ಸಮಸ್ಯೆಗಳ ಆಗರವಾದ ಚನ್ನಪಟ್ಟಣ ರೈಲ್ವೆ ನಿಲ್ದಾಣ

Rail Cpt
Published on

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ನಗರದ ರೈಲ್ವೆ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು, ನಿಲ್ದಾಣ ಸ್ವಚ್ಛತೆ ಸೇರಿದಂತೆ ಹಲವು ಮೂಲ ಸೌಕರ್ಯದಿಂದ ವಂಚಿತವಾಗಿ ನರಳುತ್ತಿದೆ.

ನಿಲ್ದಾಣದ ಹೆಬ್ಬಾಗಿಲಿನಲ್ಲೆ ಸ್ವಾಗತಿಸುವ ಗಬ್ಬುವಾಸನೆ ಶೌಚಗೃಹದ ಜಾಗ ಹಾಗೂ ನೀರಿನ ಬರ, ಆವರಣದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ, ಅನೈತಿಕ ಚಟುವಟಿಕೆಯ ತಾಣವಾಗಿರುವ ವಸತಿ ಗೃಹಗಳು, ಪಾನಪ್ರಿಯರ ವಿಶ್ರಾಂತಿ ಧಾಮ, ಕಳ್ಳಕಾಕರ ಮೇಲೆ ಇಲ್ಲದ ನಿಗಾ ಸೇರಿ ಹಲವು ಸಮಸ್ಯೆಗಳನ್ನು ಚನ್ನಪಟ್ಟಣ ರೈಲ್ವೆ ನಿಲ್ದಾಣ ಹೊದ್ದು ನಿಂತಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಂಬಂಧಪಟ್ಟವರ ಜಾಣ ಕುರುಡುತನ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಗಬ್ಬುನಾತದ ಸ್ವಾಗತ!

ನಗರದ ಹೃದಯ ಭಾಗದಲ್ಲಿರುವ ರೈಲ್ವೆ ನಿಲ್ದಾಣದಿಂದ ವಿವಿಧೆಡೆ ಪ್ರಯಾಣಿಸಲು ನಿಲ್ದಾಣದತ್ತ ನಿತ್ಯ ಸುಮಾರು 8 ಸಾವಿರ ಪ್ರಯಾಣಿಕರು ಮೈಸೂರು, ಬೆಂಗಳೂರು ಮಹಾನಗರಕ್ಕೆ ತೆರಳಲು ಈ ನಿಲ್ದಾಣ ಅವಲಂಬಿಸುತ್ತಾರೆ. ಆದರೆ, ನಿಲ್ದಾಣಕ್ಕೆ ಬರುವ ಸಾವಿರಾರು ಮಂದಿಗೆ ನಿತ್ಯ ಗಬ್ಬುವಾಸನೆ ಸ್ವಾಗತ ಕೋರುತ್ತದೆ. ಸ್ವಾಗತ ಕಮಾನಿನ ಕಾರಿಡಾರ್​ ಬಯಲು ಶೌಚಗೃಹವಾಗಿದ್ದು, ಕಾರಿಡಾರ್​ನ ಎರಡು ಬದಿಯ ಚರಂಡಿ ಹಾಗೂ ಖಾಲಿ ಇರುವ ವಸತಿಗೃಹದ ಗೋಡೆಗಳು ಮೂತ್ರ ವಿಸರ್ಜನೆಯ ತಾಣವಾಗಿವೆ. ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ನಿಲ್ದಾಣದಲ್ಲಿ ಶೌಚಕ್ಕಿಲ್ಲ ಜಾಗ!

ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತ ಶೌಚಗೃಹ ಇಲ್ಲದೇ ಪ್ರಯಾಣಿಕರು ಶೌಚಕ್ಕೆ ಪರದಾಡಬೇಕಾದ ಸ್ಥಿತಿ ಇದೆ. ಇರುವ ಶೌಚಾಗೃಹಕ್ಕೆ ಬೀಗ ಜಡಿದಿದ್ದು, ಪ್ರಯಾಣಿಕರು ಖಾಲಿ ಜಾಗ ಹುಡುಕುವ ಅನಿವಾರ್ಯತೆ ಎದುರಾಗಿದೆ. ಮಹಿಳೆಯರು ಬೀಗ ಜಡಿದಿರುವ ಶೌಚಗೃಹ ನೋಡಿ ಹಿಡಿಶಾಪ ಹಾಕುತ್ತಿದ್ದಾರೆ.

