ಸಾಮಾನ್ಯ ಶಾಸಕನಾಗಿ ಕೆಲಸ ಮಾಡುತ್ತೇನೆ: ಎಚ್ಡಿಕೆ

H D Kumaraswamy
Published on

ಚನ್ನಪಟ್ಟಣ:

ನನಗೆ ಯಾವ ರಾಷ್ಟ್ರ ರಾಜಕಾರಣದ ಒಲವಿಲ್ಲ.
ಕೇಂದ್ರದಲ್ಲಿ ಮಂತ್ರಿ ಮಾಡುವ ವಿಚಾರವೂ ಗೊತ್ತಿಲ್ಲ..,

ಯಾವ ವಿರೋಧ ಪಕ್ಷದ ಸ್ಥಾನವೂ ಬೇಕಿಲ್ಲ…,
ಒಬ್ಬ ಸಾಮಾನ್ಯ ವಿಧಾನಸಭಾ ಸದಸ್ಯನಾಗಿ ರಾಜ್ಯದ ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ಗ್ರಾಮದಲ್ಲಿ ಸೋಮವಾರ ಗ್ರಾಪಂ ಸಂಜೀವಿನಿ ಭವನ ಹಾಗೂ ಸರ್ಕಾರಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್.ಡಿ.ಎ ಜೊತೆಗೆ ಜೆಡಿಎಸ್ ಮೈತ್ರಿ ವಿಚಾರಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು. ಮೈತ್ರಿ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಮಾಧ್ಯಮಗಳ ಚರ್ಚೆಯನ್ನ ನಾನು ನೋಡ್ತಿದ್ದೇನೆ.ನಾನು ದೆಹಲಿಗೆ ಹೋಗ್ತಿದ್ದೇನೆ ಎಂಬ ಸುದ್ದಿ ಯಾಕೆ ಚರ್ಚೆ ಆಗ್ತಿದೆ ಗೊತ್ತಿಲ್ಲ ಎಂದರು‌.

ನನಗೆ ಮಹಾಘಟಬಂಧನದ ಆಹ್ವಾನವೂ ಇಲ್ಲ, ಎನ್.ಡಿ.ಎ ಆಹ್ವಾನವೂ ಇಲ್ಲ. ಆಹ್ವಾನ ಬಂದಾಗ ಅದನ್ನ ನೋಡೊಣ. ಆಹ್ವಾನ ಬಂದ್ರೆ ಏನ್ಮಾಡಬೇಕು ಅಂತ ಕೂತು ತೀರ್ಮಾನ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.

ವಿಪಕ್ಷ ನಾಯಕನ ಸ್ಥಾನಮಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾಡಿನ ಜನತೆ ನನನ್ನ ಸ್ಥಾನಮಾನದಿಂದ ಗುರುತಿಸಿಲ್ಲ. ನಾನು ಎಲ್ಲೇ ಹೋದರೂ ನನ್ನ ವೈಯಕ್ತಿಕ ವರ್ಚಸ್ಸಿನಿಂದ ಗುರುತಿಸ್ತಾರೆ.ಆ ಸ್ಥಾನಮಾನಗಳಿಂದ ವರ್ಚಸ್ಸು ಗಳಿಸಬೇಕಿಲ್ಲ. ನಾನೂ ಈಗಲೂ ಬಿಜೆಪಿ ನಾಯಕರಲ್ಲಿ ಮನವಿ ಮಾಡ್ತೇನೆ. 65ಮಂದಿ ಗೆದ್ದಿದ್ದಾರೆ, ಹಲವು ಹಿರಿಯ ನಾಯಕರಿದ್ದಾರೆ. ಒಬ್ಬ ಸಮರ್ಥ ನಾಯಕನ್ನ ವಿಪಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ. ದೆಹಲಿಯ ನಾಯಕರಿಗೂ ಈ ವಿಚಾರದಲ್ಲಿ ಕಾಲಹರಣ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದರು.

ಮೈತ್ರಿ, ವಿಪಕ್ಷ ಸ್ಥಾನ ಸೇರಿದಂತೆ ನಮ್ಮ ಪಕ್ಷದಿಂದ ಯಾವುದೇ ಡಿಮ್ಯಾಂಡ್ ಇಲ್ಲ, ಮಾತುಕತೆಯೂ ಆಗಿಲ್ಲ, ನಾವು 19 ಸ್ಥಾನ ಗೆದ್ದಿದ್ದೇವೆ, ಬಿಜೆಪಿ 65 ಸ್ಥಾನ ಗೆದ್ದಿದೆ. ಅಲ್ಲಿಯೂ ಮಾಜಿ ಸಿಎಂ ಸೇರಿ ಅನೇಕ ಮಾಜಿ ಮಂತ್ರಿಗಳಿದ್ದಾರೆ. ಹಾಗಾಗಿ, ವಿಪಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಆಯ್ಕೆ ಮಾಡಿಕೊಳ್ಳಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net