

ಅಭಿಲಾಷ್ ತಿಟ್ಟಮಾರನಹಳ್ಳಿ, ಚನ್ನಪಟ್ಟಣ
ಸದಾ ನೀರು ತುಂಬಿಕೊಂಡು ಕಂಗೊಳಿಸುತ್ತಿದ್ದ ಚನ್ನಪಟ್ಟಣ ತಾಲೂಕಿನ ಹಲವು ಕೆರೆಗಳ ಒಡಲು ಖಾಲಿಯಾಗುತ್ತಿದೆ. ಏತ ನೀರಾವರಿ ಯೋಜನೆ ಅನುಷ್ಠಾನದಿಂದ ರಾಜ್ಯದೆಲ್ಲೆಡೆ ಹೆಸರು ಮಾಡಿದ ಬೊಂಬೆನಾಡು ಚನ್ನಪಟ್ಟಣದಲ್ಲಿ ಪ್ರಸುತ್ತ ಕೆಲ ಕೆರೆಗಳು ಬರಿದಾಗುತ್ತಿದ್ದು, ಜಲಕ್ರಾಂತಿಯ ಊರಲ್ಲಿ ಮತ್ತೆ ಖಾಲಿ ಕೆರೆಗಳ ದರ್ಶನವಾಗುವ ಕಾಲ ಸನ್ನಿಹಿತವಾಗುತ್ತಿದೆ.
ಹೌದು.. ಏತನೀರಾವರಿ ಯೋಜನೆಗಳ ಯಶಸ್ವಿ ಅನುಷ್ಠಾನ ಕಂಡ ತಾಲೂಕು ಚನ್ನಪಟ್ಟಣ. ತಾಲೂಕಿನ ಗಡಿಗ್ರಾಮ ಇಗ್ಗಲೂರು ಜಲಾಶಯದಿಂದ ತಾಲೂಕಿನ ಮೂಲೆಮೂಲೆಗೂ ನೀರು ಹರಿದ ರೋಚಕ ಇತಿಹಾಸ ತಾಲೂಕಿಗಿದೆ. ಸಾಲುಸಾಲು ನೀರಾವರಿ ಯೋಜನೆಗಳ ಲಾಭವನ್ನು ತಾಲೂಕು ಕಂಡಿದೆ. ಕಣ್ವ ಜಲಾಶಯ ನಿರ್ಮಾಣದಿಂದ ಹಿಡಿದು, ಇಗ್ಗಲೂರು ಜಲಾಶಯ ಸಹಿತ ನೀರಾವರಿ ಸೌಲಭ್ಯ ಪಡೆದ ಕೀರ್ತಿ ತಾಲೂಕಿಗಿದೆ. ಇದರೊಂದಿಗೆ ಗರಕಹಳ್ಳಿ ಏತ ನೀರಾವರಿ ಹಾಗೂ ಕಣ್ವ ಏತ ನೀರಾವರಿ ಯೋಜನೆಗಳಿಂದ ತಾಲೂಕಿನ ಮೂಲೆಮೂಲೆಗೂ ನೀರು ಹರಿದಿದೆ. ಇದರ ಹಿಂದೆ ಹಲವು ರಾಜಕಾರಣಿಗಳ ಶ್ರಮವೂ ಇದೆ.
ಅಂತರ್ಜಲ ಮಟ್ಟ ಹೆಚ್ಚಳ!: ಇಗ್ಗಲೂರು ಜಲಾಶಯದಿಂದ ಏತ ನೀರಾವರಿ ಯೋಜನೆಗಳ ಮೂಲಕ ತಾಲೂಕಿನ ಬಹುತೇಕ ಕೆರೆಗಳಿಗೆ ನೀರು ತುಂಬಿಸಿದ್ದು, ಇದರಿಂದಾಗಿ ತಾಲೂಕಿನಲ್ಲಿ ಜಲಕ್ರಾಂತಿ ನಡೆದು, ಕೆರೆಗಳು ನೀರಿನಿಂದ ನಳನಳಿಸುವಂತಾಗಿತ್ತು. ಇದರಿಂದಾಗಿ ಪಾತಾಳಕ್ಕಿಳಿದಿದ್ದ ಅಂತರ್ಜಲವೂ ಹೆಚ್ಚಳಗೊಂಡು, ತಾಲೂಕು ನೀರಾವರಿಯ ಸೆಲೆಯಾಯಿತು. ಇದರಿಂದಾಗಿ ರೈತರ ಬದುಕು ಸಹ ಉತ್ತಮಗೊಂಡಿತ್ತು. ಕೃಷಿ ಚಟುವಟಿಕೆಗಳನ್ನು ಅವಲಂಬಿಸಿ, ರೈತರು ಬದುಕು ಸಹ ಕಟ್ಟಿಕೊಂಡರು. ಮತ್ಸ್ಯ ಉದ್ಯಮವೂ ಹಲವರ ಬದುಕಿನ ದಾರಿಯಾಯಿತು.