ದಾಹ ನೀಗಿಸದ ನಲ್ಲಿಗಳು

ಇನ್ನು ನಿಲ್ದಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ನೀರಿನ ನಳಗಳ ಬಳಿ ಇರುವ ಅನೈರ್ಮಲ್ಯ ನೋಡಿದರೆ ನೀರಿನ ದಾಹವೇ ಹೋಗಿಬಿಡುವಂತಿದೆ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪ್ರಮುಖ ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು ಕೂಡ ಇಲ್ಲದಿರುವುದು ಈ ನಿಲ್ದಾಣದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಶಿಸ್ತಿಲ್ಲ.., ಸುರತೆಯೂ ಇಲ್ಲ;

ನಿಲ್ದಾಣದ ಆವರಣದಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳು ನಿಲುಗಡೆಯಾಗುತ್ತಿದ್ದು, ಇದು ಪ್ರಯಾಣಿಕರಿಗೆ ಕಿರಿಕಿರಿಯುಂಟು ಮಾಡುತ್ತಿದೆ. ನಿಲ್ದಾಣದ ಮುಂಭಾಗ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದ್ದು, ನಿಲ್ದಾಣ ಪಾನಪ್ರಿಯರ ವಿಶ್ರಾಂತಿ ತಾಣವಾಗಿದೆ.

ಸಾವಿರಾರು ಮಂದಿ ಬಂದು ಹೋಗುವ ಈ ನಿಲ್ದಾಣದಲ್ಲಿ ಭದ್ರತೆ ದೊಡ್ಡ ಸವಾಲಾಗಿದ್ದು, ಸಿಸಿ ಟಿವಿ ವ್ಯವಸ್ಥೆ ಹಾಗೂ ಭದ್ರತಾದೊಷದಿಂದ ನಿಲ್ದಾಣದಲ್ಲಿ ಕಳ್ಳರ ಕೈಚಳಕವೂ ನಡೆಯುತ್ತಿದೆ. ಸವಲತ್ತು, ಭದ್ರತೆ ವಸತಿಗೃಹಗಳ ಪಾಳುಕೊಂಪೆ ಜತೆಗೆ ನಿಲ್ದಾಣವನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇನ್ನಾದರೂ ರೈಲ್ವೆ ಅಧಿಕಾರಿಗಳು ನಿಲ್ದಾಣದತ್ತ ಗಮನಹರಿಸಿ ಅವ್ಯವಸ್ಥೆಗಳನ್ನು ಪರಿಹರಿಸಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.

ನಿತ್ಯ ಕೆಲಸಕ್ಕೆಂದು ಮೈಸೂರಿಗೆ ತೆರಳುತ್ತೇನೆ. ನಿಲ್ದಾಣದ ಮುಂಭಾಗವೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಈ ಕಾರಣದಿಂದ ಗಬ್ಬುವಾಸನೆ. ಒಳಗೂ ಸಾಕಷ್ಟು ಸಮಸ್ಯೆಗಳಿವೆ. ಬೇರೆ ನಿಲ್ದಾಣದಲ್ಲಿರುವ ಸವಲತ್ತು ಹಾಗೂ ಭದ್ರತೆ ಚನ್ನಪಟ್ಟಣ ರೈಲ್ವೆ ನಿಲ್ದಾಣದಲ್ಲಿಲ್ಲ ಎನ್ನುವುದೇ ಬೇಸರದ ಸಂಗತಿ. ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದರೆ ಸಮಸ್ಯೆಗಳ ದರ್ಶನವಾಗುತ್ತದೆ.

 ಭಾನುಪ್ರಿಯಾ ಪ್ರಯಾಣಿಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net