ವಾಹನ ಡಿಕ್ಕಿ ಚಿರತೆ ಸಾವು

RMGm-Ph-01-Chirathe-Accident -Savu-Kempegowdanadoddi-Heddari Road-Ramanagara-31-10-2022
Published on

ರಾಮನಗರ: ನಗರ ಸಮೀಪದ ಕೆಂಪೇಗೌಡನದೊಡ್ಡಿ ದಶಪಥ ಹೆದ್ದಾರಿ ಬೈಪಾಸ್‌ನಲ್ಲಿ ಅಪರಿಚಿತ ವಾಹನ ಡಿಕ್ಕಿಯೊಡದು ಮೂರು ವರ್ಷದ ಗಂಡು ಚಿರತೆ ಮೃತಪಟ್ಟಿರುವ ಘಟನೆ ಸೋಮವಾರ ಮುಂಜಾನೆ ನಡೆಸಿದೆ.

ಸೋಮವಾರ ಬೆಳಗಿನ ಜಾವ ರಾಮನಗರ ಸಮೀಪದ ಜೀಗೇನಹಳ್ಳಿ ಸರ್ವೆ ನಂಬರ್ 103 ರಲ್ಲಿ ಕೆಂಪೇಗೌಡನದೊಡ್ಡಿ ಗ್ರಾಮದ ದಶಪಥ ಹೆದ್ದಾರಿ ರಸ್ತೆಯ ಬೈಪಾಸ್‌ನಲ್ಲಿ ರಸ್ತೆ ದಾಟುವ ವೇಳೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯೊಡೆದಿದ್ದು, ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿರುವ ಕಾರಣ ಅದು ಸ್ಥಳದಲ್ಲಿಯೇ ಮೃತಪಟ್ಟಿದೆ.

ಚಿರತೆ ಮೂರು ವರ್ಷ ಪ್ರಾಯದ್ದಾಗಿದ್ದು ಗಟ್ಟಿಮುಟ್ಟಾದ ದೇಹ ಹೊಂದಿದೆ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದೆ. ಚಿರತೆ ರಸ್ತೆಯಲ್ಲಿ ಸಾವನ್ನಪ್ಪಿರುವ ವಿಷಯವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದ ಪರಿಣಾಮ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಚಿರತೆ ಕಳೇ ಬರಹವನ್ನು ಯಂಗಯ್ಯನಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ತಂದು ಪಶು ವೈದ್ಯಾಧಿಕಾರಿ ಡಾ. ನಜೀರ್ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿ ಚಿರತೆ ಕಳೇ ಬರಹವನ್ನು ಸುಡಲಾಯಿತು.

ಡಿಎಫ್‌ಓ ದೇವರಾಜು, ಎಸಿಎಫ್ ನಿಜಾಮುದ್ದೀನ್, ವಲಯ ಅರಣ್ಯಾಧಿಕಾರಿ ದಿನೇಶ್, ಉಪ ವಲಯ ಅರಣ್ಯಾಧಿಕಾರಿ ವಾಸು ಚಿರತೆ ಮರಣೋತ್ತರ ಪರೀಕ್ಷಾ ಸಮಯದಲ್ಲಿ ಹಾಜರಿದ್ದರು.

3ನೇ ಚಿರತೆ : ದಶಪಥ ಹೆದ್ದಾರಿ ಚಾಲನೆಗೊಂಡ 4 ತಿಂಗಳಲ್ಲಿ ಇದು ರಸ್ತೆ ಅಫಘಾತದಿಂದ ಸಾವನ್ನಪ್ಪಿದ 3ನೇ ಚಿರತೆಯಾಗಿದೆ. ಬಸವನಪುರ ಬಳಿಯ ಮಧುರಾ ಗಾಮೆಂಟ್ಸ್ ಬಳಿ ಮತ್ತೊಂದು ರಾಮದೇವರಬೆಟ್ಟ ವಡೇರಹಳ್ಳಿ ಬಳಿ ವಾಹನ ಡಿಕ್ಕಿಯಿಂದ ಈ ಹಿಂದೆ ಎರಡು ಚಿರತೆಗಳು ಸಾವನ್ನಪ್ಪಿದ್ದವು. ಇದು ಸೋಮವಾರ ಮೃತಪಟ್ಟ ಮೂರನೇ ಚಿರತೆ ಆಗಿದೆ.

ಈ ಭಾಗದಲ್ಲಿ ಹೆಚ್ಚಾಗಿ ಚಿರತೆಗಳಿದ್ದು ಅಕ್ಕಪಕ್ಕದ ಗ್ರಾಮಗಳ ಬಳಿ ಆಹಾರ ಅರಸಿ ಬರುವುದು ಇವುಗಳಿಗೆ ರೂಡಿಯಾಗಿದೆ ಆದರೆ ಪ್ರಸ್ತುತ ಹೆದ್ದಾರಿ ರಸ್ತೆ ನಿರ್ಮಾಣದಿಂದ ಇವುಗಳ ಪ್ರಾಣಕ್ಕೆ ಕುತ್ತು ತಂದಿದೆ. ಹೆದ್ದಾರಿ ರಸ್ತೆಯಲ್ಲಿ ರಸ್ತೆಯ ಎರಡೂ ಕಡೆ ಓಡಾಟ ನಡೆಸಲು ಆಗದಂತೆ ಕಬ್ಬಿಣದ ಜಾಲರಿ ಅಳವಡಿಸಿರುವ ಕಾರಣ ರಸ್ತೆ ದಾಟಲು ಸಾಧ್ಯವಾಗುವುದಿಲ್ಲ ಇಂತಹ ಸನ್ನಿವೇಶದಲ್ಲಿ ಚಿರತೆಗಳು ಬೈಪಾಸ್ ರಸ್ತೆ ಮುಖಾಂತರ ರಸ್ತೆ ದಾಟಲು ಪ್ರಯತ್ನಿಸಿ ವಾಹನಕ್ಕೆ ಸಿಲುಕಿ ಸಾವನ್ನಪ್ಪುತ್ತಿವೆ.

ಹೆದ್ದಾರಿ ನಿರ್ಮಾಣ ಸಮಯದಲ್ಲಿ ಅರಣ್ಯ ಪ್ರದೇಶ ಇದಾಗಿರುವ ಕಾರಣ ಅಲ್ಲಲ್ಲಿ ಪ್ರಾಣಿಗಳ ಓಡಾಟಕ್ಕೆ ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಿ ಪ್ರಾಣಿಗಳ ಓಡಾಟಕ್ಕೆ ಅನುಕೂಲ ಕಲ್ಪಿಸಿದ್ದರೆ ವನ್ಯ ಪ್ರಾಣಿಗಳು ವಾಹನ ಡಿಕ್ಕಿಯಿಂದ ಸಾವನ್ನಪ್ಪುವ ಸ್ಥಿತಿ ನಿರ್ಮಾಣ ವಾಗುತ್ತಿರಲಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net