲೆ ಬಾಳುವ ದಲಿತರ ಜಮೀನುಗಳನ್ನು ಪಿಟಿಸಿಎಲ್​ ಕಾಯ್ದೆ ಅಡ್ಡ ಬಂದರೂ ಸಾರ್ವಜನಿಕ ಹಿತದೃಷ್ಟಿಯ ಸೋಗಿನಲ್ಲಿ ಆಶ್ರಯ ನಿವೇಶನ, ಕೈಗಾರಿಕೆ, ಅಂಗನವಾಡಿ, ಆಸ್ಪತ್ರೆ ಇತರ ಯೋಜನೆಗಳ ನೆಪದಲ್ಲಿ ಕಾಯ್ದೆ ಉಪಬಂಧ 7ರಡಿಯಲ್ಲಿ ಸರ್ಕಾರದ ಪೂರ್ವಾನುಮತಿಯನ್ನೂ ಪಡೆಯದೆ ವಿನಾಯಿತಿ ಪಡೆದುಕೊಂಡು ಕಬಳಿಸಿ ಅವರನ್ನು ಬರಿಗೈ ದಾಸರನ್ನಾಗಿಸುತ್ತಿದ್ದಾರೆ. ಆದ್ದರಿಂದ ಯೋಜನೆಗಳ ಹೆಸರಿನಲ್ಲಿ ಅನುಮತಿಯಿಂದ ವಿನಾಯಿತಿ ನೀಡುವ ಕಾಯ್ದೆಯ ಉಪಬಂಧ 7ನ್ನು ರದ್ದುಪಡಿಸಬೇಕು ಮತ್ತು ದಲಿತರ ಜಮೀನನ್ನು ದಲಿತ ವರ್ಗದವರೇ ಖರೀದಿಸುವಾಗ ಸರ್ಕಾರದ ಪೂರ್ವಾನುಮತಿ ಪಡೆಯದಂತೆ ವಿನಾಯಿತಿಗೆ ಒತ್ತಾಯಿಸಿ ದಲಿತರ ಬಗ್ಗೆ ನೈಜ ಕಾಳಜಿ ತೋರಿಸುವಂತೆ ಮಲ್ಲಿಕಾರ್ಜುನ್​ ಆಗ್ರಹಿಸಿದರು.

ಧಮ್ಮ ಧೀವಿಗೆ ಸಂಘಟನೆ ಪದಾಧಿಕಾರಿಗಳಾದ ಶಿವಮಾದು, ಮುನಿರಾಜು, ಬಸವರಾಜು, ನಿಂಗರಾಜು ಹಾಗೂ ಮುನಿಮಲ್ಲಣ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net