

ಶಿಕ್ಷಕರ ಸಮುದಾಯ ಭವನವೂ ಇಲ್ಲ18 ವರ್ಷ ಕಳೆದರೂ ಪ್ರಗತಿ ಕಾಣದ ಕಾರ್ಯ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ತಾಲೂಕಿನ ಶಿಕ್ಷಕರ ಅನುಕೂಲಕ್ಕಾಗಿ ಆರಂಭಗೊಂಡಿದ್ದ ಗುರುಭವನ (ಶಿಕ್ಷಕರ ಸಮುದಾಯ ಭವನ) ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದು ಹಲವಾರು ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಶಿಕ್ಷಕರ ಚಟುವಟಿಕೆಗಳಿಗೆ ಸೂರಿಲ್ಲದಂತಾಗಿದೆ.
ಹೌದು... ನಗರದ ಜಿಕೆಎಂಪಿಎಸ್ ಶಾಲಾ ಆವರಣದಲ್ಲಿ (ಬಿಆರ್‌ಸಿ ಕೇಂದ್ರ) 2005ರಲ್ಲಿ ಸುಸಜ್ಜಿತ ಶಿಕ್ಷಕರ ಸಮುದಾಯ ಭವನಕ್ಕೆ ಅಂದು ಶಾಸಕರಾಗಿದ್ದ ಸಿ.ಪಿ. ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ಶಂಕುಸ್ಥಾಪನೆ ನೇರವೇರಿಸಲಾಗಿತ್ತು. ಅದಾಗಲೇ ಗುರುಭವನ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ಶಿಕ್ಷಕರ ಸಮುದಾಯ ಭವನದ ಹೆಸರಿನಲ್ಲಿ ಬೃಹತ್ ಕಟ್ಟಡ ನಿರ್ಮಾಣ ಮಾಡಲು ಮುಂದಡಿ ಇಡಲಾಯಿತು. ಆದರೆ, 18 ವರ್ಷ ಕಳೆದರೂ ಈ ಭವನ ನಿರ್ಮಾಣದ ಕಾರ್ಯ ಸ್ವಲ್ಪವೂ ಪ್ರಗತಿ ಕಾಣದಿರುವುದು ಭವನ ತಾಲೂಕಿನ ಶಿಕ್ಷಕರಿಗೆ ಗಗನ ಕುಸುಮದಂತಾಗಿದೆ.
ಉದ್ದೇಶಿತ ಶಿಕ್ಷಕರ ಸಮುದಾಯ ಭವನದ ಪಕ್ಕದಲ್ಲಿ ಈ ಹಿಂದೆ ಸುಸಜ್ಜಿತ ಗುರುಭವನ ನಿರ್ಮಾಣವಾಗಿತ್ತು. ತಾಲೂಕಿನ ಶಿಕ್ಷಕ ಸಮುದಾಯ ತಾವೇ ಸ್ವತಃ ಹಣ ಹೊಂದಿಸಿಕೊಂಡು ಉತ್ತಮ ಭವನ ನಿರ್ಮಿಸಿಕೊಂಡಿದ್ದರು. ಈ ಭವನ ಕೇವಲ ಶಿಕ್ಷಕರ ಚಟುವಟಿಕೆ ಸಿಮೀತವಾಗದೇ, ಭವನದಲ್ಲಿ ಮದುವೆ ಹಾಗೂ ಶುಭ ಸಮಾರಂಭಗಳೂ ನಡೆಯುತ್ತಿದ್ದವು. ಜಿಲ್ಲೆಯ ಅತ್ಯುತ್ತಮ ಗುರುಭವನ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿತ್ತು.
ಆದರೆ, ಕಾಲಕ್ರಮೇಣ ಸೂಕ್ತ ನಿರ್ವಹಣೆ ಕೊರತೆ ಹಾಗೂ ಕಿಡಿಗೇಡಿಗಳ ಹುಚ್ಚಾಟದಿಂದ ಈ ಭವನ ಶಿಥಿಲಾವಸ್ಥೆ ತಲುಪಿತು. ತದನಂತರ ಇದಕ್ಕೆ ಪರ್ಯಾಯವಾಗಿ ಆರಂಭಗೊಂಡಿದ್ದೇ ಶಿಕ್ಷಕರ ಸಮುದಾಯ ಭವನ. ಆದರೆ, ಸುಮಾರು ಎರಡು ದಶಕಗಳಿಂದ ಯಾವ ಭವನವೂ ಇಲ್ಲದೇ ಶಿಕ್ಷಕ ಸಮುದಾಯ ತಮ್ಮ ಚಟುವಟಿಕೆಗಳನ್ನು ನಡೆಸಲು ನೆಲೆ ಇಲ್ಲದಂಥ ಸ್ಥಿತಿ ಅನುಭವಿಸುತ್ತಿದೆ. ವರ್ಷಕೊಮ್ಮೆ ನಡೆಸುವ ಶಿಕ್ಷಕರ ದಿನಾಚರಣೆಯನ್ನು ಖಾಸಗಿ ಕಲ್ಯಾಣಮಂಟಪದಲ್ಲಿ ಆಚರಿಸುವ ಅನಿವಾರ್ಯತೆ ಉಂಟಾಗಿದೆ.
