

ರಾಮನಗರ
ಜಾಲಮಂಗಲ ರಸ್ತೆ ಪಕ್ಕದಲ್ಲಿ ಒಣಗಿರುವ ಮರಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ರಾಮನಗರ-ಜಾಲಮಂಗಲ ರಸ್ತೆ ಪ್ರಮುಖ ಜಿಲ್ಲಾ ರಸ್ತೆಯಾಗಿದ್ದು, ಮಾಗಡಿ, ಕುಣಿಗಲ್, ಹುಲಿಯೂರುದುರ್ಗ ಮತ್ತಿತರ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಪ್ರತಿನಿತ್ಯ ರಸ್ತೆಯಲ್ಲಿ ನೂರಾರು ವಾಹನಗಳು, ದ್ವಿಚಕ್ರ ವಾಹನ ಸವಾರರು, ವಿದ್ಯಾರ್ಥಿಗಳು, ರೈತರು, ಕಚೇರಿ ಕೆಲಸ ಕಾರ್ಯಗಳಿಗೆ ಹೋಗುವವರು, ಖಾಸಗಿ ಕಾರ್ಖಾನೆ ಕಾರ್ಮಿಕರು ರಸ್ತೆಯಲ್ಲಿ ಸಂಚರಿಸುತ್ತಾರೆ. ಶ್ಯಾನುಭೋಗನಹಳ್ಳಿ ಸಮೀಪ, ನಾಗರಕಲ್ಲುದೊಡ್ಡಿ ಹತ್ತಿರ, ಪೇಟೆ ಕುರುಬರಹಳ್ಳಿ ರಸ್ತೆ, ಚೌಡೇಶ್ವರಿ ಹಳ್ಳಿ ತಿರುವು ರಸ್ತೆ ಸಮೀಪದಲ್ಲಿ ರಸ್ತೆ ಪಕ್ಕದ ಮರಗಳು ಒಣಗಿದ್ದು, ಮಳೆಗಾಲ ಆಗಿರುವ ಕಾರಣ
ರಭಸವಾಗಿ ಗಾಳಿ ಬೀಸಿದರೆ ಮರಗಳು ರಸ್ತೆಗೆ ಉರುಳುತ್ತವೆ. ವಾಹನಗಳು ಚಲಿಸುವ ವೇಳೆ ಮರಗಳ ಉರುಳಿದರೆ ಅಪಾಯ ತಪ್ಪಿದ್ದಲ್ಲ. ದುಸ್ಥಿತಿಯಲ್ಲಿರುವ, ಒಣಗಿರುವ ಮರಗಳನ್ನು ಸಂಬಂಧಪಟ್ಟ ಇಲಾಖೆಗಳು ಕೂಡಲೇ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.