ಅಪಾಯಕಾರಿ ಒಣ ಮರಗಳು ತೆರವಿಗೆ ಅಧಿಕಾರಿಗಳ ನಿರ್ಲಕ್ಷ್ಯ ವಾಹನ ಸವಾರರು, ಪಾದಚಾರಿಗಳ ಪ್ರಾಣಕ್ಕೆ ಕಂಟಕ

20230824_151738
Published on

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರ ಸೇರಿ ಗ್ರಾಮೀಣ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುವ ಒಣಗಿದ ಮರಗಳು ಅಪಾಯಕ್ಕೆ ಕಾದು ನಿಂತಿವೆ. ರಸ್ತೆಯಲ್ಲಿ ಸಂಚರಿಸುವವರ ಪ್ರಾಣಕ್ಕೆ ಕಂಟಕ ಎನಿಸಿರುವ ಈ ಮರಗಳನ್ನು ತೆರವುಗೊಳಿಸಲು ಸಂಬಂಧಿಸಿದವರು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.

ನಗರ ಪ್ರದೇಶ ಸೇರಿ ತಾಲೂಕಿನ ಗ್ರಾಮೀಣ ಭಾಗದ ಹಲವು ರಸ್ತೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಣಗಿದ ಮರಗಳಿವೆ. ಆಯಸ್ಸು ಮುಗಿದಿರುವ ಈ ಮರಗಳ ತೆರವಿಗೆ ಸಂಬಂಧಿಸಿದವರು ನಿರ್ಲಕ್ಷ್ಯ ತೋರಿರುವುದರಿಂದ ಸಮಸ್ಯೆ ಎದುರಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಸರ್ಕಾರ ಸೇರಿ ಪರಿಸರ ಪ್ರಿಯರು ಸಾಕಷ್ಟು ಮರಗಳನ್ನು ನೆಟ್ಟಿದ್ದಾರೆ. ಪರಿಸರ ದೃಷ್ಟಿಯಿಂದ ಇದು ಉತ್ತಮ ಕಾರ್ಯವೂ ಆಗಿದೆ. ಆದರೆ, ಇವುಗಳ ಪೈಕಿ ಒಣಗಿದ (ಆಯಸ್ಸು ಮುಗಿದ) ಮರಗಳನ್ನು ತೆರವುಗೊಳಿಸಬೇಕಾಗಿದ್ದು ಸಂಬಂಧಪಟ್ಟವರ ಕರ್ತವ್ಯವಾಗಿದೆ. ಆದರೆ, ಬೀಳುವ ಹಂತ ತಲುಪಿರುವ ಮರಗಳನ್ನೂ ತೆರವುಗೊಳಿಸಲು ನಿರ್ಲಕ್ಷ್ಯವಹಿಸಿರುವುದರಿಂದ ಈ ಮರಗಳು ವಾಹನ ಸವಾರರು, ಪಾದಚಾರಿಗಳ ಬಲಿಗಾಗಿ ಕಾಯ್ದು ಕುಳಿತಿರುವಂತಿದೆ.

ಹೆದ್ದಾರಿಯಲ್ಲೂ ಇದೆ ಅಪಾಯ

ನಗರದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲೂ ಒಣಗಿದ ಮರಗಳು ಸಾಕಷ್ಟಿವೆ. ಈಗಲೋ.., ಆಗಲೋ ಬೀಳುವ ಸ್ಥಿತಿಯಲ್ಲಿವೆ. ನಗರದ ತಾಪಂ ಕಚೇರಿಯ ಎದುರೇ ಬೃಹತ್ ಮರವೊಂದು ಸಂಪೂರ್ಣ ಒಣಗಿದ್ದು, ಯಾವಾಗ ಬೀಳುತ್ತದೆಯೋ ಎಂಬ ಆತಂಕ ಸೃಷ್ಟಿಸಿದೆ. ಗಾಳಿ ಮತ್ತಿತರ ಕಾರಣಗಳಿಂದಾಗಿ ಈ ಮರಗಳು ಬಿದ್ದು ಅಪಾಯವನ್ನೂ ಉಂಟು ಮಾಡಿವೆ. ನಿರುಪಯುಕ್ತ ಮರಗಳನ್ನು ತೆರವು ಮಾಡಬೇಕಾದ ಲೋಕೋಪಯೋಗಿ ಇಲಾಖೆ, ಹೆದ್ದಾರಿ ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಿರ್ಲಕ್ಷ್ಯ ತೋರಿವೆ. ಇದರಿಂದ ಅಮಾಯಕ ವಾಹನ ಸವಾರರು ಅಪಾಯ ಎದುರಿಸುವಂತಾಗಿದೆ.