ಹಳೆಯ ಗುರುಭವನ ಶಿಥಿಲಾವಸ್ಥೆ ತಲುಪಿದ ಕಾರಣ ಆರಂಭಗೊಂಡ ಈ ನೂತನ ಭವನ ಕೇವಲ ಅಡಿಪಾಯಕ್ಕೆ ಸೀಮಿತವಾಗಿದ್ದು, ಈ ಅಡಿಪಾಯವೂ ಪ್ರಸ್ತುತ ಕೆಲಸಕ್ಕೆ ಬಾರದ ಸ್ಥಿತಿ ತಲುಪಿದೆ. ಗಿಡಗಂಟಿ, ಪೊದೆಗಳಿಂದ ಆವೃತಗೊಂಡು ಕ್ರೀಮಿಕೀಟಗಳ ವಾಸಸ್ಥಾನವಾಗಿ ಬದಲಾಗಿದೆ. ಈ ಉದ್ದೇಶಿತ ಭವನ ನನೆಗುದಿಗೆ ಬೀಳಲು ಕಾರಣವೇನು? ಅಡಿಪಾಯಕ್ಕೆ ಬಿಡುಗಡೆಯಾದ ಹಾಗೂ ಖರ್ಚಾದ ಮೊತ್ತವೇನು? ಹೀಗೆ ಈ ಭವನಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಶಿಕ್ಷಕರಿಗೆ ಇಲ್ಲವಾಗಿದೆ. ಈ ಹಿಂದಿನ ಗುರುಭವನ ಹಾಗೂ ಉದ್ದೇಶಿತ ಭವನದ ಅಡಿಪಾಯ ಎರಡನ್ನು ನೆಲಸಮಗೊಳಿಸಿ, ಚಿಕ್ಕದಾದರೂ ಸರಿಯೇ ಶಿಕ್ಷಕರಿಗೆ ಒಂದು ಸೂರು ಕಲ್ಪಿಸಲು ಸಂಬಂಧಪಟ್ಟವರು ಮುಂದಾಗಬೇಕಿದೆ.
ಮಾಜಿ ಸಿಎಂ, ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರಂತಹ ಘಟಾನುಘಟಿ ರಾಜಕಾರಣಿಗಳು ಪ್ರತಿನಿಧಿಸುವ ಕ್ಷೇತ್ರ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿರುವ ಚನ್ನಪಟ್ಟಣದಲ್ಲಿ ಗುರುಭವನ ಇಲ್ಲದಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಜನಪ್ರತಿನಿಧಿಗಳು ಈ ಭವನದ ಬಗ್ಗೆ ಆಸ್ಥೆ ವಹಿಸಬೇಕಿದೆ. ಇವರೊಂದಿಗೆ, ಶಿಕ್ಷಕರ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಿರುವ ಮತ್ತೊಮ್ಮೆ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಮೆಟ್ಟಿಲು ಹತ್ತಲು ಉತ್ಸುಕರಾಗಿರುವ ತಾಲೂಕಿನವರೇ ಆದ ಎಂಎಲ್ಸಿ ಪುಟ್ಟಣ್ಣ ಅವರು ತವರೂರಿನ ಶಿಕ್ಷಕರಿಗೆ ಸೂರು ಕಲ್ಪಿಸಿಕೊಡುವ ಮನಸ್ಸು ಮಾಡಬೇಕಿದೆ.
ಶಿಕ್ಷಕರ ಒಗ್ಗಟ್ಟು ಹಾಗೂ ಸಂಘಟನಾ ಕೊರತೆಯಿಂದ ಉದ್ದೇಶಿತ ಶಿಕ್ಷಕರ ಸಮುದಾಯ ಭವನ ನನೆಗುದಿಗೆ ಬೀಳಲು ಕಾರಣವಾಗಿದೆ. ಶಿಕ್ಷಕರು ಒಂದೆಡೆ ಸೇರಲು, ಶಿಕ್ಷಕರ ದಿನಾಚರಣೆ ಸೇರಿ ಸಂಘಟನೆಯ ಚಟುವಟಿಕೆಗಳನ್ನು ನಡೆಸಲು ಎರಡು ದಶಕಗಳಿಂದ ಜಾಗ ಇಲ್ಲದಂತಾಗಿದೆ. ಭವನ ನಿರ್ಮಾಣ ಗಗನಕುಸುಮದಂತೆ ಭಾಸವಾಗುತ್ತಿದೆ.
ವಸಂತಕುಮಾರ್, ನಿವೃತ್ತ ಶಿಕ್ಷಕ
---
ಈ ಹಿಂದೆ ಇದ್ದ ಗುರುಭವನ ಶಿಥಿಲಾವಸ್ಥೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ಆರಂಭಗೊಂಡಿದ್ದ ಶಿಕ್ಷಕರ ಸಮುದಾಯ ಭವನಕ್ಕೆ ಶಂಕುಸ್ಥಾಪನೆಯಾಗಿ 18 ವರ್ಷ ಕಳೆದರೂ ಯಾವುದೇ ಪ್ರಗತಿಯಾಗಿಲ್ಲ. ಹಾಕಿರುವ ಅಡಿಪಾಯವೂ ಹಾಳಾಗಿದೆ. ತಾಲೂಕಿನಲ್ಲಿ ಶಿಕ್ಷಕರ ಭವನ ಇಲ್ಲ ಎಂಬುದು ಎಲ್ಲ ಶಿಕ್ಷಕರ ಕೊರಗಾಗಿದೆ. ದಯವಿಟ್ಟು ಸಂಬಂಧಿಸಿದವರು ಈ ಕೊರಗನ್ನು ನಿವಾರಿಸಿಕೊಡಬೇಕು.
ಎಂ.ಟಿ. ಕೃಷ್ಣಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