ರಾಮನಗರ ಕೈ ಪಾಳಯದಲ್ಲಿ ಆಂತರಿಕ ಹಣಾಹಣಿ

11-07-rama-cmc
Published on

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪವಿತ್ರ ರಾಜೀನಾಮೆ ಅಧಿಕಾರ ಹಂಚಿಕೆ ಸೂತ್ರದಂತೆ ಡಿಸಿಗೆ ಸಲ್ಲಿಕೆ ಕೈ ವರಿಷ್ಠರ ಸೂಚನೆಯಂತೆ ಹೊಸ ಅಧ್ಯಕ್ಷರ ಆಯ್ಕೆ

ಗಂಗಾಧರ್​ ಬೈರಾಪಟ್ಟಣ ರಾಮನಗರ
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಪವಿತ್ರ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಕೈ ಪಾಳೆಯದಲ್ಲಿ ಮತ್ತೊಂದು ಸುತ್ತಿನ ಆಂತರಿಕ ಹಣಾಹಣಿ ಆರಂಭಗೊಂಡಿದೆ.

2022ರ ಅಕ್ಟೋಬರ್​ 10ರಂದು ನಗರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಪವಿತ್ರ, 8 ತಿಂಗಳ ನಂತರ ಜು.11ರಂದು ಜಿಲ್ಲಾಧಿಕಾರಿ ಡಾ.ಅವಿನಾಶ್​ ಮೆನನ್​ ರಾಜೇಂದ್ರನ್​ ಅವರಿಗೆ ರಾಜೀನಾಮೆ ಸಲ್ಲಿಸಿದ್ದು, ಈ ಮೂಲಕ ಮತ್ತೊಬ್ಬರು ಅಧ್ಯಕ್ಷರಾಗುವ ದಾರಿಯನ್ನು ಸುಗಮ ಮಾಡಿಕೊಟ್ಟಿದ್ದಾರೆ.

ಅಧಿಕಾರ ಹಂಚಿಕೆ?
2021ರ ಏಪ್ರಿಲ್​ನಲ್ಲಿ ನಗರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ಭರ್ಜರಿ ಬಹುಮತದೊಂದಿಗೆ ಮರಳಿ ಅಧಿಕಾರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಈ ನಡುವೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್​ ಮುಖಂಡರೂ ಆದ ಬಿ.ಸಿ.ಪಾರ್ವತಮ್ಮ ಆಯ್ಕೆಯಾಗಿದ್ದರು.

ಇದಕ್ಕೆ ಎಂಎಲ್​ಸಿ ಸಿ.ಎಂ.ಲಿಂಗಪ್ಪ ಮತ್ತು ಕೆ.ಶೇಷಾದ್ರಿ ಅವರ ಒತ್ತಡ ಕಾರಣವಾಗಿತ್ತು ಎನ್ನುವುದು ಬಹಿರಂಗ ಸತ್ಯ. ಆದರೆ ಪಾರ್ವತಮ್ಮ ಅವರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದ ಮತ್ತೊಂದು ತಂಡ 31ನೇ ವಾರ್ಡ್​ನ ಸದಸ್ಯೆ ವಿಜಯ ಕುಮಾರಿ ಅವರನ್ನು ಅಧ್ಯಕ್ಷೆಯನ್ನಾಗಿ ಮಾಡಬೇಕು ಎಂದು ನಾಮಪತ್ರವನ್ನೂ ಸಲ್ಲಿಸಿದ್ದರು.

ಆದರೆ, ಈ ವೇಳೆ ಹಿರಿಯ ಮುಖಂಡರು ಮನವೊಲಿಕೆ ಹಾಗೂ ಅಧಿಕಾರ ಹಂಚಿಕೆ ಸೂತ್ರವನ್ನು ರಚಿಸಿ, ಮೊದಲ 7 ತಿಂಗಳ ಅವಧಿಗೆ ಪಾರ್ವತಮ್ಮ ಅವರನ್ನು ಅಧ್ಯೆಯನ್ನಾಗಿ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಆದರೂ ಪಾರ್ವತಮ್ಮ ಸುಮಾರು 10 ತಿಂಗಳ ಕಾಲ ಕಾರ್ಯ ನಿರ್ವಹಿಸಿ ರಾಜೀನಾಮೆ ನೀಡಿದ್ದುರ. ಇವರ ನಂತರ ಮತ್ತೆ ವಿಜಯಕುಮಾರಿ ಅವರ ಹೆಸರು ಪ್ರಸ್ತಾಪ ಆಗಿತ್ತಾದರೂ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಪವಿತ್ರ ಯಶಸ್ವಿ ಆಗಿದ್ದರು.

ಇದೀಗ ಮೊದರ್ಲಧದ ಉಳಿಕೆ ಅವಧಿಗೆ ವಿಜಯಕುಮಾರಿ ಅಧ್ಯಕ್ಷೆ ಆಗುವುದು ಬಹುತೇಕ ಖಚಿತವಾಗಿದೆ. ಇದರ ಹೊರತಾಗಿಯೂ ಇರುವ ಅವಧಿಯಲ್ಲಿಯೇ ಮತ್ತೊಬ್ಬ ಆಕಾಂಕ್ಷಿ ಗಿರಿಜಮ್ಮ ಅವರಿಗೂ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ಕೂಗು ಎದ್ದಿದೆ.

