ಚನ್ನಪಟ್ಟಣ ಪಿಎಲ್ ಡಿ ಬ್ಯಾಂಕ್ ಚುನಾವಣೆ 10 ಮಂದಿ ಅವಿರೋಧ ಆಯ್ಕೆ

IMG-20230717-WA0016.jpg
Published on

ಚನ್ನಪಟ್ಟಣ; ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ ಚುನಾವಣೆಯಲ್ಲಿ ಹತ್ತು‌ ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ನಾಲ್ಕು ಸ್ಥಾನಗಳಿಗೆ ಚುನಾವಣೆ ಜರುಗಲಿದೆ.

ಬ್ಯಾಂಕ್ ನ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ‌ 14 ನಿರ್ದೇಶಕರ ಆಯ್ಕೆಗೆ ಜು.23 ರಂದು ಚುನಾವಣೆ ನಿಗಧಿಯಾಗಿದ್ದು, ನಾಮಪತ್ರ ಸಲ್ಲಿಕೆಯ ದಿನವಾದ ಶುಕ್ರವಾರ ಸಾಲಗಾರರ 5
ಕ್ಷೇತ್ರಗಳಿಗೆ ಏಕ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ ಹಿನ್ನೆಲೆಯಲ್ಲಿ ಈ ಕ್ಷೇತದ ಐದು ಮಂದಿ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದರು.

ನಾಮಪತ್ರ ವಾಪಸು ಪಡೆಯುವ ಕೊನೆಯದಿನವಾದ ಭಾನುವಾರ ಸಹ ಐದು ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಇನ್ನುಳಿದ ನಾಲ್ಕು ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.

13 ಸಾಲಗಾರರ ಕ್ಷೇತ್ರದ ಪೈಕಿ ಗೋವಿಂದಹಳ್ಳಿ ನಾಗರಾಜು, ಡಿಎಂಕೆ ಕುಮಾರ್, ತಿಟ್ಟಮಾರನಹಳ್ಳಿ ಟಿ.ಪಿ.ಹನುಮಂತಯ್ಯ, ಮಳೂರುಪಟ್ಟಣ ಬೈರನರಸಿಂಹಯ್ಯ, ರೇವಹೆಗ್ಗಡೆ, ಪ್ರಮೀಳ ವೆಂಕಟೇಶ್, ಸಿದ್ದರಾಜು ಎಸ್, ಮದ್ದೂರಯ್ಯ, ಈಶ್ವರಯ್ಯ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರು. ಇನ್ನುಳಿದಂತೆ ಹಲವಾರು ಅಕಾಂಕ್ಷಿಗಳಿದ್ದ ಸಾಲಗಾರರಲ್ಲದ ಒಂದು ಕ್ಷೇತ್ರದಿಂದ ಚಿಕ್ಕೇನಹಳ್ಳಿ ಮೋಹನ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದರು.

ಚುನಾವಣೆ ಫಿಕ್ಸ್!

ಪ್ರತಿಷ್ಠಿತ ಬ್ಯಾಂಕ್ ನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಜು 23 ರಂದು ಚುನಾವಣೆ ನಿಗಧಿಯಾಗಿದೆ. ಆದರೆ, ಬ್ಯಾಂಕ್ ಆರ್ಥಿಕವಾಗಿ ನಷ್ಟದಲ್ಲಿರುವ ಕಾರಣಕ್ಕೆ ಚುನಾವಣೆ ನಡೆಯಬಾರದು ಎಂಬುದು ಬಹುತೇಕರ ಒಮ್ಮತದ ಅಭಿಪ್ರಾಯವಾಗಿತ್ತು. ಅದರಂತೆ ಎಲ್ಲಾ ಕ್ಷೇತ್ರಗಳಿಗೂ ಅವಿರೋಧ ಆಯ್ಕೆಯಾಗುವಂತೆ ಮಾಡಲು ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ ಬೆಳಿಗ್ಗೆಯಿಂದಲ್ಲೂ ನಿರಂತರ ಸಭೆ ನಡೆಯಿತು.

ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಜೆಡಿಎಸ್ ಮುಖಂಡರಾದ ಪ್ರಸನ್ನ ಪಿ.ಗೌಡ, ಕುಕ್ಕುರುದೊಡ್ಡಿ ಜಯರಾಂ, ಗೋವಿಂದನಹಳ್ಳಿ ನಾಗರಾಜು ಸೇರಿದಂತೆ ಹಲವು ಮುಖಂಡರು ಬಹುತೇಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗುವಂತೆ ನೋಡಿಕೊಂಡರು. ಆದರೆ, ಸಾಲಗಾರರ ಕ್ಷೇತ್ರಗಳಾದ ಸಿಂಗರಾಜಿಪುರ, ನಾಗವಾರ, ಬೇವೂರು, ಹೊಂಗನೂರು ಕ್ಷೇತ್ರಗಳಿಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಚುನಾವಣೆ ಅನಿವಾರ್ಯವಾಯಿತು.

ಜೆಡಿಎಸ್ ತೆಕ್ಕೆಗೆ?

ಅವಿರೋಧ ಆಯ್ಕೆಯಾದ ಒಂದೆರಡು ಕ್ಷೇತ್ರ ಹೊರತುಪಡಿಸಿ, ಬಹುತೇಕ ಜೆಡಿಎಸ್ ಬೆಂಬಲಿತರು ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಬ್ಯಾಂಕ್ ಮತ್ತೊಮ್ಮೆ ಜೆಡಿಎಸ್ ತೆಕ್ಕೆಗೆ ಜಾರಿದೆ. ಹತ್ತು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ೧೯ ಅಭ್ಯರ್ಥಿಗಳು ಕಣದಲ್ಲಿದ್ದ ಸಾಲಗಾರರಲ್ಲದ ಒಂದು ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ ಎಂಬ ಅಂದಾಜು ಮಾಡಲಾಗಿತ್ತು. ಆದರೆ, ಅಂತಿಮವಾಗಿ ಒರ್ವ ಅಭ್ಯರ್ಥಿಯನ್ನು ಬೆಂಬಲಿಸಿ ಎಲ್ಲರೂ ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಅವಿರೋಧ ಆಯ್ಕೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net