ಹಳ್ಳ ಹಿಡಿದ ಕಾಮಗಾರಿಗೆ ಹಣ ಭರಿಸಬೇಕಾದ ಅನಿವಾರ್ಯತೆ ಹೈಟೆಕ್ ಖಾಸಗಿ ಬಸ್ ನಿಲ್ದಾಣ ನನೆಗುದಿಗೆ ಗುತ್ತಿಗೆ ಸಂಸ್ಥೆಗೆ ಹಣ ನೀಡುವಂತೆ ಕೋರ್ಟ್ ಆದೇಶ

Cpt private bus stand
Published on

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರದ ಹೃದಯ ಭಾಗದಲ್ಲಿ ಬಹು ಅಂತಸ್ತಿನ ಕಟ್ಟಡ ನಿರ್ಮಾಣದ ಕನಸು ಕಂಡಿದ್ದ (ಹೈಟೆಕ್ ಖಾಸಗಿ ಬಸ್ ನಿಲ್ದಾಣ) ರಾಮನಗರ ಅಭಿವೃದ್ಧಿ ಪ್ರಾಧಿಕಾರ ಇದೀಗ, ಅತ್ತ ಕಟ್ಟಡವೂ ಇಲ್ಲದೇ, ಇತ್ತ ಗುತ್ತಿಗೆದಾರನಿಗೆ ದಂಡ ತೆರಬೇಕಾದ ಅನಿವಾರ್ಯತೆಗೆ ಸಿಲುಕಿದೆ. ನ್ಯಾಯಾಲಯದ ನಿರ್ದೇಶನದಂತೆ ಗುತ್ತಿಗೆದಾರನಿಗೆ ಹಣ ನೀಡಲು ತನ್ನ ಬೊಕ್ಕಸದಲ್ಲಿ ಹಣವಿಲ್ಲದೇ ಸರ್ಕಾರದ ಮೊರೆ ಹೋಗಿದೆ.

ಹೌದು, ಅತ್ತ ಭವ್ಯವಾದ ಕಟ್ಟಡವೂ ಇಲ್ಲ, ಇತ್ತ ಅಡಿಪಾಯವೇ ಇಲ್ಲದ ಕಾಮಗಾರಿಗೆ ಹಣ ಭರಿಸಬೇಕಾದ ಅನಿವಾರ್ಯತೆಗೆ ರಾಮನಗರ ಅಭಿವೃದ್ಧಿ ಪ್ರಾಧಿಕಾರ ಸಿಲುಕಿದೆ. ಹಲವು ವರ್ಷಗಳಿಂದ ವಿವಿಧ ಕಾರಣಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಕಾಮಗಾರಿ ಆರಂಭಿಸಿದ ಗುತ್ತಿಗೆ ಸಂಸ್ಥೆ ಕಾಮಗಾರಿಗಾಗಿ ಮಣ್ಣು ಎತ್ತಿರುವ ಹಣ ಕೊಡಿಸುವಂತೆ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಗುತ್ತಿಗೆ ಸಂಸ್ಥೆಗೆ ಹಣ ಭರಿಸುವಂತೆ ನ್ಯಾಯಾಲಯ ಆದೇಶ ನೀಡಿ, ವರ್ಷ ಕಳೆಯುತ್ತಿದ್ದರೂ, ಪ್ರಾಧಿಕಾರದ ಬಳಿ ಹಣವಿಲ್ಲದೇ ಸರ್ಕಾರದ ಕದ ತಟ್ಟುವ ಸ್ಥಿತಿ ಬಂದೊದಗಿದೆ.

ಏನಿದು ಯೋಜನೆ?

ನಗರದ ಬೆಂಗಳೂರು - ಮೈಸೂರು ಹೆದ್ದಾರಿ ಬದಿಯಲ್ಲಿ ಹೈಟೆಕ್ ಖಾಸಗಿ ಬಸ್ ಟರ್ಮಿನಲ್ ನಿರ್ಮಿಸಲು ರಾಮನಗರ - ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆ ಜಂಟಿಯಾಗಿ ಯೋಜನೆಯನ್ನು ರೂಪಿಸಿದ್ದವು. 2013ರಲ್ಲಿ ಕಾಮಗಾರಿಗೆ ಚಾಲನೆಯನ್ನೂ ನೀಡಲಾಗಿತ್ತು. ಪ್ರಾಧಿಕಾರದ ಹಣದಲ್ಲಿ ಸುಮಾರು 35 ಕೋಟಿ ರೂ. ಅಂದಾಜು ವೆಚ್ಚದಲ್ಲಿ 7 ಅಂತಸ್ತಿನ ಹಡಗು ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಹಳ್ಳ ತೋಡಿದ್ದು ಹೊರತುಪಡಿಸಿದರೆ ಕಾಮಗಾರಿ ಬಹುತೇಕ ಹಳ್ಳ ಹಿಡಿದು ದಶಕವೇ ಕಳೆದಿದೆ. 2013ರಲ್ಲಿ ಮುನ್ನೆಲೆಗೆ ಬಂದ ಮಹತ್ವಾಕಾಂಕ್ಷೆಯ ಚನ್ನಪಟ್ಟಣದ ಖಾಸಗಿ ಬಸ್ ಟರ್ಮಿನಲ್ ಕಾಮಗಾರಿ ಅನುದಾನದ ಕೊರತೆ, ಕಾನೂನು ವ್ಯಾಜ್ಯ, ಪ್ರಾಧಿಕಾರದ ಬಹುಕೋಟಿ ಹಗರಣ ಸೇರಿ ವಿವಿಧ ಕಾರಣಗಳಿಂದ ನನೆಗುದಿಗೆ ಬೀಳುವಂತಾಯಿತು.

