ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಶತಚಂಡಿಕಾ ಮಹಾಯಾಗ

20230710_110155
Published on
ಚನ್ನಪಟ್ಟಣ: 
ಭೀಮನ ಅಮಾವಾಸ್ಯೆ ಪ್ರಯುಕ್ತ, ವಿಶ್ವಶಾಂತಿ, ಲೋಕಕಲ್ಯಾಣ ಹಾಗೂ ಸಮಸ್ತ ಭಕ್ತರ ಸಕಲ ಸಂಕಷ್ಟ ನಿವಾರಣೆಯ ಉದ್ದೇಶದಿಂದ  ಗೌಡಗೆರೆ ಗ್ರಾಮದ  ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಜು.11 ರ ಮಂಗಳವಾರದಿಂದ 7 ದಿನಗಳ ಕಾಲ ತಂತ್ರಭಾಗ-ಶತಚಂಡಿಕಾ ಮಹಾಯಾಗ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ಮಲ್ಲೇಶ್ ಗುರೂಜಿ ತಿಳಿಸಿದರು.
ಕ್ಷೇತ್ರದಲ್ಲಿ ಏಳು ದಿನಗಳ ಕಾಲ ತಂತ್ರಭಾಗ-ಶತಚಂಡಿಕಾ ಮಹಾಯಾಗ ನಡೆಯಲಿದೆ. ತುಂಬ ಅಪರೂಪವಾದ ಈ ಮಹಾಯಾಗದಲ್ಲಿ ದಶಮಹಾವಿದ್ಯಾ ಚಕ್ರ, ವಿಶ್ವಭೂಮಂಡಲ ಚಕ್ರ, ನಾಗಮಂಡಲ ಪೂಜೆ ಸೇರಿದಂತೆ ವಿಶೇಷ ಪೂಜೆಗಳು ನಡೆಯಲಿವೆ. ಶ್ರೀಕ್ಷೇತದಲ್ಲಿ ಇದೇ ಮೊದಲ ಬಾರಿ ಇಷ್ಟು ದೊಡ್ಡಮಟ್ಟದ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮಹಾಯಾಗಕ್ಕಾಗಿ ಶ್ರೀಕ್ಷೇತ್ರದ ಆವರಣದಲ್ಲಿ 11 ಹೋಮಕುಂಡಗಳನ್ನು ಸ್ಥಾಪಿಸಲಾಗಿದೆ. ಪ್ರತಿನಿತ್ಯ 108 ಹೋಮ, 7ಲಕ್ಷ ಬೀಜಾಕ್ಷರ, 7ಲಕ್ಷ ಮಂತ್ರಗಳನ್ನು ಪಠಿಸಲಾಗುವುದು. ಯಾಗಕ್ಕೆ ಸಾಕಷ್ಟು ಗಿಡಮೂಲಿಕೆಗಳನ್ನು ಸಮರ್ಪಿಸಲಾಗುತ್ತಿದೆ. ಏಳುದಿನಗಳ ನಡೆಯಲಿರುವ ಈ ಯಾಗವನ್ನು ವಿಧಿವತ್ತಾಗಿ ನಡೆಸಲು ಉದ್ದೇಶಿಸಲಾಗಿದೆ. ಭಕ್ತಾಧಿಗಳಿಗೂ ಯಾಗದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಏಳು ದಿನಗಳ ಕಾಲವೂ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೂ ಯಾಗದ ಕಾರ್ಯಕ್ರಮ ನಡೆಯಲಿದೆ ಎಂದರು.
