ಶಿಕ್ಷಕರ ಗ್ರಾಮದಲ್ಲೊಬ್ಬ ಶ್ರೇಷ್ಠ ಕೃಷಿಕ ನಗರ ತೊರೆದು ಭೂತಾಯಿ ನಂಬಿದ ಮಂಜೇಶ್

IMG-20230826-WA0031
Published on

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಕೃಷಿ ಎಂದರೆ ಯುವಸಮೂಹ ಮೂಗು ಮುರಿಯುವ ಈ ಕಾಲದಲ್ಲಿ ತಾಲೂಕಿನ ಯುವಕನೊಬ್ಬ ಸಮಗ್ರ ಕೃಷಿಯ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ನಗರದ ವ್ಯಾಮೋಹ ತೊರೆದು, ಭೂತಾಯಿಯನ್ನು ನಂಬಿ ನೆಮ್ಮದಿಯ ಜೀವನ ಕಟ್ಟಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆೆ.

ಹೌದು..., ತಾಲೂಕಿನಲ್ಲಿ ಶಿಕ್ಷಕರ ಗ್ರಾಮ ಎಂದೇ ಹೆಸರುವಾಸಿಯಾಗಿರುವ ಚಕ್ಕೆರೆ ಗ್ರಾಮದ ಸಿ.ಆರ್.ಮಂಜೇಶ್ ಸಮಗ್ರ ಕೃಷಿಯಲ್ಲಿ ಸೈ ಎನಿಸಿಕೊಂಡಿರುವ ಯುವ ರೈತ. ಗ್ರಾಮದ ರಾಮಕೃಷ್ಣ ಹಾಗೂ ಮಹದೇವಮ್ಮ ದಂಪತಿ ದ್ವಿತೀಯ ಪುತ್ರನಾಗಿರುವ ಮಂಜೇಶ್, ಪಿತ್ರಾರ್ಜಿತ ಹಾಗೂ ಭೋಗ್ಯಕ್ಕೆ ಪಡೆದುಕೊಂಡಿರುವ ಜಮೀನಿನಲ್ಲಿ ವಿವಿಧ ಕೃಷಿ ಮಾಡಿ ಯಶಸ್ಸು ಸಾಧಿಸಿದ್ದಾರೆ. ಇವರ ಕೃಷಿ ಚಟುವಟಿಕೆಗೆ ತಂದೆ-ತಾಯಿ ಹಾಗೂ ಸಹೋದರ ಸಾಥ್ ನೀಡುತ್ತಿದ್ದು, ಕುಟುಂಬದ ಸಹಕಾರದಿಂದ ಮಂಜೇಶ್ ಸಾಧನೆಗೆ ಬೆಂಬಲವಾಗಿದೆ.

ಕೈಹಿಡಿದ ಸಮಗ್ರ ಕೃಷಿ!

ನಾಲ್ಕೂವರೆ ಎಕರೆ ಪಿತ್ರಾರ್ಜಿತ ಜಮೀನು ಹಾಗೂ ಭೋಗ್ಯಕ್ಕೆ ಪಡೆದಿರುವ 3 ಎಕರೆ ಜಮೀನಿನಲ್ಲಿ ಮಂಜೇಶ್, ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಭತ್ತ, ರಾಗಿ, ಮುಸುಕಿನ ಜೋಳ, ತೊಗರಿ ಜತೆಗೆ ತೋಟಗಾರಿಕೆ ಬೆಳೆಗಳಾದ ತೆಂಗು, ಬಾಳೆ, ಟೊಮ್ಯಾಟೊ, ತೊಗರಿ, ಕಾಕಡ ಹೂವು ಬೆಳೆಯುತ್ತಿದ್ದಾರೆೆ. ವಾಣಿಜ್ಯ ಬೆಳೆಯಾದ ಬಾಳೆಯನ್ನು ಅಂಗಾಂಶ ಸಸಿಗಳಿಂದ ಬೆಳೆಯುವುದು ವಿಶೇಷ. ಇದರೊಂದಿಗೆ ಜಮೀನಿನ ಬದುಗಳ ಮೇಲೆ ಹಲಸು, ನಿಂಬೆ, ಏಲಕ್ಕಿ ಸೇರಿ ಹಲವು ಬೆಳೆಗಳನ್ನು ಪ್ರಯೋಗಾತ್ಮಕವಾಗಿ ಬೆಳೆದು ಸೈ ಎನಿಸಿಕೊಂಡಿದ್ದಾರೆ. ವಿವಿಧ ಜಾತಿಯ ಹಣ್ಣಿನ ಮರಗಳು ಇವರ ಜಮೀನಿನಲ್ಲಿವೆ.

