ಚನ್ನಪಟ್ಟಣ ಯುಜಿಡಿಗೆ 94 ಕೋಟಿ ರೂ ಮೊತ್ತದ ಕಾಮಗಾರಿಗೆ ಹಸಿರು ನಿಶಾನೆ

h6-UGD 2
Published on

 ಚನ್ನಪಟ್ಟಣ:  ಹಲವಾರು ವರ್ಷಗಳಿಂದ ಕಾಡುತ್ತಿರುವ ಒಳಚರಂಡಿ (ಯುಜಿಡಿ) ಕಾಮಗಾರಿ ಆರಂಭಕ್ಕೆ ಕಾಲ ಕೂಡಿ ಬಂದಿದ್ದು, ನಗರದ ಯುಜಿಡಿ ಕಾಮಗಾರಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.
ನಗರದ ಎರಡನೇ ಹಂತದ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಅಸ್ತು ನೀಡಿರುವ ರಾಜ್ಯ ಸರ್ಕಾರ, ರಾಜ್ಯ ಸಚಿವ ಸಂಪುಟ ಅನುಮೋದನೆಗೂ ಮುನ್ನವೇ ರೂ. 94 ಕೋಟಿ ರೂ. ಕಾಮಗಾರಿ ಕೈಗೆತ್ತಿಕೊಳ್ಳಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಇದರಿಂದ ಹಲವು ವರ್ಷಗಳಿಂದ ಯುಜಿಡಿಗೆ ಹಿಡಿದಿದ್ದ ಗ್ರಹಣ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ನಗರಕ್ಕೆ ಯುಜಿಡಿ ವ್ಯವಸ್ಥೆ ಕಲ್ಪಿಸಲು ಈ ಹಿಂದೆ 2007ರಲ್ಲಿ ರೂ.13.11 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಈ ಪೈಕಿ 85.50 ಕಿ.ಮೀ ಉದ್ದದ ಆಂತರಿಕ ಒಳಚರಂಡಿ ಕೊಳವೆ ಮಾರ್ಗ ಮತ್ತು ವಿವಿಧ ವ್ಯಾಸ ಯಂತ್ರ ಗುಂಡಿಗಳ ನಿರ್ಮಾಣ ಮಾಡಲಾಗಿತ್ತು. ಆದರೆ, ವೆಟ್​ವೆಲ್​ ಹಾಗೂ ಎಸ್​ಟಿಪಿಗೆ ಜಾಗದ ಕೊರತೆಯಿಂದಾಗಿ ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸದ ಕಾರಣ, ಸಂಪೂರ್ಣ ಯುಜಿಡಿ ಅನುಷ್ಠಾನಗೊಂಡಿರಲಿಲ್ಲ. ಇದರಿಂದ ನಗರದಲ್ಲಿ ಸಾಕಷ್ಟು ಸಮಸ್ಯೆ ತಲೆದೋರಿತ್ತು. ಈ ಮಧ್ಯೆ ನಗರಕ್ಕೆ ಎರಡನೇ ಹಂತದ ಒಳಚರಂಡಿ ಕಾಮಗಾರಿ ಕೈಗೊಳ್ಳಲು ರೂ.106.50 ಕೋಟಿ ರೂ. ಮೊತ್ತದ ಅಂದಾಜು ಪಟ್ಟಿಗೆ ಅನುದಾನ ಒದಗಿಸಿ, ಯೋಜನೆಯ ಅಂದಾಜು ಪಟ್ಟಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ದೊರಕಿಸಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ನಗರಾಭಿವೃದ್ಧಿ ಇಲಾಖೆ ರೂ.94.37 ಕೋಟಿ ರೂ. ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಕೋರಿ ಆರ್ಥಿಕ ಇಲಾಖೆಗೆ ಸಲ್ಲಿಸಿತ್ತು. ಈಗ ಯೋಜನೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ನಗರದ ಯುಜಿಡಿ ಸಮಸ್ಯೆ ಉಚ್ಛ ನ್ಯಾಯಾಲಯದಲ್ಲೂ ಪ್ರತಿಧ್ವನಿಸಿದ್ದನ್ನು ಸ್ಮರಿಸಬಹುದು.

ಕ್ರೆಡಿಟ್​ ವಾರ್​
ನಗರದ ಜನತೆಯ ಬಹುನಿರೀತ ಯುಜಿಡಿ ಕಾಮಗಾರಿಗೆ ಸರ್ಕಾರ ಹಸಿರುನಿಶಾನೆ ತೋರಿಸಿರುವುದು ನಗರವಾಸಿಗಳ ಸಂತಸಕ್ಕೆ ಕಾರಣವಾಗಿದೆ. ಈ ಮಧ್ಯೆ ಈ ಯೋಜನೆ ಕ್ರೆಡಿಟ್​ ಪಡೆಯಲು ಜೆಡಿಎಸ್​ ಮತ್ತು ಬಿಜೆಪಿ ಹವಣಿಸುತ್ತಿವೆ. ಎಚ್​.ಡಿ. ಕುಮಾರಸ್ವಾಮಿ ಪ್ರಸ್ತಾವನೆ ಮೇರೆಗೆ ರಾಜ್ಯಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ ಎನ್ನುವುದು ಜೆಡಿಎಸ್​ ಪಕ್ಷದವರ  ವಾದವಾಗಿದೆ. ಆದರೆ, ಇದು ನಮ್ಮ ನಾಯಕ ಸಿ.ಪಿ. ಯೋಗೇಶ್ವರ್​ ಅವರ ಶ್ರಮ ಎಂಬುದು ಬಿಜೆಪಿಗರ ಮಾತಾಗಿದೆ. ಹಣಕಾಸು ಅನುಮೋದನೆಯ ಪ್ರತಿ ಹೊರಬೀಳುತ್ತಲೇ ಈ ಯೋಜನೆಯ ಲಾಭ ಪಡೆಯಲು ಎರಡು ಪಕ್ಷಗಳು ಮುಗಿಬಿದ್ದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಯೋಜನೆಗಾಗಿ ತಮ್ಮ ನಾಯಕರು ನಡೆಸಿದ ಪತ್ರ ವ್ಯವಹಾರಗಳನ್ನು ಹರಿಯಬಿಡುತ್ತಿದ್ದಾರೆ. ಈ ಮಧ್ಯೆ ಯಾರು ಮಾಡಿಸಿದರೂ ಸರಿಯೇ ನಮ್ಮ ಸಮಸ್ಯೆ ಬಗೆಹರಿದರೆ ಸಾಕು ಎನ್ನುವುದು ನಗರವಾಸಿಗಳ ಅನಿಸಿಕೆಯಾಗಿದೆ.


ಅಂಬೇಡ್ಕರ್​ ಭವನಕ್ಕೆ 2 ಕೋಟಿ. ರೂ.
 ನಗರದ ಡಾ. ಬಿ.ಆರ್​. ಅಂಬೇಡ್ಕರ್​ ಭವನಕ್ಕೆ ಮೂಲ ಸವಲತ್ತುಗಳನ್ನು ಒದಗಿಸಲು ರಾಜ್ಯ ಸರ್ಕಾರ 2 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.  ಶಾಸಕ, ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನಗರದ ಅಂಬೇಡ್ಕರ್​ ಭವನಕ್ಕೆ ಮೂಲಸವಲತ್ತುಗಳನ್ನು ಒದಗಿಸಲು ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಕುಮಾರಸ್ವಾಮಿ ಮನವಿ ಮೇರೆಗೆ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭವನದ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net