

ಕನಕಪುರ
ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಆಹಾರ ಇಲಾಖೆಗೆ ನೀಡಿರುವ ಪೊಲೀಸರು ಅಕ್ಕಿ ಸಾಗಿಸುತ್ತಿದ್ದವರು ಪರಾರಿಯಾಗಿದ್ದಾರೆ ಎಂದು ಎಫ್ ಐಆರ್ ನಲ್ಲಿ ನಮೂದಿಸಿ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ವೇದಿಕೆ ಅಧ್ಯಕ್ಷ ಕೆ.ಎನ್.ನವೀನ್ ಆರೋಪಿಸಿದ್ದಾರೆ.
ನಗರದ ವೇದಿಕೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.25ರಂದು ಟಾಟಾ ಗೂಡ್ಸ್ ವಾಹನ (ಸಂಖ್ಯೆ ಕೆಎ 07 ಎ 7118)ದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿತ್ತು. ವಿಷಯ ತಿಳಿದ ವೇದಿಕೆ ಪದಾಧಿಕಾರಿಗಳು ಮಾಲು ಸಮೇತ ವಾಹನ ಹಿಡಿದು ವೇಯಿಂಗ್ ಯಂತ್ರದಲ್ಲಿ ತೂಕ ಮಾಡಿಸಿ ಚಾಲಕನ ಸಮೇತ ಪುರ ಠಾಣೆಗೆ ಕರೆದೊಯ್ದು ಆಹಾರ ಇಲಾಖೆ ಶಿರಸ್ತೇದಾರ್ ಪ್ರಕಾಶ್ ಹಾಗೂ ಫುಡ್ ಇನ್‌ಸ್ಪೆಕ್ಟರ್ ವಿನುತಾ ಸಮ್ಮುಖದಲ್ಲಿ ಪೊಲೀಸರ ವಶಕ್ಕೆ ನೀಡಲಾಯಿತು.
ಆದರೆ, ಆಹಾರ ಇಲಾಖೆ ಅಧಿಕಾರಿಗಳು ಅಕ್ರಮ ಪಡಿತರ ಅಕ್ಕಿ ಸಾಗಣೆ ಬಗ್ಗೆ ಮಾತ್ರ ದೂರು ನೀಡಿ, ಆರೋಪಿ ಹೆಸರನ್ನು ದೂರಿನಲ್ಲಿ ಉಲ್ಲೇಖಿಸದೆ ಅಧಿಕಾರಿಗಳೇ ಆರೋಪಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಈ ಪಡಿತರ ಅಕ್ಕಿ ಅಕ್ರಮ ಸಾಗಣೆಯಲ್ಲಿ ಭಾಗಿಯಾಗಿರುವವರ ಬಗ್ಗೆ ಸಮಗ್ರ ತನಿಖೆ ನಡೆಸಿ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ವೇದಿಕೆ ಪದಾಧಿಕಾರಿಗಳು ಹಿಡಿದು ಕೊಟ್ಟಿರುವ ಅಕ್ಕಿ ಹಾಗೂ ಚಾಲಕನ ವಿರುದ್ಧ ಎ್ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು.
ವೇದಿಕೆ ಪದಾಧಿಕಾರಿಗಳಾದ ಶೇಖರ್ ಪಾಟೀಲ್, ರಾಜಗೋಪಾಲ್, ನವೀನ್, ರಾಜು ಮತ್ತಿತರರು ಹಾಜರಿದ್ದರು.