ಮರ ತೆರವಿಗೆ ಗೊಂದಲ

ಒಣಗಿದ ಮರ ತೆರುವ ಮಾಡುವ ಬಗ್ಗೆ ಗೊಂದಲಗಳಿದ್ದು, ಮರ ತೆರವಿಗೆ ಅರಣ್ಯ ಇಲಾಖೆ ಅನುಮತಿ ನೀಡಬೇಕು ಎಂಬ ಸಿದ್ಧ ಉತ್ತರವನ್ನು ಸಂಬಂಧಿಸಿದವರು ಹೇಳುತ್ತಾರೆ. ಆದರೆ, ಒಣಗಿದ ಮರ ತೆರವಿಗೆ ಯಾವುದೇ ಅನುಮತಿ ಅಗತ್ಯವಿಲ್ಲ. ಸಮಸ್ಯೆಗೆ ಕಾರಣವಾಗುವ ಒಣಗಿದ ಮರಗಳನ್ನು ಸಂಬಂಧಿಸಿದ ಇಲಾಖೆಯವರೇ ತೆರವುಗೊಳಿಸಿಕೊಳ್ಳಬಹುದು ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಷ್ಟನೆಯಾಗಿದೆ. ಆದರೆ, ಈ ಒಣಮರಗಳ ವಿಚಾರದಲ್ಲಿ ಸಂಬಂಧಿಸಿದವರು ಜಾರಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ರಸ್ತೆಬದಿಯಲ್ಲಿ ಇರುವ ಒಣಗಿದ ಮರಗಳಿಗೆ ಮುಕ್ತಿ ಕೊಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

=================

ಲೋಕೋಪಯೋಗಿ ಇಲಾಖೆ ಮೇಲೆ ಪ್ರಕರಣ!

ತಾಲೂಕಿನ ಯಲಚಿಪಾಳ್ಯದ ಬಳಿ ಮರಬಿದ್ದು ಪ್ರಯಾಣಿಕರು ಗಾಯಗೊಂಡ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಕಾಡನಕುಪ್ಪೆ ಗ್ರಾಮದ ನಾಗರಾಜು ಎಂಬುವವರು ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ಅಪಘಾತಕ್ಕೆ ಲೋಕೋಪಯೋಗಿ ಇಲಾಖೆಯೇ ಕಾರಣವಾಗಿದ್ದು, ರಸ್ತೆ ಬದಿಯಲ್ಲಿದ್ದ ಒಣಗಿದ ಮರ ಹಾಳಾಗಿದ್ದರೂ ತೆರವು ಮಾಡದೇ ಇಲಾಖೆ ನಿರ್ಲಕ್ಷ್ಯ ತೋರಿರುವುದೇ ಘಟನೆಗೆ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಲೋಕೋಪಯೋಗಿ ಇಲಾಖೆ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಯಲ್ಲಿರುವ ಒಣಮರಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಮರಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ಅಗತ್ಯವಿದ್ದು, ಹಾಳಾಗಿರುವ ಮರಗಳ ಮಾಹಿತಿ ಸಂಗ್ರಹಿಸಿ ಅಂತಹ ಮರಗಳ ತೆರವಿಗೆ ಅಗತ್ಯಕ್ರಮ ಕೈಗೊಳ್ಳಲಾಗುವುದು.

ಮಹದೇವಪ್ಪ, ಇಇ, ಲೋಕೋಪಯೋಗಿ ಇಲಾಖೆ

ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿರುವ ಹಸಿ ಮರಗಳ ತೆರವಿಗೆ ಇಲಾಖೆ ಅನುಮತಿ ಕಡ್ಡಾಯವಾಗಿದೆ. ಆದರೆ, ಒಣಗಿರುವ ಮರಗಳ ತೆರವಿಗೆ ಯಾವುದೇ ನಿಬಂಧನೆ ಇಲ್ಲ. ಸಂಪೂರ್ಣವಾಗಿ ಒಣಗಿರುವ ಮರಗಳನ್ನು ಸಂಬಂಧಿಸಿದವರು ತೆರವುಗೊಳಿಸಬಹುದು. ನಮ್ಮ ಗಮನಕ್ಕೆ ತಂದರೂ ಪೂರಕವಾಗಿ ಕೆಲಸ ಮಾಡುತ್ತೇವೆ.

ಎ.ಕಿರಣ್ ಕುಮಾರ್, ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net