ಚನ್ನಪಟ್ಟಣದ ಮಹಿಳಾ ಹೈನೋಧ್ಯಮಿಗೆ ಒಲಿದ ಪ್ರಶಸ್ತಿ

Milk2
Published on
 ಚನ್ನಪಟ್ಟಣ
ಕ್ಷೀರಕ್ರಾಂತಿಯ ತವರು ನೆಲ ಎನಿಸಿರುವ ಚನ್ನಪಟ್ಟಣದ ಮಹಿಳಾ ಹೈನ್ಯೋದ್ಯಮಿಯೊರ್ವರು ಇಡೀ ದಕ್ಷಿಣ ಭಾರತದಲ್ಲೇ ಎಂಪಿಸಿಎಸ್ ಗೆ ಅತಿಹೆಚ್ಚು ಹಾಲು ಪೂರೈಕೆ ಮಾಡುವ ಮಹಿಳಾ ಸದಸ್ಯೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ತಾಲೂಕಿನ ಭೂಹಳ್ಳಿ ಗ್ರಾಮದ ರೈತ ಮಹಿಳೆ ಸುಜಾತಾ ವೆಂಕಟೇಶ್ ಈ ಗೌರವಕ್ಕೆ ಪಾತ್ರವಾಗಿರುವ ಮಹಿಳಾ ಹೈನ್ಯೋದ್ಯಮಿ. ಇತ್ತೀಚಿಗೆ ಗುಜರಾತ್‌ನ ಗಾಂಧಿನಗರದಲ್ಲಿ ಇಂಡಿಯನ್ ಡೈರಿ ಅಸೋಷಿಯೇಷನ್ ವತಿಯಿಂದ ನಡೆದ 49ನೇ ರಾಷ್ಟ್ರಮಟ್ಟದ ಡೈರಿ ಉದ್ಯಮ ಸಮ್ಮೇಳನದಲ್ಲಿ ಸುಜಾತಾ ವೆಂಕಟೇಶ್ ಈ  ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಗಾಂಧಿನಗರದಲ್ಲಿ ನಡೆದ ಸಮ್ಮೇಳನಕ್ಕೆ ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ಸುಜಾತ ವೆಂಕಟೇಶ್ ರವರ ಹೆಸರನ್ನು ಮಹಿಳಾ ವಿಭಾಗದಿಂದ ಸೂಚಿಸಲಾಗಿತ್ತು. ಒಕ್ಕೂಟದ ಅಧಿಕಾರಿಗಳು ಇವರ ಹೆಸರು ಹಾಗೂ ಸಂಬಂಧಿಸಿದ ದಾಖಲೆಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಿದ್ದರು. ಇದೇ ರೀತಿಯ ದೇಶದ ವಿವಿಧ ಹಾಲು ಉತ್ಪಾದಕರ ಸಂಘ ಹಾಗೂ ಒಕ್ಕೂಟಗಳು ತಮ್ಮ ವ್ಯಾಪ್ತಿಯ ಹಾಲು ಉತ್ಪಾದಕ ಮಹಿಳಾ ಸದಸ್ಯರ ಹೆಸರನ್ನು ಸೂಚಿಸಿತ್ತು. ಎಂಪಿಸಿಎಸ್ ಗೆ ಅತಿಹೆಚ್ಚು ಹಾಲು ಪೂರೈಕೆ‌‌ ಮಾಡಿರುವ ದಾಖಲೆಯನ್ನು ಹೊಂದಿದ್ದ ಸುಜಾತ ವೆಂಕಟೇಶ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಭೂಹಳ್ಳಿ ಗ್ರಾಮದ ಸುಜಾತ ವೆಂಕಟೇಶ್ ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅತಿಹೆಚ್ಚು ಹಾಲು ಉತ್ಪಾದನೆ ಮಾಡುವ ಜೊತೆಗೆ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಇವರು ೨೨ ಮಿಶ್ರತಳಿ ಹಸುಗಳನ್ನು ಸಾಕಿದ್ದು, ಇದರಲ್ಲಿ ೧೧ ಹಸುಗಳು ಹಾಲು ಕರೆಯುತ್ತಿವೆ. ಪ್ರತಿನಿತ್ಯ ೨೦೦ ರಿಂದ ೨೫೦ ಲೀಟರ್ ವರೆಗೆ ಹಾಲು ಪೂರೈಕೆ ಮಾಡುತ್ತಿದ್ದು, ಮೇವುಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ಉತ್ತಮ ತಳಿಯ ಮೇವು, ಮಾದರಿ ಕೊಟ್ಟಿಗೆ, ಹಸುಗಳಿಗೆ ರಬ್ಬರ್ ನೆಲಹಾಸು ಸೇರಿದಂತೆ ವಿನೂತನ ವಿಧಾನಗಳನ್ನು ಅಳವಡಿಸಿಕೊಂಡು ಉತ್ತಮ ಸಾಧನೆ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net