

ರಾಮನಗರ: ಆನ್‌ಲೈನ್ ಮೂಲಕ ಸಾಲ ಮಂಜೂರಾಗಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ 1.72 ಲಕ್ಷ ರೂ.ಗಳನ್ನು ವಂಚಿಸಿರುವ ಪ್ರಕರಣದ ರಾಮನಗರ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.
ಕನಕಪುರ ತಾಲೂಕು ಸಾತನೂರಿನ ಮಹೇಶ್ ಡಿ.ಪಿ ಹಣ ಕಳೆದುಕೊಂಡವರು. ಸಾತನೂರಿನಲ್ಲಿ ಕೋಳಿ ಅಂಗಡಿ ನಡೆಸುತ್ತಿರುವ ಮಹೇಶ್ ಹಲಗೂರಿನ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಕೈ ಸಾಲ ಇದ್ದ ಕಾರಣ ಬ್ಯಾಂಕ್‌ನಿಂದ ಸಾಲ ಪಡೆಯಲು ಯೋಜಿಸಿದ್ದರು.
ಇದೇ ವೇಳೆ ಫೇಸ್‌ಬುಕ್‌ನಲ್ಲಿ ಕಾಣಿಸಿದ ಇಂಡಿಯಾ ಬುಲ್ಸ್ ಧಾನಿ ಫೈನಾನ್ಸ್ ನಲ್ಲಿ ಲೋನ್ ತೆಗೆದುಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಹಾಕಿ, ಇದಕ್ಕೆ ಆಧಾರ್, ಪಾನ್ ಮತ್ತು ಬ್ಯಾಂಕ್ ಖಾತೆಯ ವಿವರವನ್ನು ನೀಡಿದ್ದಾರೆ.
ಇದಾದ ನಂತರ ಕಾರ್ತಿಕ್ ಎನ್ನುವ ವ್ಯಕ್ತಿ ಕರೆ ಮಾಡಿ ನಿಮಗೆ ಲೋನ್ ಮಂಜೂರಾಗಿದೆ ಎಂದು ನಂಬಿಸುವ ಪತ್ರವನ್ನು ಅವರ ವಾಟ್ಸ್ ಆಪ್ ನಂಬರಿಗೆ ಕಳುಹಿಸಿದ್ದಾನೆ. ನಂತರ ಅಸಲಿ ಆಟವನ್ನು ಶುರುವಿಟ್ಟುಕೊಂಡು ಮೊದಲಿಗೆ ಮೊದಲ ತಿಂಗಳ ಇಎಂಐ ಕಟ್ಟಬೇಕು ಎಂದು 5800 ರೂ ಗಳನ್ನು, ಲೋನ್ ಚಾರ್ಜ್ ಎಂದು 20 ಸಾವಿರ ರೂ, ಜಿಎಸ್‌ಟಿ ಹಣ ಎಂದು 50 ಸಾವಿರ ರೂ ಹಾಗೂ ಆಧಾಯ ತೆರಿಗೆ ಎಂದು 75700 ರೂ.ಗಳನ್ನು ಹೀಗೆ ಒಟ್ಟು 172260 ರೂ.ಗಳನ್ನು ಹಾಕಿಸಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ, ಮೊಬೈಲ್ ಕರೆ ಮಾಡಿದ್ದಕ್ಕೂ ಸಹ ಹಣ ಪಾವತಿ ಮಾಡುವಂತೆ ಒತ್ತಾಯ ಮಾಡಿರುವ ಹಿನ್ನೆಲೆಯಲ್ಲಿ ಮಹೇಶ್ ಗುರುವಾರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿ, ತಮಗೆ ವಂಚಿಸಿರುವವರನ್ನು ಪತ್ತೆ ಮಾಡಿ, ಹಣ ವಾಪಾಸ್ ಕೊಡುವಂತೆ ಕೋರಿದ್ದಾರೆ.