ಕೃಷಿ, ತೋಟಗಾರಿಕೆ ಬೆಳೆಗಳ ಜತೆಗೆ ಹೈನುಗಾರಿಕೆ, ರೇಷ್ಮೆ, ಮೀನು, ಕುರಿ, ಕೋಳಿ ಸಾಕಣೆಯಲ್ಲೂ ತೊಡಗಿರುವ ಮಂಜೇಶ್, ಎಲ್ಲದರಲ್ಲೂ ಲಾಭ ಕಂಡುಕೊಂಡಿದ್ದಾರೆೆ. ಏಕಬೆಳೆ, ಬಹುಬೆಳೆ, ಮಿಶ್ರಬೆಳೆ ಪದ್ಧತಿ ಅಳವಡಿಸಿಕೊಂಡು ಸಮಗ್ರ ಕೃಷಿಯಲ್ಲೂ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ನಿರೂಪಿಸಿದ್ದಾರೆೆ.

ಹನಿ ಹಾಗೂ ತುಂತುರು ನೀರಾವರಿ ಅಳವಡಿಸಿಕೊಂಡು, ರಾಸಾಯನಿಕ ರಸಗೊಬ್ಬರಗಳಿಗೆ ಪ್ರಾಧಾನ್ಯತೆ ನೀಡದೆ, ಎರೆಹುಳು ಹಾಗೂ ಕಾಂಪೋಸ್ಟ್ ಗೊಬ್ಬರ ತಯಾರಿಸಿಕೊಂಡು ಸಾವಯವ ಕೃಷಿಗೆ ಒತ್ತು ನೀಡಿದ್ದಾರೆೆ. ಕಠಿಣ ಪರಿಶ್ರಮ, ಕೃಷಿ ಮೇಲಿನ ಅಪರಿಮಿತ ಪ್ರೀತಿ ಹಾಗೂ ಆಧುನಿಕ ಕೃಷಿ ಬಗೆಗಿನ ಅರಿವಿನಿಂದ ಪ್ರಗತಿಪರ ಹಾಗೂ ಮಾದರಿ ಯುವ ಕೃಷಿಕ ಎನಿಸಿಕೊಂಡಿದ್ದಾರೆೆ.

ರುಚಿಸದ ಖಾಸಗಿ ಉದ್ಯೋಗ

29 ವರ್ಷದ ಮಂಜೇಶ್ ಬಿಕಾಂ ಪದವಿ ಅಪೂರ್ಣಗೊಳಿಸಿದ್ದು, ಈ ಹಿಂದೆ ಎಲ್ಲರಂತೆ ಬದುಕು ರೂಪಿಸಿಕೊಳ್ಳಲು ರಾಜಧಾನಿ ಮೆಟ್ಟಿಲು ತುಳಿದವರು. ಆದರೆ, ಚಿಕ್ಕಂದಿನಿಂದಲೂ ಮಣ್ಣಿನ ಸೆಳೆತವಿದ್ದ ಇವರಿಗೆ ಖಾಸಗಿ ಉದ್ಯೋಗಗಳು ರುಚಿಸಲಿಲ್ಲ. ಈ ಹಿನ್ನೆಲೆಯಲ್ಲಿ ಹುಟ್ಟೂರಿಗೆ ಹಿಂತಿರುಗಿ, ಪಿತ್ರಾರ್ಜಿತ ಒಣಭೂಮಿಯಲ್ಲಿ ಕೃಷಿ ಆರಂಭಿಸಿದರು. ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನಿಗಳ ಒಡನಾಟ, ಸಮಗ್ರ ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡು ಪಾಲಕರು ಹಾಗೂ ಸಹೋದರ ಅರುಣ್‌ಕುಮಾರ್ ಸಹಕಾರದಿಂದ ಸಮಗ್ರ ಕೃಷಿಯಿಂದ ವರ್ಷಕ್ಕೆ 5ರಿಂದ 6 ಲಕ್ಷ ರೂ.ವರೆಗೆ ಲಾಭ ಪಡೆಯುತ್ತಿದ್ದಾರೆೆ. ಇವರ ಕೃಷಿ ಸಾಧನೆಗೆ ಹಲವು ಪುರಸ್ಕಾರಗಳೂ ದೊರಕಿವೆ. ಕೃಷಿ ಇಲಾಖೆಯ ಆತ್ಮ ಕೃಷಿ ಯೋಜನೆಯಡಿ 2020ರಲ್ಲಿ ತಾಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿ, ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು ವತಿಯಿಂದ 2021-32ನೇ ಸಾಲಿನ ಯುವ ರೈತ ಪ್ರಶಸ್ತಿ ಹಾಗೂ ತಾಲೂಕು ಆಡಳಿತದ ಸನ್ಮಾನಕ್ಕೂ ಭಾಜನರಾಗಿದ್ದಾರೆ.

