

ಅಭಿಲಾಷ್ ತಿಟ್ಟಮಾರನಹಳ್ಳಿ
ಚನ್ನಪಟ್ಟಣ
ಆಷಾಡ ಜಾತ್ರೆ ಎಂದೇ ಹೆಸರುವಾಸಿಯಾದ ತಾಲೂಕಿನ ಪುರಾಣ ಪ್ರಸಿದ್ಧ ದೇವರಹೊಸಹಳ್ಳಿ ಗ್ರಾಮದ ಸಂಜೀವರಾಯಸ್ವಾಮಿ ಜಾತ್ರಾಮಹೋತ್ಸವ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಜೂ.30ರ ಶುಕ್ರವಾರ ನಡೆಯಲಿದೆ.
ಪುರಾಣ ಇತಿಹಾಸವಿರುವ ಶ್ರೀ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ ಪ್ರಯುಕ್ತ ಜೂ.28 ರ ಬುಧವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿವೆ. ಬುಧವಾರ ಅಭಿಷೇಕ, ಸ್ವಸ್ತಿವಾಚನ, ಅಂಕುರಾರ್ಪಣ, ರಕ್ಷಾಬಂಧನ, ಪ್ರಾಕಾರೋತ್ಸವ ನಡೆಯಲಿದೆ. ಜೂ.29ರ ಗುರುವಾರ ಏಕಾದಶಿ ಪ್ರಯುಕ್ತ ಧ್ವಜಾರೋಹಣ,ಯಾಗಶಾಲ ಪ್ರವೇಶ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ. ಜೊತೆಗೆ ಸಂಜೆ ೬ ಗಂಟೆಗೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯವರ ಕಲ್ಯಾಣೋತ್ಸವ ನಡೆಯಲಿದೆ.
ಜೂ. 30ರ ಶುಕ್ರವಾರ 12.30 ರಿಂದ 1.10ಕ್ಕೆ ಸಲ್ಲುವ ಶುಭ ಕನ್ಯಾಲಗ್ನದಲ್ಲಿ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಬ್ರಹ ರಥೋತ್ಸವ ನಡೆಯಲಿದೆ. ರಥೋತ್ಸವ ಪ್ರಯುಕ್ತ ಮುಂಜಾನೆಯಿಂದಲೇ ನಾನಾ ಪೂಜಾ ಕೈಕರ್ಯಗಳು ನಡೆಯಲಿವೆ. ಅದೇ ದಿನ ಸಂಜೆ ಡೋಲೋತ್ಸವ, ದೀಪೋತ್ಸವ, ತೇಪೋತ್ಸವ ಹಾಗೂ ಬಾಣಬಿರುಸಿನ ಪ್ರದರ್ಶನ ನಡೆಯಲಿದೆ. ಜು.2ರ ವರೆಗೆ ಬ್ರಹ್ಮ ರಥೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇದರ ಪ್ರಯುಕ್ತ ಸಂಗೀತ, ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸಹ ಪ್ರತಿದಿನ ಜರುಗಲಿವೆ.
ಆಷಾಢ ಜಾತ್ರೆ ಎಂದೇ ಖ್ಯಾತಿ!
ವ್ಯಾಸ ಮಹರ್ಷಿಗಳು ತಪಸ್ಸು ಮಾಡಿ, ಬೆಂಕಿಯ ಕೆಂಡದಲ್ಲಿ ಪ್ರಾಣದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎಂಬ ಪುರಾಣದ ಹಿನ್ನೆಲೆ ಈ ಕ್ಷೇತ್ರಕ್ಕಿದೆ. ವರ್ಷಕ್ಕೊಮ್ಮೆ ಆಷಾಢ ಮಾಸದಲ್ಲಿ ನಡೆಯುವ ಈ ಬ್ರಹ್ಮರಥೋತ್ಸವದಲ್ಲಿ ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನವ ದಂಪತಿಗಳು ಸಂಜೀವರಾಯ ಸ್ವಾಮಿಯ ದರ್ಶನ ಪಡೆದರೆ ದಾಂಪತ್ಯ ಜೀವನ ಸುಖಮಯ ಆಗಿರುತ್ತದೆ ಎಂಬ ನಂಬಿಕೆ ಇದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ನವ ದಂಪತಿಗಳು ಈ ಜಾತ್ರೆಗೆ ಆಗಮಿಸುತ್ತಾರೆ. ಸಾಲಿಗ್ರಾಮ ಶಿಲೆಗಳಿಂದ ಇಲ್ಲಿನ ಹನುಮನ ವಿಗ್ರಹ ಪ್ರತಿಷ್ಠಾಪನೆ ಆಗಿದ್ದು, ವ್ಯಾಸಮಹರ್ಷಿಗಳೇ ಬೆಂಕಿಯ ಕೆಂಡದ ಮೂಲಕ ಹನುಮನ ರೂಪ ನೀಡಿದ್ದಾರೆ ಎಬುದು ಇಲ್ಲಿನ ಜನರ ನಂಬಿಕೆ. ದೇವರಹೊಸಳ್ಳಿಯ ಸಂಜೀವರಾಯಸ್ವಾಮಿ ಮೂರ್ತಿ ಸೌಮ್ಯವಾಗಿದೆ. ಇದರಿಂದ ಸಂಜೀವರಾಯಸ್ವಾಮಿಯ ಮೊರೆ ಹೋದರೆ ಮಾನಸಿಕ ಮತ್ತು ದೈಹಿಕ ರೋಗಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ.
ನಂಬಿದವರ ಕಾಮಧೇನು, ಆರಾಧಿಸುವವರ ಕಲ್ಪವೃಕ್ಷ ಎನಿಸಿರುವ ಶ್ರೀ ಕ್ಷೇತ್ರದಲ್ಲಿ ತಾಲೂಕು ಆಡಳಿತ, ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದಿಂದ ಈ ಬಾರಿ ಬ್ರಹ್ಮರಥೋತ್ಸವ ಹಾಗೂ ತೋಮಾಲಸೇವೆ, ವೈಕುಂಠ ಸೇವಾದರ್ಶನ ಹಾಗೂ ಲಕ್ಷ ದೀಪೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ. ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು. ಟಿ.ಜೆ. ದಯಾನಿಧಿ ಜನಾರ್ದನ್, ಸನ್ನಿದ್ದಿ ಅರ್ಚಕರು.
-
ಇತಿಹಾಸ ಪ್ರಸಿದ್ಧ ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯಕ್ರಮ ಕೈಗೊಳ್ಳಲಾಗಿದೆ. ಜಾತ್ರಾ ಮಹೋತ್ಸವ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು. - ಮಹೇಂದ್ರ, ತಹಸೀಲ್ದಾರ್ ಚನ್ನಪಟ್ಟಣ.