ಹೆಚ್ಚಿನ ಹಣದ ಆಮಿಷಕ್ಕೆ 3.5 ಲಕ್ಷ ರೂ. ಕಳಕೊಂಡ

Cyber Crime
Published on


ರಾಮನಗರ: ಕೇವಲ ಕ್ಲಿಕ್ ಮಾಡಿ ರೇಟಿಂಗ್ ಮಾಡಿ ಹಣ ಗಳಿಸಿ ಎಂದು ಯುವಕನನ್ನು ನಂಬಿಸಿ ನಂತರ ವಂಚಿಸಿರುವ ಪ್ರಕರಣ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ. ನಗರದ ಭರತ್ ಎಂಬುವರು ಈ ಮೋಸದ ಜಾಲದಲ್ಲಿ ಸಿಲುಕಿ ಹಣ ಕಳೆದುಕೊಂಡವರು. ಕಳೆದು ಮೂರು ದಿನಗಳ ಹಿಂದೆ ಇವರ ಟೆಲಿಗ್ರಾಂ ಖಾತೆಗೆ ಸಂದೇಶವೊಂದು ಬಂದಿದ್ದು ಕ್ಲಿಕ್ ಮಾಡಿ ರೇಟಿಂಗ್ ಮಾಡಿ ಹಣ ಗಳಿಸಿ ಎಂದು ಹೇಳಿದ್ದಾರೆ.

ಇದನ್ನು ನಂಬಿದ ಭರತ್ ಮೊದಲಿಗೆ 5000 ರೂ.ಗಳನ್ನು ಹಾಕಿದ್ದು ಇವರ ಖಾತೆಗೆ 7150 ರೂ ಜಮೆ ಆಗಿದೆ. ನಂತರ ಮತ್ತೊಮ್ಮೆ 8 ಸಾವಿರ ರೂ.ಗಳನ್ನು ಹಾಕಿದ್ದು 11ಸಾವಿರ ರೂ.ಗಳನ್ನು ಇವರ ಖಾತೆಗೆ ಜಮೆ ಮಾಡಲಾಗಿದೆ. ಇದು ಭರತ್ ಅವರಲ್ಲಿ ನಂಬಿಕೆ ಹುಟ್ಟುವಂತೆ ಮಾಡಿದೆ.

ಇದಾದ ನಂತರ ಮತ್ತೊಮ್ಮೆ 32000 ರೂ., 5000 ರೂ. ಹಾಗೂ 85000 ರೂ.ಗಳನ್ನು ಮೋಸ ಜಾಲದ ಖಾತೆಗಳಿಗೆ ಹಾಕಿದ್ದಾರೆ. ಆದರೆ ಹಿಂದಿನಂತೆ ಯಾವುದೇ ಹಣ ಬಂದಿಲ್ಲ. ಈ ಬಗ್ಗೆ ವಿಚಾರಿಸಿದಾಗ ನಿಮಗೆ ನಿಮ್ಮ ಹಣ ಕೊಡುವ ಕೆಲಸ ಪ್ರಗತಿಯಲ್ಲಿದೆ ಎಂದಷ್ಟೇ ಹೇಳಿದ್ದಾರೆ. ಇದರ ನಡುವೆಯೇ ಮತ್ತೊಮ್ಮೆ 2.20 ಲಕ್ಷ ರೂ. ಹಣ ಹಾಕಿದರೆ ನಿಮ್ಮ ಖಾತೆಗೆ 6.37 ಲಕ್ಷ ರೂ. ಬರಲಿದೆ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಭರತ್ ಎರಡು ಬಾರಿ ತಲಾ 1.10 ಲಕ್ಷ ರೂ.ಗಳನ್ನು ಕಳುಹಿಸಿದ್ದಾರೆ. ಆದರೆ ಈ ಹಣ ವಾಪಾಸ್ ಬಾರದಿದ್ದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಒಟ್ಟಾರೆ 3.5 ಲಕ್ಷ ರೂ.ಗಳನ್ನು ಭರತ್ ಕಳೆದುಕೊಂಡು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net