

ಗಂಗಾಧರ್ ಬೈರಾಪಟ್ಟಣ ರಾಮನಗರ
ಒಂದೆಡೆ ಟೊಮ್ಯಾಟೊ ಬೆಲೆ ಗಗನಕ್ಕೆ ಏರಿದ್ದರೆ, ಕುಸಿಯುತ್ತಿರುವ ತೆಂಗಿನ ಬೆಲೆ ಮೇಲಕ್ಕೆ ಏಳದೆ, ರೈತರು ಕಂಗಾಲಾಗಿದ್ದಾರೆ.
ಬಹುತೇಕ ವರ್ಷದಿಂದಲೂ ತೆಂಗು ಬೆಲೆ ಕುಸಿಯುತ್ತಲೇ ಇದ್ದು, ಬೆಲೆ ಏರಿಕೆ ನಿರೀಕ್ಷೆಯಲ್ಲಿರುವ ರೈತ ಮತ್ತೆ ಮತ್ತೆ ನಿರಾಸೆ ಅನುಭವಿಸುತ್ತಿದ್ದಾನೆ.
ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಚನ್ನಪಟ್ಟಣ ತಾಲೂಕು ಒಂದರಲ್ಲಿಯೇ ಸುಮಾರು 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಹೊಡೆತ ತಿಂದಿದ್ದ ರೈತರು, ಬೆಂಕಿ ರೋಗ, ನುಸಿ ಪೀಡೆಯಂತಹ ರೋಗವನ್ನು ಎದುರಿಸಿದ್ದಾರೆ.
ಇದರ ಜತೆಗೆ ಬೆಲೆ ಕುಸಿತವೂ ರೈತರನ್ನು ನಿತ್ರಾಣಗೊಳಿಸಿದೆ. ಈ ಎಲ್ಲ ಬೆಳವಣಿಗೆ ನಡುವೆಯೇ ಕಳೆದ ಬಾರಿ ಹಾಗೂ ಈ ಬೇಸಿಗೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ರಾಜ್ಯದ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಎನ್ನುವ ಆಶಯವೂ ಇತ್ತು. ಆದರೆ, ಬೆಲೆ ಕುಸಿತಗೊಂಡು ನಿರಾಸೆ ಮೂಡಿಸಿದೆ.
40 ರೂ.ನಿರೀಕ್ಷೆ ಇತ್ತು: ಕರೊನಾದಿಂದ ತೆಂಗು ಮಾರುಕಟ್ಟೆಯಲ್ಲಿಯೂ ಭಾರೀ ಕುಸಿತ ಕಂಡಿತ್ತು, ಇದೀಗ ಬೆಲೆ ಏರಿಕೆ ಆಗಬಹುದು. ಅದರಲ್ಲೂ ಪ್ರತಿ ಕೆಜಿ ತೆಂಗಿಗೆ 37-40 ರೂ.ವರೆಗೂ ಮಾರಾಟವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ರೈತರು ಇದ್ದರು. ಕಳೆದ ವರ್ಷ 22-23 ರೂ.ಗೆ ಪ್ರತಿ ಕೆಜಿ ತೆಂಗು ಬೆಲೆ ಕುಸಿದಿತ್ತು. ಇದಾದ ನಂತರ ಮತ್ತೆ ಏರಿಕೆ ಆಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ತೆಂಗಿನ ಬೆಲೆ 17-18 ರೂ.ಗೆ ಕುಸಿದಿದೆ.
ಬೆಲೆ ಕುಸಿತಕ್ಕೆ ಮಳೆಯೂ ಕಾರಣ
ಜಿಲ್ಲೆಯ ತೆಂಗಿಗೆ ಮುಂಬೈ ಮತ್ತು ಹೈದ್ರಾಬಾದ್ ಪ್ರಮುಖ ಮಾರುಕಟ್ಟೆಗಳಾಗಿವೆ. ರಾಮನಗರ ಮತ್ತು ಚನ್ನಪಟ್ಟಣ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಸುಮಾರು 45 ಮಂದಿ ಪರವಾನಗಿ ಹೊಂದಿರುವ ಮಾರಾಟಗಾರರು ರೈತರಿಂದ ತೆಂಗು ಖರೀದಿಸಿ, ಹೊರ ರಾಜ್ಯಗಳಿಗೆ ರಫ್ತು ಮಾಡುತ್ತಾರೆ. ಪ್ರಸ್ತುತ ಎರಡೂ ಮಾರುಕಟ್ಟೆಯಲ್ಲಿ ಪ್ರತಿದಿನ ಸರಾಸರಿ 30 ಸಾವಿರ ಕೆಜಿ ತೆಂಗು ಖರೀದಿ ಆಗುತ್ತಿದೆ. ಇದಕ್ಕೆ ಕೇವಲ ಬೆಂಗಳೂರು ಮಾರುಕಟ್ಟೆಯಷ್ಟೇ ಲಭ್ಯವಿದ್ದು, ಮುಂಬೈ ಮತ್ತು ಹೈದ್ರಾಬಾದ್ ಮಾರುಕಟ್ಟೆಗಳ ಮೇಲೆ ತಮಿಳುನಾಡು ತೆಂಗು ಲಗ್ಗೆ ಇಟ್ಟಿದೆ. ಇನ್ನು ಉತ್ತರ ಭಾರತದಲ್ಲಿ ಸುರಿಯುತ್ತಿರುವ ಮಳೆಯೂ ತೆಂಗು ಬೆಲೆ ಕುಸಿಯಲು ಕಾರಣವಾಗಿದೆ.