ಹೈಕಮಾಂಡ್​ ನಿರ್ಧಾರ
ರಾಮನಗರ ಕಾಂಗ್ರೆಸ್​ ಪಾಲಿಗೆ ಸಂಸದ ಡಿ.ಕೆ. ಸುರೇಶ್​ ಅವರೇ ಹೈಕಮಾಂಡ್​. ಇವರ ನಿರ್ದೇಶನದ ಮೇರೆಗೆ ಇಲ್ಲಿನ ಬೆಳವಣಿಗೆಗಳು ನಡೆಯುತ್ತವೆ. ಡಿ.ಕೆ.ಸುರೇಶ್​ ಅವರ ನಿರ್ಧಾರವನ್ನು ವಿರೋಧ ಮಾಡುವ ಕೆಲವು ನಗರಸಭೆ ಸದಸ್ಯರು ಇದ್ದಾರೆ. ಆದರೆ ಇವರ ಸಂಖ್ಯೆ ಕಡಿಮೆ. ಈ ಹಿನ್ನೆಲೆಯಲ್ಲಿ ಡಿ.ಕೆ. ಸುರೇಶ್​ ಅವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಸೂತ್ರಕ್ಕೆ ಬದ್ಧವಾಗಿ ಪವಿತ್ರ ರಾಜೀನಾಮೆ ನೀಡಿದ್ದಾರೆ.

ಜೆಡಿಎಸ್​ ಯತ್ನಿಸಿತ್ತು
ಪಾರ್ವತಮ್ಮ ರಾಜೀನಾಮೆ ನಂತರ ನಡೆದ ಬೆಳವಣಿಗೆಯಲ್ಲಿ ಪವಿತ್ರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದ ಕೆಲವು ಕಾಂಗ್ರೆಸ್​ ಸದಸ್ಯರು ಜೆೆಡಿಎಸ್​ನೊಂದಿಗೆ ಕೈಜೋಡಿಸುವ ಮಾತುಕತೆಯೂ ನಡೆದಿತ್ತು. ಇದರಿಂದಾಗಿ ಚುನಾವಣೆ ಕಣ ರಂಗು ಪಡೆದುಕೊಂಡಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಪವಿತ್ರ ಮತ್ತು ಜೆಡಿಎಸ್​ನಿಂದ ಆರ್​. ಮಂಜುಳಾ ನಾಮಪತ್ರ ಸಲ್ಲಿಸಿದ್ದರು.

ಅಂತಿಮವಾಗಿ ಪವಿತ್ರ 20 ಮತ ಪಡೆದು ವಿಜಯ ಮಾಲೆ ಧರಿಸಿದ್ದರು. ಆದರೆ ಈಗ ಪರಿಸ್ಥಿತಿಯೇ ಬೇರೆ ಇದ್ದು, ಜೆಡಿಎಸ್​ ಮತ್ತೊಮ್ಮೆ ಇಂತಹ ಸಾಹಸಕ್ಕೆ ಕೈ ಹಾಕುವ ಸ್ಥಿತಿಯಲ್ಲಿಲ್ಲ. ಇದರಿಂಗಾಗಿ ಕಾಂಗ್ರೆಸ್​ ಹೈಕಮಾಂಡ್​ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಲಿದೆ.

ಕಾಯಬೇಕು
ರಾಜೀನಾಮೆ ಸಲ್ಲಿಕೆ ಆದರೂ ಸಾಮಾನ್ಯವಾಗಿ ಅಂಗೀಕಾರವಾಗಲು 15 ದಿನ ಕಾಯಲೇಬೇಕು. ಈ ಅವಧಿಯಲ್ಲಿ ರಾಜೀನಾಮೆಯನ್ನು ವಾಪಸ್​ ಪಡೆಯಲು ಅವಕಾಶ ಸಹ ಇರುತ್ತದೆ. 15 ದಿನ ಕಳೆದ ಮೇಲೆ ರಾಜೀನಾಮೆ ಅಂಗೀಕಾರವಾಗಲಿದ್ದು, ನಂತರ ಚುನಾವಣಾಧಿಕಾರಿ ಅಧ್ಯಕ್ಷ ಸ್ಥಾನದ ಚುನಾವಣೆ ದಿನಾಂಕವನ್ನು ನಿಗದಿ ಮಾಡುತ್ತಾರೆ.

ಸಿಕ್ಕ ಅವಕಾಶವನ್ನು ಬಳಕೆ ಮಾಡಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಚ್ಯುತಿ ಬಾರದಂತೆ ಜನರ ಸೇವೆ ಮಾಡಿದ್ದೇನೆ. ಈಗ ವೈಯಕ್ತಿಕ ಕಾರಣಕ್ಕಾಗಿ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ.
 ಬಿ.ಕೆ.ಪವಿತ್ರಾ, ರಾಮನಗರ ನಗರಸಭೆ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net