ಕೃಷಿ ಹೊಂಡದ ಸದ್ಬಳಕೆ

ಜಮೀನಿನಲ್ಲಿಯೇ ಇರುವ ಮನೆಯಲ್ಲಿ ಮಂಜೇಶ್ ಕುಟುಂಬ ವಾಸ ಮಾಡುತ್ತಿದ್ದು, ಇದು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದೆ. ಸಂಬಂಧಿಕರ ಕೋಳಿ ಫಾರ್ಮ್‌ನಲ್ಲಿ ಐದು ಸಾವಿರ ಬಾಯ್ಲರ್ ಕೋಳಿ ಸಾಕಣೆ ಮಾಡುತ್ತಿದ್ದು, ನಾಟಿ ಕೋಳಿ ಸಾಕಣೆಯೂ ಕೈ ಹಿಡಿದಿದೆ. ತಮ್ಮಲ್ಲಿ ಉತ್ಪತ್ತಿಯಾಗುವ ಗೊಬ್ಬರವಲ್ಲದೆ ಜಮೀನಿಗೆ ಬೇಕಾದ ಸಾವಯವ ಗೊಬ್ಬರವನ್ನು ಉತ್ಪತ್ತಿ ಮಾಡಿಕೊಳ್ಳುತ್ತಿದ್ದು, ಇದರೊಂದಿಗೆ ಜಮೀನಿನಲ್ಲಿ ನಿರ್ಮಿಸಿಕೊಂಡಿರುವ ಕೃಷಿ ಹೊಂಡದಲ್ಲಿ ಮಳೆ ನೀರು ಶೇಖರಣೆ ಮಾಡಿಕೊಳ್ಳಲಾಗುತ್ತಿದೆ. ಕೃಷಿ ಹೊಂಡಕ್ಕೆ ಮನೆಯಲ್ಲಿ ಉಪಯೋಗಿಸಿದ ನೀರು, ಕೊಟ್ಟಿಗೆಯ ಗಂಜಲ ಹೋಗುವ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ, ಆಧುನಿಕ ಕೃಷಿ ಸಲಕರಣೆಗಳನ್ನು ಉಪಯೋಗಿಸುತ್ತಿರುವ ಮಂಜೇಶ್, ಸಮಗ್ರ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಈ ಮೊದಲು ರೆಸ್ಟೋರೆಂಟ್‌ವೊಂದರಲ್ಲಿ ಕ್ಯಾಷಿಯರ್ ಆಗಿ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ, ಈ ಕೆಲಸಗಳು ತೃಪ್ತಿ ನೀಡಲಿಲ್ಲ. ಹೀಗಾಗಿ ಗ್ರಾಮಕ್ಕೆ ಮರಳಿ ತಂದೆ ಹಾಗೂ ಅಣ್ಣನ ಜತೆಗೆ ಕೃಷಿಯಲ್ಲಿ ತೊಡಗಿದೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದು ಆರ್ಥಿಕ ಲಾಭ ಗಳಿಸಲು ಸಾಧ್ಯವಾಯಿತು. ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ. ಕೃಷಿಯಿಂದ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ತಿಂಗಳ ಸಂಬಳಕ್ಕಾಗಿ ಇನ್ನೊಬ್ಬರ ಕಪಿಮುಷ್ಟಿಯಲ್ಲಿ ದುಡಿಯುವುದಕ್ಕಿಂತ ಕೃಷಿ ನಂಬಿ ಸ್ವಾವಲಂಬಿ ಬದುಕು ಸಾಗಿಸುವುದು ಉತ್ತಮ. ನನ್ನ ಕೃಷಿ ಸಾಧನೆಗೆ ಕುಟುಂಬ ಹಾಗೂ ಇಲಾಖೆಗಳ ಸಹಕಾರವೂ ಇದೆ. ಮುಂದೆ ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡುವ ಆಸಕ್ತಿ ಇದೆ.

ಸಿ.ಆರ್. ಮಂಜೇಶ್, ಯುವ ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net