

ಚನ್ನಪಟ್ಟಣ
ನಾಗರಪಂಚಮಿ ಎಂದರೆ ಹುತ್ತಕ್ಕೆ ಹಾಲೆರೆದು, ನಾಗರಕಲ್ಲಿಗೆ ಪೂಜೆ ಸಲ್ಲಿಸುವುದು ಮಾಮೂಲು. ಆದರೆ, ತಾಲೂಕಿನ ಯುವಕರ ಗುಂಪೊಂದು ನಾಗರಪಂಚಮಿಯಂದು ದೇವಾಲಯವೊಂದನ್ನು ಸ್ವಚ್ಛಗೊಳಿಸಿ ವಿಶೇಷತೆ ಮೆರೆದಿದೆ.
ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬವೇ ನಾಗರಪಂಚಮಿ. ಶ್ರಾವಣ ಶುದ್ಧ ಪಂಚಮಿಯಂದು ಆಚರಿಸಲ್ಪಡುತ್ತದೆ. ಈ ಹಬ್ಬಕ್ಕೆ ಸಾಕಷ್ಟು ನಂಬಿಕೆ ಹಾಗೂ ಹಿನ್ನೆಲೆ ಇದೆ. ಇಂತಹ ಪವಿತ್ರ ದಿನದಂದು ತಾಲೂಕಿನ ಸ್ಫೂರ್ತಿ ಸೋಷಿಯಲ್ ಸರ್ವೀಸ್ ಟ್ರಸ್ಟ್‌ನ ಯುವಕರು ತಾಲೂಕಿನ ಸಿಂಗರಾಜಿಪುರ ಗ್ರಾಮದಿಂದ ಭೂಹಳ್ಳಿ ಕಡೆಗೆ ತೆರಳುವ ಮಾರ್ಗದಲ್ಲಿನ ಜಮೀನೊಂದರಲ್ಲಿ ಪೊದೆಗಳಿಂದ ಮುಚ್ಚಿಹೋಗಿದ್ದ ಮುನೇಶ್ವರ ಸ್ವಾಮಿ ದೇವಸ್ಥಾನವನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸುವ ಮೂಲಕ ಹಬ್ಬದ ಮಹತ್ವ ಹೆಚ್ಚಿಸಿದ್ದಾರೆ.
ಈ ದೇವಸ್ಥಾನದಲ್ಲಿ ನಾಗರಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ, ಈ ಜಾಗ ಸೂಕ್ತ ನಿರ್ವಹಣೆ ಇಲ್ಲದೆ ಒಳಗೆ ಕಾಲಿಡದಂಥ ವಾತಾವರಣ ನಿರ್ಮಾಣವಾಗಿತ್ತು. ಪೊದೆಯಲ್ಲಿ ಮುಚ್ಚಿದ್ದ ದೇವಾಲಯದ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ ಯುವಕರ ತಂಡ, ನಾಗರಪಂಚಮಿಯ ದಿನದಂದು ವಿಶೇಷ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದಿದೆ.
ಹಬ್ಬಹರಿದಿನ ಎಂದರೆ ಮೂಗು ಮುರಿಯುವ ಯುವಸಮುದಾಯದ ಮಧ್ಯೆ ಟ್ರಸ್ಟ್ ಯುವಕರ ಧಾರ್ಮಿಕ ಕಾಳಜಿ ಶ್ಲಾಘನೀಯ ಎನ್ನಬಹುದಾಗಿದೆ. ಈ ಕಾರ್ಯದಲ್ಲಿ ವಿಜಯ್ ಕುಮಾರ್, ಅಭಿಷೇಕ್, ರಾಜಶೇಖರಮೂರ್ತಿ, ಲಿಖಿತ್, ಮಲ್ಲೇಶ್, ಮಂಜು, ಹನುಮಂತ, ಗೋವಿಂದರಾಜು, ಅನಿಲ್ಕುಮಾರ್, ವಿಶ್ವ, ಗೋಪಾಲ್ಗೌಡ, ಪ್ರಜ್ವಲ್ ಮತ್ತಿತರರು ಕೈಜೋಡಿಸಿದ್ದರು.