ನ್ಯಾಯಾಲಯದ ಮೊರೆ!

ಕಾಮಗಾರಿ ಗುತ್ತಿಗೆ ಪಡೆದ ಕೆಎಂವಿ ಪ್ರಾಜೆಕ್ಟ್ ಸಂಸ್ಥೆ ಕಟ್ಟಡ ಕಾಮಗಾರಿಯನ್ನು ಆರಂಭದಲ್ಲಿ ಅತಿ ಉತ್ಸಾಹದಲ್ಲಿ ಆರಂಭಿಸಿತ್ತು. ಕಾಮಗಾರಿಯ ಅಡಿಪಾಯಕ್ಕಾಗಿ ಮಣ್ಣು ತೆಗೆದಿತ್ತು. ನಂತರ ಕಾಮಗಾರಿಗೆ ಗ್ರಹಣ ಹಿಡಿದಿದ್ದನ್ನು ಅರಿತು ಕಾಮಗಾರಿಯನ್ನು ನಿಲ್ಲಿಸಿತ್ತು. ಕಾಮಗಾರಿ ಆರಂಭದಲ್ಲಿ ಪ್ರಾಧಿಕಾರದಿಂದ ಹಣ ಬರದ ಕಾರಣ ಹಣ ಕೊಡಿಸುವಂತೆ ಗುತ್ತಿಗೆ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿತ್ತು. ಅದರಂತೆ ಕಳೆದ 2022ರ ಆಗಸ್ಟ್‌ನಲ್ಲಿ ಗುತ್ತಿಗೆ ಸಂಸ್ಥೆಗೆ 4.74 ಕೋಟಿ ರೂ. ಭರಿಸುವಂತೆ ನ್ಯಾಯಾಲಯ ಪ್ರಾಧಿಕಾರಕ್ಕೆ ಸೂಚಿಸಿತ್ತು. ಆದರೆ, ಪ್ರಾಧಿಕಾರ ಇದುವರೆಗೂ ಗುತ್ತಿಗೆ ಸಂಸ್ಥೆಗೆ ಹಣ ಭರಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದೆ. ಅತ್ತ ಕಾಮಗಾರಿಯೂ ಇಲ್ಲದೇ, ಇತ್ತ ಕನಿಷ್ಠ ಅಡಿಪಾಯವಿಲ್ಲದ ಕಾಮಗಾರಿಗಾಗಿ ದುಬಾರಿ ಹಣ ನೀಡುವ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ನ್ಯಾಯಾಲಯದ ಆದೇಶ ಪಾಲನೆ ಮಾಡಲೇಬೇಕಾದ ಅನಿವಾರ್ಯತೆಯಿಂದ ಸರ್ಕಾರದ ಕದ ತಟ್ಟುತ್ತ ಕಾಯುವಂತಾಗಿದೆ. ಹಲವು ಯಡವಟ್ಟಿನಿಂದ ಕಾನೂನು ಸಂಕೋಲೆಯಲ್ಲಿ ಪ್ರಾಧಿಕಾರ ಸಿಲುಕಿದೆ.

ಚನ್ನಪಟ್ಟಣ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಸಂಬಂಧ ಗುತ್ತಿಗೆ ಸಂಸ್ಥೆಗೆ ಹಣ ಭರಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಈ ಹಿಂದಿನ ಚನ್ನಪಟ್ಟಣ ಮತ್ತು ರಾಮನಗರ ಅಭಿವೃದ್ಧಿ ಪ್ರಾಧಿಕಾರದಿಂದ ಈ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಪ್ರಾಧಿಕಾರದಲ್ಲಿ ಹಣ ಇಲ್ಲವಾಗಿದ್ದು, ಮುಂದಿನ ಕ್ರಮ ಹಾಗೂ ಸಹಕಾರಕ್ಕೆ ಸರ್ಕಾರದ ಮೊರೆ ಹೋಗಿದ್ದೇವೆ.

ಶಿವನಂಕರಿಗೌಡ, ಆಯುಕ್ತ, ರಾಮನಗರ ಅಭಿವೃದ್ಧಿ ಪ್ರಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net