

ರಾಮನಗರ
ಜಿಲ್ಲೆಯ ಕ್ರೀಡಾ ಪ್ರತಿಭೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕ್ರಿಡಾಂಗಣದ ಕನಸು ನನಸಾಗಲಿಲ್ಲ. 18 ವರ್ಷಗಳ ಹಿಂದೆ ಜಿಲ್ಲಾ ಕ್ರೀಡಾಂಗಣ ಹೇಗಿತ್ತೋ ಇಂದಿಗೂ ಅದೇ ಸ್ಥಿತಿಯಲ್ಲಿಯಲ್ಲಿದೆ ಎಂದು ನಗರಸಭೆ ಸದಸ್ಯ ಕೆ. ಶೇಷಾದ್ರಿ ಕಿಡಿಕಾರಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ‘ಇದೇನ್ ಕರ್ಮ’ 2ನೇ ಹಂತದ ಅಭಿಯಾನದ ಅಂಗವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೈಟೆಕ್ ಕ್ರೀಡಾಂಗಣಗಳಿವೆ ಹೊಸಕೋಟೆ, ಕನಕಪುರ ತಾಲೂಕಿನಲ್ಲಿಯೂ ಸುಸಜ್ಜಿತ ಕ್ರೀಡಾಂಗಣಗಳು ಇವೆ. ಕ್ಷೇತ್ರವನ್ನು ಪ್ರತಿನಿಧಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದರೂ ಕ್ರೀಡಾಂಗಣದ ಅಭಿವೃದ್ಧಿ ಮರೆತರು. ಒಳಾಂಗಣ ಕ್ರೀಡಾಂಗಣ ಮಾಡಲಿಲ್ಲ. ಜಿಲ್ಲೆಯ ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಆಸೆಗಳು ಈಡೇರಿಸಿಕೊಳ್ಳಲು ಸಾಧ್ಯವಾಗದೇ ಅವೆಲ್ಲವೂ ಮಣ್ಣಾಗಿ ಹೋಗಿವೆ ಎಂದರು.
ಕ್ರೀಡಾಂಗಣ ಅಭಿವೃದ್ಧಿಗೆ 2004ರಲ್ಲಿ ಸಿ.ಎಂ. ಲಿಂಗಪ್ಪನವರ ಅನುದಾನ ಜತೆಗೆ ಜೆಡಿಎಸ್ ಜವರೇಗೌಡರ ತಲಾ 10 ಲಕ್ಷ ರೂ. ಅನುದಾನ ತರಲಾಗಿತ್ತು. 2005ರಲ್ಲಿ ಕ್ರೀಡಾಂಗಣ ಅಭಿವೃದ್ಧಿ ಚಾಲನೆಗೆ ಬಂದ ಎಚ್.ಡಿ. ಕುಮಾರಸ್ವಾಮಿ ಅವರು ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಿಸುವ ಭರವಸೆ ನೀಡಿದ್ದರು. ಆದರೆ, ಕ್ಷೇತ್ರ ಅವರ ಕುಟುಂಬದ ಹಿಡಿತದಲ್ಲೇ ಇದ್ದರೂ ಅಂತಾರಾಷ್ಟ್ರೀಯ ಕ್ರೀಡಾಂಗಣದ ಕನಸು ಈಡೇರಲೇ ಇಲ್ಲ ಎಂದು ಆರೋಪಿಸಿದರು.
ನಗರಸಭೆ ಅಧ್ಯಕ್ಷೆ ಬಿ.ಕೆ. ಪವಿತ್ರ, ಮುಖಂಡರಾದ ಎ.ಬಿ. ಚೇತನ್‌ಕುಮಾರ್, ಎರೇಹಳ್ಳಿ ಮಂಜು, ಬಿ.ಸಿ. ಪಾರ್ವತಮ್ಮ, ಮುಹೀನ್ ಖುರೇಶಿ, ವಿಜಯಕುಮಾರಿ, ಆಯಿಷಾ ಬೇಗಂ ಮುಂತಾದವರು ಇದ್ದರು.