ತಮಿಳು ಕಾಟ
ಜಿಲ್ಲೆ ಮತ್ತು ರಾಜ್ಯದ ಮಾರುಕಟ್ಟೆ ಮೇಲೆ ತಮಿಳುನಾಡಿನಿಂದ ಬರುವ ಪದಾರ್ಥಗಳು ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಪ್ರಮುಖವಾಗಿ ರಾಮನಗರ ತೆಂಗಿನಲ್ಲಿ ಡಿಸಿಪಿ ಅಂಶ ಹೆಚ್ಚಿರುವ ಕಾರಣ ತೆಂಗಿನ ಪೌಡರ್ ತಯಾರಿಕೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಆದರೆ, ತಮಿಳುನಾಡು ಕಾಯಿ ಪ್ರತಿ ಕೆಜಿಗೆ 20 ರೂ.ಗೆ ಸಿಗುತ್ತಿರುವ ಕಾರಣ ರಾಮನಗರ ತೆಂಗು ಖರೀದಿಸಲು ಕಾರ್ಖಾನೆಗಳು ಮುಂದೆ ಬರುತ್ತಿಲ್ಲ. ಇದರ ಪರಿಣಾಮ ಬೆಲೆ ಕುಸಿತ ಉಂಟಾಗಿದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ.
ಆಷಾಢದ ಹೊಡೆತ
ಈಗಾಗಲೇ ಬೆಲೆ ಕುಸಿತಕ್ಕೆ ಕಂಗಾಲಾಗಿರುವ ರೈತರಿಗೆ ಆಷಾಢವೂ ಹೊಡೆತ ನೀಡಿದೆ. ಆಷಾಢ ಮಾಸದಲ್ಲಿ ಮದುವೆ ಸೇರಿ ಇತರ ಶುಭ ಕಾರ್ಯಗಳು ನಡೆಯದೇ ಇರುವ ಕಾರಣದಿಂದಾಗಿ ಆಗಲೂ ತೆಂಗಿಗೆ ಬೇಡಿಕೆ ಇಲ್ಲದಂತಾಗಿದೆ. ಇದರ ಜತೆಗೆ ಅಧಿಕ ಮಾಸವೂ ಬೆಲೆ ಏರಿಕೆ ನಿರೀಕ್ಷೆಯನ್ನು ಮುಂದೂಡುತ್ತಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಜಿಲ್ಲೆಯ ತೆಂಗಿಗೆ ಬೆಲೆ ಇಲ್ಲದಂತಾಗಿದೆ. ಆಷಾಢ ಮಾಸ ಹಾಗೂ ಉತ್ತರದಲ್ಲಿ ಸುರಿಯುತ್ತಿರುವ ಮಳೆ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಈ ವೇಳೆಯೂ ಬೆಲೆ ಏರಿಕೆ ನಿರೀಕ್ಷೆ ಮಾಡುವುದು ಕಷ್ಟ. ತಮಿಳುನಾಡು ಕಾಯಿಯಿಂದಾಗಿ ನಮ್ಮ ಕಾಯಿಗೆ ಬೆಲೆ ಕುಸಿದಿದೆ.
ಶಿವರಾಜ್, ತೆಂಗು ವ್ಯಾಪಾರಿ, ಚನ್ನಪಟ್ಟಣ
ತೆಂಗಿನ ಬೆಲೆ ಕುಸಿದಿರುವುದರಿಂದ ಆತಂಕ ಹೆಚ್ಚಿದೆ. ಈಗಾಗಲೇ ಕೂಲಿ ಸೇರಿ ಉತ್ಪಾದನಾ ವೆಚ್ಚ ಸಾಕಷ್ಟು ಹೆಚ್ಚಳ ಕಂಡಿದ್ದು, ಸರ್ಕಾರ ಬೆಂಬಲ ಬೆಲೆಯಡಿ ತೆಂಗು ಖರೀದಿಗೆ ಮುಂದಾಗಬೇಕು. ಇಲ್ಲವಾದರೆ, ತೆಂಗು ಬೆಳೆಗಾರರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ.
ರಾಜೇಶ್, ತೆಂಗು ಬೆಳೆಗಾರ, ಚನ್ನಪಟ್ಟಣ