ಕೆರೆಗಳ ಒಡಲು ಖಾಲಿ ಖಾಲಿ!: ಇಂತಹ ನೀರಾವರಿ ಕ್ರಾಂತಿಯ ಊರಿನಲ್ಲಿ ಪ್ರಸುತ್ತ ಹಲವು ಕೆರೆಗಳ ಒಡಲು ಖಾಲಿಯಾಗುತ್ತಿರುವುದು ಆತಂಕ ಮೂಡಿಸಿದೆ. ಮುಂಗಾರು ವೈಫಲ್ಯ, ಇಗ್ಗಲೂರು ಜಲಾಶಯದಲ್ಲಿ ನೀರಿನ ಅಲಭ್ಯತೆಯ ಕಾರಣದಿಂದ ತಾಲೂಕಿನ ಹಲವು ಕೆರೆಗಳ ನೀರು ಖಾಲಿಯಾಗುತ್ತಿದೆ. ತಾಲೂಕಿನ ಕೂಡ್ಲೂರು ಕೆರೆ, ಮೋಗೇನಹಳ್ಳಿ, ದೇವರಹೊಸಹಳ್ಳಿ, ಕೋಮನಹಳ್ಳಿ, ಗೋವಿಂದನ ಹಳ್ಳಿ ಕೂರಣಗೆರೆ, ತೂಬಿನಕೆರೆ ಚಕ್ಕಲೂರು, ಸಂಕಲಗೆರೆ ಸೇರಿ ಹಲವಾರು ಕೆರೆಗಳಲ್ಲಿ ನೀರು ಖಾಲಿಯಾಗಿದೆ. ಇನ್ನು ಹಲವು ಕೆರೆಗಳು ಖಾಲಿಯಾಗುವ ಸಂಭವವಿದೆ.
ಇತ್ತೀಚಿನ ಕೆಲ ವರ್ಷಗಳಿಂದ ಸದಾ ನೀರಿನಿಂದ ಕಂಗೊಳಿಸುತ್ತಿದ್ದ ಕೆರೆಗಳ ತಳ ದರ್ಶನವಾಗುತ್ತಿದೆ. ಕಳೆದ ವರ್ಷ ಯಥೇಚ್ಛವಾಗಿ ಮಳೆಯಾಗಿದ್ದ ಹಿನ್ನೆಲೆಯಲ್ಲಿ ಕೊಂಚ ನೀರಿನ ಲಭ್ಯತೆಯಿದ್ದು, ಕಳೆದ ವರ್ಷವೂ ಮಳೆಯಾಗದಿದ್ದರೆ ಯಾವ ಕೆರೆಗಳಲ್ಲೂ ನೀರು ಇರುತ್ತಿರಲಿಲ್ಲ ಎನ್ನಲಾಗಿದೆ.
ತಾಲೂಕಿನ ಕೆರೆಗಳಿಗೆ ಜೀವಸೆಲೆ ಎನ್ನಲಾಗುವ ಇಗ್ಗಲೂರು ಎಚ್.ಡಿ.ದೇವೇಗೌಡ ಬ್ಯಾರೇಜ್‌ನಲ್ಲಿ ಪ್ರಸ್ತುತ 18 ಅಡಿ ನೀರಿನ ಮಟ್ಟವಿದ್ದು, ಜಲಾಶಯಕ್ಕೆ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗಿದೆ. ಜಲಾಶಯಕ್ಕೆ ಬರುತ್ತಿದ್ದ ನೀರಿನ ಮೂಲಗಳು ಬಂದ್ ಆಗಿದ್ದು, ಜಲಾಶಯದಿಂದ ನೀರು ಎತ್ತುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ವರ್ಷದ ಆರಂಭದಿಂದ ಇಲ್ಲಿಯ ತನಕ ಯಾವ ಕೆರೆಗಳಿಗೂ ನೀರು ಹರಿಸಿಲ್ಲವಾಗಿದ್ದು, ಇದರೊಂದಿಗೆ ಮುಂಗಾರು ಸಹ ಕೈಕೊಟ್ಟ ಹಿನ್ನೆಲೆಯಲ್ಲಿ ಸದಾ ನೀರಿನಿಂದ ಕಂಗೊಳಿಸುತ್ತಿದ್ದ ತಾಲೂಕಿನ ಹಲವು ಕೆರೆಗಳು ಬರಿದಾಗಿವೆ.
ಜಲಾಶಯದಲ್ಲಿ ನೀರು ಅಲಭ್ಯ
ತಾಲೂಕಿನ ಕೆರೆಗಳ ಒಡಲು ತುಂಬಲು ಮಳೆಯ ಜತೆಗೆ ಏತ ನೀರಾವರಿ ಯೋಜನೆಗಳು ಸಹಕಾರಿಯಾಗಿದ್ದವು. ಇಗ್ಗಲೂರು ಜಲಾಶಯದಿಂದ ನೀರನ್ನು ಎತ್ತಿ ಕಣ್ವ ಜಲಾಶಯ ಸೇರಿ ತಾಲೂಕಿನ ಕೆರೆಗಳನ್ನು ತುಂಬಿಸಲಾಗುತಿತ್ತು. ಆದರೆ, ಇಗ್ಗಲೂರು ಜಲಾಶಯದಲ್ಲಿ ನೀರಿನ ಲಭ್ಯತೆ ಇಲ್ಲದ ಕಾರಣ ಏತ ನೀರಾವರಿ ಯೋಜನೆಯ ಪಂಪ್‌ಗಳನ್ನು ಆಫ್ ಮಾಡಲಾಗಿದೆ. ಸದ್ಯ ಇಗ್ಗಲೂರು ಜಲಾಶಯದಿಂದ ಗರಕಹಳ್ಳಿ, ನೇರಳೂರು , ಕೃಷ್ಣಾಪುರ ಗ್ರಾಮಗಳಿಗೆ ಮಾತ್ರ ನೀರು ಹರಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಅದೂ ಬಂದ್ ಆಗುವ ಸೂಚನೆ ಇದೆ.