

ಚನ್ನಪಟ್ಟಣ: ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡುವ ಭರವಸೆ ಇಡೇರದ ಕಾರಣಕ್ಕೆ ಕಾಂಗ್ರೆಸ್ ತೊರೆದೆ ಎಂದು ಇತ್ತೀಗಷ್ಟೇ ಜೆಡಿಎಸ್ ಸೇರ್ಪಡೆಗೊಂಡ ಪ್ರಸನ್ನ ಪಿ.ಗೌಡ ತಿಳಿಸಿದರು.
ಚನ್ನಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನಗೆ ರಾಜಕೀಯಕ್ಕಿಂತ ಸಮಾಜಸೇವೆಯಲ್ಲಿ ಸಾಕಷ್ಟು ಆಸಕ್ತಿ ಇತ್ತು. ರಾಜಕೀಯ ಶಕ್ತಿ ಇದ್ದರೆ ಇನ್ನಷ್ಟು ಬಡಜನರ ಸೇವೆ ಮಾಡಬಹುದು ಎಂಬ ಉದ್ದೇಶದಿಂದ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಸಿದ್ಧತೆಯಲ್ಲಿದ್ದೆ. ನನ್ನ ಆಸಕ್ತಿ ಹಾಗೂ ಸೇವೆಯನ್ನು ಗುರುತಿಸಿದ ಸಂಸದ ಡಿ.ಕೆ.ಸುರೇಶ್ ರವರು ಚನ್ನಪಟ್ಟಣ ಕ್ಷೇತ್ರದಿಂದ ಪಕ್ಷದ ಟಿಕೆಟ್ ನೀಡುವ ಭರವಸೆ ನೀಡಿ ಇಲ್ಲಿಗೆ ಕರೆತಂದರು. ನಾನು ಸಹ ನನ್ನ ತವರು ಕ್ಷೇತ್ರ ಎಂಬ ಪ್ರೀತಿಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಅತ್ಯಂತ ವೇಗವಾಗಿ ಆರಂಭಿಸಿದೆ. ಆದರೆ, ಕಾಂಗ್ರೆಸ್ ಪಕ್ಷ ಹಲವು ಕಾರಣಗಳಿಂದ ಸಾಕಷ್ಟು ಬೇಸರಗೊಳಿಸಿತು ಎಂದರು.
ಟಿಕೆಟ್ ಬಗ್ಗೆ ಗೊಂದಲ;
ಕ್ಷೇತ್ರದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಸರಿ ಇರಲಿಲ್ಲ. ಆದರೂ ಸಹ ನಾನು ಅತ್ಯಂತ ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೆ. ತಾಲೂಕಿನಲ್ಲಿ ಪಕ್ಷವನ್ನು ಚಿಗುರು ಹೊಡೆಸುವಲ್ಲಿ ಯಶಸ್ವಿಗೊಂಡಿದ್ದೆ. ಆದರೆ, ನನಗೆ ಟಿಕೆಟ್ ನೀಡಲು ಅವರಲ್ಲೇ ಸಾಕಷ್ಟು ಗೊಂದಲ ಮೂಡಿತ್ತು. ಟಿಕೆಟ್ ಅಕಾಂಕ್ಷಿಗಳೇ ಇಲ್ಲದ ತಾಲೂಕಿನಲ್ಲಿ ಇನ್ನಷ್ಟು ಆಕಾಂಕ್ಷಿಗಳನ್ನು ಹುಟ್ಟು ಹಾಕಲಾಯಿತು. ಯಾವುದೇ ಕಾರಣ ಇಲ್ಲದಿದ್ದರೂ ನನಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಗದಿರುವುದು ಯಾತಕ್ಕಾಗಿ ಎಂಬ ನನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಈ ಬಗ್ಗೆ ವರಿಷ್ಠರಾದ ಡಿ.ಕೆ.ಸಹೋದರರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಹ ನನ್ನ ದೂರವಾಣಿ ಕರೆ ಯಾರು ಸ್ವೀಕರಿಸಿಲ್ಲ. ಇದು ನನ್ನನ್ನು ಮಾನಸಿಕವಾಗಿ ಘಾಸಿಗೊಳಿಸಿತು ಎಂದು ಬೇಸರವ್ಯಕ್ತಪಡಿಸಿದರು.
ಯೋಗೇಶ್ವರ್ ಹೆಸರು?
ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆಯಾಗದಿರುವುದು ಒಂದೆಡೆಯಾದರೆ, ಬಿಜೆಪಿ ನಾಯಕರಾದ ಯೋಗೇಶ್ವರ್ ರವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಸಾಕಷ್ಟು ಚಾಲ್ತಿಗೆ ಬಂದಿತ್ತು. ಚುನಾವಣೆಯಲ್ಲಿ ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ರವರನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿದ್ದ ನನಗೆ ಸಾಕಷ್ಟು ಇರಿಸುಮುರಿಸು ಮೂಡಿಸಿತ್ತು. ಇದರ ಮಧ್ಯೆ ಕಾಂಗ್ರೆಸ್ ಸ್ಥಳೀಯ ಮುಖಂಡರ ಅಸಹಕಾರ, ಕಾಲೆಳೆಯುವಿಕೆ ಸೇರಿದಂತೆ ಅನೇಕ ಕಾರಣಗಳಿಂದ ಬೇಸತ್ತು ಮೈಸೂರಿನ ಚಾಮುಂಡೇಶ್ವರಿ ಸನ್ನಿದ್ದಿಯಲ್ಲಿ ಕುಮಾರಣ್ಣನ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದೆ ಎಂದರು.
ತಾಲೂಕು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ನಾನು ಕ್ಷೇತ್ರಕ್ಕೆ ಬಂದಿದ್ದು ಪಕ್ಷವನ್ನು ಗೆಲ್ಲಿಸುವ ಕಾರಣಕ್ಕೆ. ಆದರೆ, ಸ್ಥಳೀಯ ನಾಯಕರಲ್ಲಿ ಆ ಭಾವನೆ ಇಲ್ಲ. ನಾನು ಪಕ್ಷವನ್ನು ಬೆಳೆಸಲು ಸಾಕಷ್ಟು ಶ್ರಮ ಹಾಕುತ್ತಿದ್ದರೂ ಸಹ ಸ್ಥಳೀಯ ಮುಖಂಡರು ಸಹಕಾರ ನೀಡಲಿಲ್ಲ. ಪಕ್ಷದ ಜಿಲ್ಲಾಧ್ಯಕ್ಷರಾದ ಗಂಗಾಧರ್, ನನಗೆ ಅರಿವಿಲ್ಲದೇ ಹಲವರಿಗೆ ಪದಾಧಿಕಾರಿಗಳ ಹುದ್ದೆ ನೀಡಿದರು. ಈ ನಡುವೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಸಹ ಅಭ್ಯರ್ಥಿಗೆ ನೀಡಬೇಕಾದ ಗೌರವ ನೀಡಲಿಲ್ಲ. ಜನರ ಸೇವೆಗಾಗಿ ಕ್ಷೇತ್ರದ ಅಭ್ಯರ್ಥಿಯಾಗಲು ಬಂದ ನನ್ನನ್ನು ನಮ್ಮವರೇ ಸೋಲಿಸುತ್ತಾರೆ ಎಂಬ ಭೀತಿ ಎದುರಾಯಿತು. ಈ ಎಲ್ಲಾ ಕಾರಣಗಳಿಂದ ಇವರ ಗೊಡವೆಯೇ ಬೇಡ ಎಂದು ಪಕ್ಷ ತೊರೆದೆ ಎಂದರು.
ಕುಮಾರಣ್ಣ ಮತ್ತೊಮ್ಮೆ ಮುಖ್ಯಮಂತ್ರಿ ಯಾಗುವುದು ಖಚಿತ. ಅವರ ಕೈಗೆ ಬಲಪಡಿಸುವ ಉದ್ದೇಶದಿಂದ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಾನು ಜೆಡಿಎಸ್ ಸೇರ್ಪಡೆಯಾಗಿದ್ದೇನೆ.ಯಾವುದೇ ಕಾರಣಕ್ಕೂ ಈ ಪಕ್ಷ ಬಿಟ್ಟು ಹೋಗಲ್ಲ. ಕುಮಾರಣ್ಣನವರ ಜೊತೆ ನನ್ನ ಮುಂದಿನ ರಾಜಕೀಯದ ಜೀವನ ಕಳೆಯುತ್ತೇನೆ ಎಂದರು.
ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ನಗರಾಧ್ಯಕ್ಷ ಅಜಯ್ ಕುಮಾರ್, ಮುಖಂಡರಾದ ಹಾಪ್ ಕಾಮ್ಸ್ ದೇವರಾಜು, ಎಂ.ಸಿ.ಕರಿಯಪ್ಪ, ಕುಕ್ಕುರುದೊಡ್ಡಿ ಜಯರಾಂ, ಗೋವಿಂದನಹಳ್ಳಿ ನಾಗರಾಜು, ಬೈ ಶ್ರೀನಿವಾಸ್, ಪ್ರಧಾನ್ ರಾಜು, ಮೈಲನಾಯಕ್ಕನಹಳ್ಳಿ ಜಗದೀಶ್ ಸೇರಿದಂತೆ ಹಲವರು ಇದ್ದರು