

ಚನ್ನಪಟ್ಟಣ
ಕ್ಷುಲ್ಲಕ ವಿಚಾರಕ್ಕೆ ಆರಂಭಗೊಂಡ ಗಲಾಟೆಯೊಂದು ವೃದ್ಧೆಯ ಸಾವಿನಲ್ಲಿ ಅಂತ್ಯಗೊಂಡಿರುವ ತಾಲೂಕಿನ ಮೈಲನಾಯಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಲಿಂಗಮ್ಮ(80)ಎಂಬ ವೃದ್ಧೆಯೇ ಕ್ಷುಲ್ಲಕ ಜಗಳಕ್ಕೆ ಬಲಿಯಾದ ದುರ್ದೈವಿ. ಇವರ ಮನೆಯ ಪಕ್ಕದ ಚಾಲಕ ಮಂಜು ವೃದ್ಧೆಯ ಕೊಲೆ ಆರೋಪಿಯಾಗಿದ್ದಾನೆ. ಭಾನುವಾರ ಗ್ರಾಮದ ಅಕ್ಕಪಕ್ಕದ ಮನೆಯವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ಆರಂಭಗೊಂಡಿದೆ. ಈ ಗಲಾಟೆಯಲ್ಲಿ ಏನು ಅರಿಯದ ಹಿರಿಯ ಜೀವವೊಂದರ ಪ್ರಾಣಪಕ್ಷಿ ಹಾರಿಹೋಗಿದೆ.
ವಾಹನ ಚಾಲಕನಾಗಿರುವ ಮಂಜು ಮನೆಗೆ ಭಾನುವಾರ ಸಂಜೆ ಸಾಲಕೇಳಿಕೊಂಡು ಬಂದ ವ್ಯಕ್ತಿಯ ಜೊತೆಗೆ ಮೃತ ವೃದ್ಧೆಯ ಸೊಸೆ ಮಾತನಾಡಿದಳು ಎಂಬ ಕಾರಣಕ್ಕೆ ಈ ಗಲಾಟೆ ಆರಂಭಗೊಂಡಿದೆ. ತನ್ನ ಮನೆಗೆ ಬಂದವರ ಜೊತೆ ಯಾಕೆ ಮಾತನಾಡಬೇಕು ಎಂದು ಮಂಜು ಗಲಾಟೆ ನಡೆಸಿದ್ದಾನೆ. ಈ ವೇಳೆ ಜಗಳದ ಮಧ್ಯೆ ಬಂದ ವೃದ್ಧೆ ಶಿವಲಿಂಗಮ್ಮ ಎಂಬುವರನ್ನು ತಳ್ಳಿದ್ದಾನೆ. ಈ ವೇಳೆ ತೀವ್ರ ಅಸ್ವಸ್ಥಗೊಂಡ ಶಿವಲಿಂಗಮ್ಮ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವೃದ್ದೆಯ ಪುತ್ರ ಕೃಷ್ಣ ಎಂಬುವರ ಪತ್ನಿ ಚಂದ್ರಪ್ರಭಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.