

ಚನ್ನಪಟ್ಟಣ
ತೆಂಗಿನಮರಗಳಿಗೆ ಬೆಂಕಿ ತಗುಲಿ ಹತ್ತಾರು ತೆಂಗಿನಮರಗಳು ನಾಶವಾಗಿರುವ ಘಟನೆ ತಾಲೂಕಿನ ಅರಳಾಪುರ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಅಪಾರವಾದ ನಷ್ಟ ಉಂಟಾಗಿದೆ. ಗ್ರಾಮದ ನಾಗೇಂದ್ರಗೌಡ ಎಂಬುವವರಿಗೆ ಸೇರಿದ ೨ ಎಕರೆ ಜಮೀನಿನಲ್ಲಿ ಕಬ್ಬಿನಗದ್ದೆ ಹಾಗೂ ತೆಂಗಿನಮರಗಳು ಇದ್ದವು.
ಕಬ್ಬಿನ ತರಗಿಗೆ ಬೆಂಕಿ ತಗುಲಿ ಈ ದುರ್ಘಟನೆ ನಡೆದಿದೆ. ವಿದ್ಯುತ್ ತಂತಿಗಳು ಒಂದಕ್ಕೊಂದು ತಗುಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಘಟನೆಯಲ್ಲಿ ಫಲ ಕೊಡುತ್ತಿದ್ದ ಹತ್ತಾರು ತೆಂಗಿನಮರಗಳು ಬೆಂಕಿಯ ಕೆನ್ನಾಲಿಗೆ ತುತ್ತಾಗಿವೆ.
ಈ ಘಟನೆಯಿಂದ ರೈತನಿಗೆ ಅಪಾರವಾದ ನಷ್ಟ ಉಂಟಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.