ಅಘೋರಿಗಳು ಭಾಗಿ:
ಜು.17ರ ಭೀಮನ ಅಮಾವಾಸ್ಯೆಯಂದು ಹಾಲರವಿ, ರಥೋತ್ಸವ ಹಾಗೂ ಪೂರ್ಣಾಹುತಿ ಕಾರ್ಯಕ್ರಮ ನಡೆಯಲಿದೆ. ಆ ದಿನ ಅಘೋರಿಗಳ ನೇತೃತ್ವದಲ್ಲಿ ಯಾಗಕ್ಕೆ ಪೂರ್ಣಾಹುತಿ ನಡೆಯಲಿದ್ದು, ಇದಕ್ಕಾಗಿ ಕೇದಾರನಾಥ, ಬದಿರಿನಾಥ, ಉತ್ತರಪ್ರದೇಶದಿಂದ ಸುಮಾರು 40 ಅಘೋರಿಗಳು ಆಗಮಿಸಲಿದ್ದಾರೆ. ಅವರ ಮುಂದಾಳತ್ವದಲ್ಲೇ ಅಂದಿನ ಎಲ್ಲ ಪೂಜಾವಿಧಿಗಳು ಜರುಗಲಿವೆ. ಇದಲ್ಲದೇ, ಶ್ರೀಕ್ಷೇತ್ರದಲ್ಲಿ ನಡೆಯಲಿರುವ ಮಹಾಯಾಗದಲ್ಲಿ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಜು.೧4ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ೧5ರಂದು ಮಾಜಿ ಸಚಿವ ಅಶ್ವತ್ಥನಾರಾಯಣ, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ೧7ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಮಂತ್ರಿ ಪರಮೇಶ್ವರ್ ಭಾಗವಹಿಸಲಿದ್ದಾರೆ. ಇವರಷ್ಟೇ ಅಲ್ಲದೇ ವಿವಿಧ ಸರ್ಕಾರಿ ಅಧಿಕಾರಿಗಳು, ಸೇರಿದಂತೆ ಹಲವು ಗಣ್ಯರು ಸಹ ಏಳುದಿನಗಳಲ್ಲಿ ಒಂದು ದಿನ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
೨೦೨೧ರಲ್ಲಿ ಶ್ರೀ ಕ್ಷೇತ್ರದಲ್ಲಿ ೬೮ಅಡಿ ಎತ್ತರದ ಬೃಹತ್ ಪಂಚಲೋಹದ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪಿಸಲಾಯಿತು. ೨೦೨೨ರಲ್ಲಿ ಪ್ರಥಮ ಬಾರಿಗೆ ಹಿಂದೂ ದೇವತೆಗೆ ಮಹಾಮಸ್ತಾಭಿಷೇಕ ನಡೆಸಲಾಯಿತು. ಅದೇ ರೀತಿ ಈ ಬಾರಿಯ ಭೀಮನ ಅಮಾವಾಸ್ಯೆ ಪ್ರಯುಕ್ತ ಏನು ಮಾಡುವುದು ಎಂದು ಯೋಚಿಸಿದಾಗ ತಂತ್ರಭಾಗ-ಶತಚಂಡಿಕಾ ಮಹಾಯಾಗ ಮಾಡುವ ಆಲೋಚನೆ ಬಂತು. ಈ ಕುರಿತು ಅಘೋರಿಗಳೊಂದಿಗೆ ಚರ್ಚಿಸಿದಾಗ ಅವರು ಯಾವ ರೀತಿ ಮಾಡಬೇಕೆಂಬ ಸಲಹೆಗಳನ್ನು ನೀಡಿದರು. ಅವರ ಸಲಹೆಗಳನ್ನು ಆಧರಿಸಿ ಯಾಗ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಕಲ ಸಿದ್ಧತೆ: 
ಮಹಾಯಾಗಕ್ಕಾಗಿ ಈಗಾಗಲೇ ಕ್ಷೇತ್ರದಲ್ಲಿ ಸಕಲ ಸಿದ್ದೆತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿನಿತ್ಯ ಸುಮಾರು ೧೦ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಯಾಗವನ್ನು ಕಣ್ತುಂಬಿಕೊಳ್ಳು ಆಗಮಿಸುವ ಸಕಲ ಭಕ್ತರ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದೆ. ದಿನದ 24ಗಂಟೆಯೂ ದಾಸೋಹ ನಡೆಯಲಿದೆ. ಇದಲ್ಲದೇ ನೀರು ಮತ್ತಿತರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಜತೆಗೆ ಶ್ರೀಕ್ಷೇತ್ರದಲ್ಲೇ ಉಳಿದುಕೊಳ್ಳಲು ಇಚ್ಛಿಸುವವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ೧೫೦೦ ಮಂದಿ ಉಳಿದುಕೊಳ್ಳುವಂತ ವ್ಯವಸ್ಥೆ ಮಾಡಲಾಗಿದೆ.
ವಿಶ್ವಶಾಂತಿ, ಲೋಕಕಲ್ಯಾಣಾರ್ಥ ಹಾಗೂ ಸಮಸ್ತ ಭಕ್ತರ ಸಕಲ ಸಂಕಷ್ಟ ನಿವಾರಣೆಯ ಉದೇಶದಿಂದ ಕ್ಷೇತ್ರದಲ್ಲಿ ತಂತ್ರಭಾಗ-ಶತಚಂಡಿಕಾ ಮಹಾಯಾಗ ಮಾಡಲಾಗುತ್ತದೆ. ಈ ಯಾಗ ಮಾಡುವುದರಿಂದ ಉತ್ತಮ ಮಳೆ ಬೆಳೆಯಾಗಿ, ದೇಶ ಸುಭಿಕ್ಷವಾಗುತ್ತದೆ. ಯಾಗದಲ್ಲಿ ಭಾಗಿಯಾದ ಭಕ್ತರ ಸಂಕಷ್ಟಗಳು ನಿವಾರಣೆಯಾಗಲಿದ್ದು, ಜೀವನದಲ್ಲಿ ಒಳ್ಳೆಯ ಕಾರ್ಯಗಳು ನಡೆಯಲಿವೆ. ಆದ್ದರಿಂದ ಈ ಯಾಗದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
- ಡಾ.ಮಲ್ಲೇಶ್ ಗುರೂಜೀ, ಕ್ಷೇತ್ರದ ಧರ್ಮದರ್ಶಿಗಳು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net